ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡದಿದ್ದರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ
ರೈತರು ಸಾಲ ಮಾಡಿಕೊಂಡು ಸಂಕಷ್ಟದಲ್ಲಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾಗುವುದು. ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ ಐದು ವರ್ಷ ಅವಧಿ ಅಧಿಕಾರ ನೀಡಿದರೆ ರೈತರಿಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.
ವಿಜಯಪುರ(ಜ.19): ಜೆಡಿಎಸ್ ಪಕ್ಷ ರೈತರಿಗೆ ಸಾಲ ಮುಕ್ತರನ್ನಾಗಿ ಮಾಡಲು ಒಳ್ಳೆಯ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ಹೇಳಿದರು.
ಬುಧವಾರ ಮೂರನೇ ಹಂತದ ಪಂಚರತ್ನ ರಥ ಯಾತ್ರೆ ಅಂಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸಾಲ ಮಾಡಿಕೊಂಡು ಸಂಕಷ್ಟದಲ್ಲಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾಗುವುದು. ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿ ಐದು ವರ್ಷ ಅವಧಿ ಅಧಿಕಾರ ನೀಡಿದರೆ ರೈತರಿಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಒಂದೊಮ್ಮೆ ಜೆಡಿಎಸ್‌ನಿಂದ ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡದಿದ್ದರೆ 2028ರಲ್ಲಿ ಪಕ್ಷವನ್ನೇ ವಿಸರ್ಜಿಸುತ್ತೇನೆ. ಮುಂದೆ ನಿಮ್ಮ ಬಳಿ ಮತ ಕೇಳಲು ಬರುವುದಿಲ್ಲ ಎಂದು ಕುಮಾರಸ್ವಾಮಿ ಅವರು ಭಾವುಕರಾದರು.
ಅಧಿಕಾರ ನೀಡಿದರೆ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಎಚ್‌ಡಿಕೆ
ಸಿಂದಗಿಯಲ್ಲಿ ಜನರು ದೇವೇಗೌಡರು ನೀಡಿದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೇಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ನಾನು ಮರೆತಿಲ್ಲ. ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.