Asianet Suvarna News Asianet Suvarna News

ದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊಯ್ಲಿ ಬಿಡಲಿ: ಎಚ್.ಡಿ.ಕುಮಾರಸ್ವಾಮಿ

ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 

Former CM HD Kumaraswamy Slams On Veerappa Moily Aty Hassan gvd
Author
First Published Sep 14, 2023, 9:03 PM IST

ಹಾಸನ (ಸೆ.14): ಕಾಂಗ್ರೆಸ್ ಪಕ್ಷವು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28 ಕ್ಕೆ 28 ಸೀಟು ಮೈತ್ರಿ ಪಕ್ಷ ಗೆಲ್ಲಲಿದ್ದು, ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಶ್ರೀ ಆದಿಚುಂಚನಗಿರಿ ಇಂಗ್ಲಿಷ್ ಹೈಸ್ಕೂಲ್ ಮೈದಾನದಲ್ಲಿ  ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊದಲು ವೀರಪ್ಪ ಮೊಯ್ಲಿ ಬಿಡಲಿ. 

ದೇವೇಗೌಡರು ಕಾನೂನು ಚೌಕಟ್ಟನ್ನು ಪಾಲಿಸಿ ಕಾವೇರಿ ನದಿ ನೀರು ಉಳಿಸಲು ಹೋರಾಟ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಮಹಾನ್ ಸುಳ್ಳುಗಾರ. ಸುಳ್ಳು ಹೇಳಿಕೊಂಡು ತಿರುಗುವ ಬದಲು ಕಾವೇರಿ ನದಿ ನೀರಾವರಿ ವೇದಿಕೆಯಲ್ಲಿ ಮಾತನಾಡಲಿ. ಎರಡು ವರ್ಷ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಸಾಧನೆ ನಿಮ್ಮ ಶಾಸಕರು ವಿಧಾನಸೌಧದಲ್ಲಿ ಓಡಿಸಿಕೊಂಡು ಬಂದಿದ್ದು. ನೀರಾವರಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಸವಾಲು ಎಸೆದರು. ಜೆಡಿಎಸ್ ಪಕ್ಷವು ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೂ ನೀರು ಬಿಡದಂತೆ ಬೆಂಬಲಿಸುತ್ತೇವೆ ಎಂದರು. ತಮಿಳುನಾಡು ಸದ್ಯದ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸುಪ್ರೀಂ ಕೋರ್ಟ್‌ಗೆ ವಸ್ತು ಪರಿಸ್ಥಿತಿ ತಿಳಿಸಲಿ. 

ಎತ್ತಿನಹೊಳೆ ಕಾಮಗಾರಿಯಿಂದ ಮನೆಗಳಲ್ಲಿ ಬಿರುಕು: ಶಾಸಕ ರೇವಣ್ಣ ಕಿಡಿ

ಎಸ್.ಎಂ. ಕೃಷ್ಣರವರಿಗೆ ಅಧಿಕಾರ ನೀಡಿದ್ದಿರಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದ್ದಿರಿ. ನನಗೆ ಪೇಪರ್, ಪೆನ್ನು ಕೊಡಿ ಅಂದ ವ್ಯಕ್ತಿ ಅಧಿಕಾರ ಪಡೆದುಕೊಂಡಿರುವುದು ತಮಿಳುನಾಡಿಗೆ ನೀರು ಬಿಡುವುದಕ್ಕಲ್ಲ ಎಂದು ಗರಂ ಆಗಿ ಮಾತನಾಡಿದರು. ಜೆಡಿಎಸ್ - ಬಿಜೆಪಿ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯದಲ್ಲೇ ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತೇವೆ. ಸಿದ್ದರಾಮಯ್ಯ 2004ರಲ್ಲಿ ನಾನು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಯಾವ್ಯಾವ ಬಿಜೆಪಿ ನಾಯಕನ ಸಂಪರ್ಕ ಮಾಡಿದ್ದೀರಿ ಎನ್ನುವುದು ಗೊತ್ತಿದೆ. 

