ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ: ಪ್ರತಾಪ್ ಸಿಂಹ ವಿರುದ್ಧ ಎಚ್‌ಡಿಕೆ ಕಿಡಿ
ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು. ಪ್ರತಾಪ್ ಸಿಂಹ ಅವರೇ ಹೈವೆಗೆ ಬಂದಿದ್ರೆ ಸ್ವಿಮ್ ಮಾಡ್ಲಿಕ್ಕೆ ಚನ್ನಾಗಿ ನೀರು ನಿಂತಿತ್ತು: ಕುಮಾರಸ್ವಾಮಿ
ಬೆಂಗಳೂರು(ಆ.30): ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉತ್ತಮವಾದ ಕೆಲಸ ಏನಾಗಿದೆ ಅಂತ ಬಂದು ನೋಡೋದಕ್ಕೆ ಹೇಳಿ, ಇವರೇ ನಿಂತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದಾರೆ. ಇವರೇ ರಸ್ತೆ ನಿರ್ಮಾಣ ಮಾಡಿರೋ ರೀತಿ ಫೋಟೋ ತೆಗೆಸಿಕೊಂಡಿದ್ದಾರೆ ಅಂತ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೈವೇ ಕೆಲಸ ಉತ್ತಮವಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೆಚ್. ಡಿ. ಕುಮಾರಸ್ವಾಮಿ, ಬಿಡದಿ ಹತ್ತಿರ ಬಂದು ಅಧಿಕಾರಿಗಳ ಸಭೆ ಮಾಡಿದ್ದಾರೆ. ಇಲ್ಲಿ ಬಂದು ಮಧ್ಯಸ್ಥಿಕೆ ವಹಿಸಿದ್ದಾರೆ. ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು. ಅವರೇ ಹೈವೆಗೆ ಬಂದಿದ್ರೆ ಸ್ವಿಮ್ ಮಾಡ್ಲಿಕ್ಕೆ ಚನ್ನಾಗಿ ನೀರು ನಿಂತಿತ್ತು, ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಆಗ್ತಿದೆ. ಕಣ್ಣಿದ್ರೆ ಬಂದು ನೋಡೋದಕ್ಕೆ ಹೇಳಿ ಅಂತ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಪ್ರವಾಹದ ಭೀತಿ: ಕೆರೆಯಂತಾದ ಬೆಂಗಳೂರು-ಮೈಸೂರು ಹೆದ್ದಾರಿ
ಕೆರೆ ಒಡೆದಿರೋದರಿಂದ ರಾಮನಗರದಲ್ಲಿ ಈ ರೀತಿ ಆಗಿರೋದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೆಟ್ ಕೊಡಕ್ಕಲ್ಲ ಇರೋದು ಇವರು ತಪ್ಪಾಗಿದ್ರೆ ಸರಿಪಡಿಸಬೇಕು. ಕೆರೆ ಒಡೆದೋಯ್ತು ಅಂತಾ ಹೇಳೋದಕ್ಕಲ್ಲ. ಪಬ್ಲಿಸಿಟಿ ತಗೊಳೋದು ನಿಲ್ಲಿಸಿ, ಜನರ ಕೆಲಸ ಮಾಡಿ ಅಂತ ಪ್ರತಾಪ್ ಸಿಂಹಗೆ ಹೆಚ್. ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.