Asianet Suvarna News Asianet Suvarna News

ಸುಮ್ಮನೆ ಪೆನ್‌ಡ್ರೈವ್‌ ತೋರಿಸಬೇಡಿ, ಸಾಕ್ಷಿ ಕೊಡಿ: ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸಚಿವ ಕೆ.ಜೆ.ಜಾರ್ಜ್‌

ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ದಾಖಲೆಗಳಿದ್ದರೆ ನೀಡಿ. ತನಿಖೆ ನಡೆಸಲು ನಾವು ತಯಾರಿದ್ದೇವೆ. ಸುಮ್ಮನೇ ತೇಜೋವಧೆ ಮಾಡುವ ಕೆಲಸ ಮಾಡಬೇಡಿ ಎಂದು ಸಚಿವ ಕೆ.ಜೆ.ಜಾರ್ಜ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಹರಿಹಾಯ್ದರು. 

Former CM HD Kumaraswamy Slams On Minister KJ George gvd
Author
First Published Jul 7, 2023, 11:47 AM IST

ವಿಧಾನಸಭೆ (ಜು.07): ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ದಾಖಲೆಗಳಿದ್ದರೆ ನೀಡಿ. ತನಿಖೆ ನಡೆಸಲು ನಾವು ತಯಾರಿದ್ದೇವೆ. ಸುಮ್ಮನೇ ತೇಜೋವಧೆ ಮಾಡುವ ಕೆಲಸ ಮಾಡಬೇಡಿ ಎಂದು ಸಚಿವ ಕೆ.ಜೆ.ಜಾರ್ಜ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಹರಿಹಾಯ್ದರು. ಕೆಎಸ್ಸಾರ್ಟಿಸಿ ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣದ ಚರ್ಚೆ ವೇಳೆ ಎಚ್‌.ಡಿ. ಕುಮಾರಸ್ವಾಮಿ ಅವರು, ಡಿವೈಎಸ್ಪಿ ಗಣಪತಿ, ಐಎಎಸ್‌ ಅಧಿಕಾರಿ ಡಿ.ಕೆ. ರವಿ, ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಾಗ ಸಂಬಂಧಪಟ್ಟಸಚಿವರು ರಾಜೀನಾಮೆ ನೀಡಿದ್ದರು ಎಂದು ಪ್ರಸ್ತಾಪಿಸಿದರು.

ಅದರಿಂದ ಸಿಟ್ಟಾದ ಕೆ.ಜೆ. ಜಾರ್ಜ್‌, ಡಿವೈಎಸ್ಪಿ ಗಣಪತಿ, ಐಎಎಸ್‌ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ತೇಜೋವಧೆ ಮಾಡಿದಿರಿ. ಆಗ ನಾವು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೆವು. ತನಿಖೆಯಲ್ಲಿ ನನ್ನ ಹಾಗೂ ಸರ್ಕಾರದ ತಪ್ಪಿಲ್ಲ ಎಂದು ವರದಿ ನೀಡಲಾಯಿತು. ಆನಂತರ ಆ ಬಗ್ಗೆ ಮಾತನಾಡಲೇ ಇಲ್ಲ. ಸುಮ್ಮನೆ ಸಚಿವರ ತೇಜೋವಧೆ ಮಾಡುವುದನ್ನು ಬಿಡಿ ಎಂದರು. ಆಗ ಎಚ್‌.ಡಿ.ಕುಮಾರಸ್ವಾಮಿ ಅವರು, ನಿಮ್ಮ ಮತ್ತು ನಿಮ್ಮ ಇಲಾಖೆ ಹಣೆಬರಹ ಗೊತ್ತಿದೆ. 

ಸುಳ್ಳುಸುದ್ದಿ ತಡೆಗೆ ತಲೆಯೆತ್ತಲಿದೆ ಸಿಐಡಿ ಘಟಕ: ಫೇಕ್‌ ನ್ಯೂಸ್‌ ಹಾವಳಿಗೆ ಕಡಿವಾಣ ಹಾಕಲು ಸಿಎಂ ಸೂಚನೆ

ತನಿಖೆ ಮಾಡುವ ತಾಕತ್ತಿದೆಯೇ? ನಾನು ಯಾರ ಹೆಸರನ್ನೂ ಹೇಳಿಲ್ಲ. ಸುಮ್ಮನೆ ನೀವೇಕೆ ಕೂಗಾಡುತ್ತೀರಿ ಎಂದು ತಿಳಿಸಿದರು. ಅದಕ್ಕೆ ಕೆ.ಜೆ. ಜಾರ್ಜ್‌ ಪ್ರತಿಕ್ರಿಯಿಸಿ, ನಮಗೆ ತಾಕತ್ತಿದೆ. ನೀವು ಸಾಕ್ಷಿ ನೀಡಿ. ಸುಮ್ಮನೆ ಪೆನ್‌ಡ್ರೈವ್‌ ಇದೆ ಎಂದೆಲ್ಲ ಹೇಳಬೇಡಿ ಎಂದರು. ಅಲ್ಲದೆ, ಬಿಜೆಪಿ ಕಡೆ ತಿರುಗಿ ನಿಮಗೆ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರನ್ನೇ ವಿರೋಧಪಕ್ಷದ ನಾಯಕನನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದರು.

ಎಚ್ಡಿಕೆ ಆರೋಪಕ್ಕೆ ಜಾರ್ಜ್‌ ತಿರುಗೇಟು: ‘ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ 10 ಕೋಟಿ ರು. ಲಂಚ ನೀಡಲಾಗಿದೆ. ಪೆನ್‌ ಡ್ರೈವ್‌ನಲ್ಲಿ ಈ ಬಗ್ಗೆ ದಾಖಲೆ ಇದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಇಲಾಖೆ ಸಚಿವ ಕೆ.ಜೆ.ಜಾರ್ಜ್‌, ‘ಕುಮಾರಸ್ವಾಮಿ ಹಿಟ್‌ ಅಂಡ್‌ ರನ್‌ ಮಾಡುವುದಲ್ಲ. ಸಾಕ್ಷಿ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಕೋಟಿ ಲಂಚ ಪಡೆದುಕೊಂಡು ವರ್ಗಾವಣೆ ಮಾಡಿದ್ದರೆ ಅದು ದೊಡ್ಡ ಅಪರಾಧವಾಗುತ್ತದೆ. ಆದ್ದರಿಂದ ಕುಮಾರಸ್ವಾಮಿ ಬಳಿ ಲಂಚಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಅದನ್ನು ಬಿಟ್ಟು ಹಿಟ್‌ ಅಂಡ್‌ ರನ್‌ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ

ಯಾರು ಲಂಚ ಪಡೆದಿದ್ದಾರೆ ಎಂಬುದಕ್ಕೆ ದಾಖಲೆ ನೀಡಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರಿಗೆ ಹಣ ನೀಡಿದ್ದಾರೆ ಎಂಬುದನ್ನೂ ಬಹಿರಂಗಪಡಿಸಲಿ. ಲಂಚಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾಧ್ಯಮದವರ ಬಳಿ ಕುಮಾರಸ್ವಾಮಿ ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಅವರನ್ನು ನೀವೇ ಕೇಳಿ ಎಂದು ತಿಳಿಸಿದರು.

Follow Us:
Download App:
  • android
  • ios