ಸಿದ್ದರಾಮಯ್ಯ, ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಲು ಹೋಗಿದ್ದವರು ಈಗ ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರೆಂಬ ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಾರೆ ಎಂದರು. ನೀರಾವರಿ ಸಚಿವರು ಎತ್ತಿನಹೊಳೆ ನೊಡಲು ಬಂದಿದ್ದಾರಾ ಅಥವಾ ಈ ಭಾಗದ ಕಾಫಿ ತೋಟ ನೋಡಲು ಬಂದಿದ್ದರೋ ಗೊತ್ತಿಲ್ಲ. ನಮ್ಮ ಹೋರಾಟ ಒಂದು ಭಾಗ ಕಾಂಗ್ರೆಸ್ ವಿರುದ್ಧ, ಇನ್ನೊಂದು ಹೋರಾಟ ಬಿಜೆಪಿ ಮತ್ತು ಕಾಂಗ್ರೆಸ್. ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮೈತ್ರಿ ಬಗ್ಗೆ ಖುಷಿಯಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಸರ್ಕಾರ ವಿಫಲ: ನನ್ನ ಆರೋಗ್ಯದ ಸಮಸ್ಯೆ ನಂತರ ನಮ್ಮ ಪಕ್ಷದ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಭಾಗವಹಿಸಿದ್ದೇನೆ. ರಾಜ್ಯದ ರೈತರು ಬರಗಾಲದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಬರಗಾಲ ಪೀಡಿತ ಪ್ರದೇಶಗಳ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಾಲಹರಣ ಮಾಡುತ್ತಿದ್ದಾರೆ. ರೈತರು ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ನಾಶವಾಗಿ ಬರಗಾಲದಿಂದ ರೈತರು ತಮ್ಮ ಬೆಳೆ ನಾಶವಾಗಿರುವ ದೃಶ್ಯ ಕಾಣುತ್ತಿದೆ. ಸರ್ಕಾರ ರಾಜ್ಯದ ನೆಲ, ಜಲ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ.

ಆಲಮಟ್ಟಿ ಜಲಾಶಯ ಹೊರತುಪಡಿಸಿ ಯಾವುದೇ ಡ್ಯಾಂ ತುಂಬಿಲ್ಲ. ಮಂಡ್ಯ ಭಾಗದಲ್ಲಿ ಯಾವುದೇ ಬೆಳೆ ಬೆಳೆಯದಂತೆ ಸರ್ಕಾರ ಸೂಚನೆ ನೀಡಿದೆ. ಹಾಸನ ಜಿಲ್ಲೆಯ ಕೆಲವು ಸ್ವಾರ್ಥ ರಾಜಕಾರಣಿಗಳಿಂದ ಹಾಸನ ಜಿಲ್ಲೆಯ ಬೆಳೆ ಬೆಳೆದಿರುವ ರೈತರಿಗೆ ನೀರಿನ ಸಮಸ್ಯೆ ಉಂಟಾಗಿದೆ. ಹೇಮಾವತಿ ಜಲಾಶಯದ ನೀರಾವರಿ ಕಲಾಪ ಸಮಿತಿ ಸಭೆ ಕರೆದಿಲ್ಲ. ನೀರಾವರಿ ಸಮಸ್ಯೆ ಇದೆ ಎಂದು ಹೇಳಿದರು. ತಮಿಳುನಾಡು ಸರ್ಕಾರದವರು ಕುರುವೆ ಬೆಳೆ ಬೆಳೆಯಲು ನೀರಿನ ಕೊರತೆ ಪ್ರತಿ ನಿತ್ಯ 25 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರಾವರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರು. 

ತಮಿಳುನಾಡು ಸರ್ಕಾರದ ೨೫ ಅಧಿಕಾರಿಗಳು ಸಭೆಯಲ್ಲಿ ಪೂರ್ತಿ ದಾಖಲಾತಿ ಹಿಡಿದು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಅಧಿಕಾರಿಗಳು ಸರಿಯಾಗಿ ಸಭೆಗೆ ಭಾಗವಹಿಸಿರಲಿಲ್ಲ. ತಮಿಳುನಾಡು ರಾಜ್ಯದವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ಸಮಯದಲ್ಲಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿರಲಿಲ್ಲ. ನಮ್ಮ ಸಲಹೆ ಮೇರೆಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಮೂರನೇ ಬಾರಿ ಮುಂದಿನ ೧೫ ದಿನಗಳು ೫ ಸಾವಿರ ಕ್ಯುಸೆಕ್ ನೀರು ನೀಡಲು ಸೂಚನೆ ನೀಡುತ್ತದೆ. ತರಾತುರಿಯಲ್ಲಿ ಸರ್ವ ಪಕ್ಷಗಳ ಸಭೆ ಕರೆದರು. ಸಭೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಯಾರು ಭಾಗವಹಿಸಿಲ್ಲ ಎಂದರು.

ಮೊಯ್ಲಿ ವಿರುದ್ಧ ವಾಗ್ದಾಳಿ: ರಾಜ್ಯದ ಮಹಾನ್ ಕವಿ ಕುವೆಂಪು ಕಾದಂಬರಿ ಮೀರಿಸುವ ವ್ಯಕ್ತಿ, ನೆಲಮಂಗಲದಲ್ಲಿ ಭಾಷಣ ಮಾಡುವಾಗ ಹೇಮಾವತಿಯಿಂದ ತುಮಕೂರಿಗೆ ನೀರು ಕೊಟ್ಟವನು ನಾನು. ಯಗಚಿ ಕಾಮಗಾರಿ ಮಾಡಿದ್ದು ನಾನು. ಕಾವೇರಿ ನದಿ ನೀರಿನ ಸಮಸ್ಯೆಗೆ ದೇವೇಗೌಡರು ಕುಟುಂಬ ಕಾರಣ ಎಂದು ಆರೋಪ ಮಾಡಿದ್ದಾರೆ. ನೆಲಮಂಗದಲ್ಲಿ ೩೦೦ ಕೋಟಿ ಹಗರಣ ಮಾಡಿರುವ ವ್ಯಕ್ತಿ ನೆಲಮಂಗಲದಲ್ಲಿ ಶಾಸಕನಾಗಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಲು ನಮ್ಮನ್ನು ಕರೆಯುವ ಬದಲು ವೀರಪ್ಪ ಮೊಯ್ಲಿ ಕರೆದು ಸಭೆ ಮಾಡಲಿ ಎಂದ ಅವರು,

ದೇವೇಗೌಡರು ಜಾತಿ ಕಡೆ ವಾಲಲ್ಲ ಎಂದುಕೊಂಡಿದ್ದೆ: ಶಾಸಕ ಶಿವಲಿಂಗೇಗೌಡ ಬೇಸರ

ಸುಳ್ಳುಗಾರ ವಿರಪ್ಪ ಮೊಯ್ಲಿ ದೇವೇಗೌಡರ ಬಗ್ಗೆ ಕುರಿತು ಹಗುರ ಮಾತನಾಡುತ್ತಾರೆ. 1989ರಲ್ಲಿ ತಮಿಳುನಾಡು ರಾಜ್ಯದ ಮಂತ್ರಿಗಳು ನೀರು ಕೇಳಲು ಬಂದಾಗ ಅವರಿಗೆ ಕಾಂಗ್ರೆಸ್ ಸರ್ಕಾರ ಸರಿಯಾಗಿ ಗೌರವ ನೀಡದ ಕಾರಣ ತಮಿಳುನಾಡು ಅರ್ಜಿ ಹಾಕಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದ ಕಾರಣ ಕಾವೇರಿ ಟ್ರಿಬ್ಯೂನಲ್ ರಚನೆಯಾಗಿದೆ. ದೇವೇಗೌಡರು ಸುಮಾರು ೪೦ ವರ್ಷಗಳಿಂದ ಕಾವೇರಿ ನದಿ ನೀರು ಉಳಿಸಲು ಹೋರಾಟ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಪುನಃ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ೧೪ ಟಿಎಂಸಿ ನೀರು ಕರ್ನಾಟಕ ರಾಜ್ಯದ ಪಾಲಾಗಿದೆ. ಸುಪ್ರೀಂ ಕೋರ್ಟ್ ಅರ್ಜಿ ತೀರ್ಪು ಬರುವವರೆಗೂ ಕಾವೇರಿ ಪ್ರಾಧಿಕಾರದ ಆದೇಶ ಪಾಲಿಸುವಂತೆ ಸೂಚನೆ ನೀಡಿದರು. ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ, ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios