ಸುಳ್ಳು ಸುದ್ದಿ ಹರಡುವಿಕೆಗೆ (ಫೇಕ್‌ ನ್ಯೂಸ್‌) ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ‘ಸಾಮಾಜಿಕ ಜಾಲತಾಣಗಳ ಕಣ್ಗಾವಲು ಘಟಕ (ಸೋಷಿಯಲ್‌ ಮೀಡಿಯಾ ಸೆಲ್‌)ಗಳ’ ಸ್ಥಾಪನೆಗೆ ಗೃಹ ಇಲಾಖೆ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ‘ಫೇಕ್‌ ನ್ಯೂಸ್‌ ಫ್ಯಾಕ್ಟರಿ’ ವಿರುದ್ಧ ಖಾಕಿ ಸಮರ ಶುರುವಾಗಲಿದೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಜು.07): ಸುಳ್ಳು ಸುದ್ದಿ ಹರಡುವಿಕೆಗೆ (ಫೇಕ್‌ ನ್ಯೂಸ್‌) ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ‘ಸಾಮಾಜಿಕ ಜಾಲತಾಣಗಳ ಕಣ್ಗಾವಲು ಘಟಕ (ಸೋಷಿಯಲ್‌ ಮೀಡಿಯಾ ಸೆಲ್‌)ಗಳ’ ಸ್ಥಾಪನೆಗೆ ಗೃಹ ಇಲಾಖೆ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ‘ಫೇಕ್‌ ನ್ಯೂಸ್‌ ಫ್ಯಾಕ್ಟರಿ’ ವಿರುದ್ಧ ಖಾಕಿ ಸಮರ ಶುರುವಾಗಲಿದೆ.

ಸಿಐಡಿ ಅಡಿಯಲ್ಲಿ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ನಿಗಾ ಘಟಕ ಕಾರ್ಯನಿರ್ವಹಿಸಲಿದ್ದು, ಎಸ್ಪಿ ದರ್ಜೆ ಅಧಿಕಾರಿ ಘಟಕದ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಸೈಬರ್‌ ತಜ್ಞರು ಸೇರಿದಂತೆ ತಾಂತ್ರಿಕವಾಗಿ ನಿಪುಣ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಅದೇ ರೀತಿ ಕಮೀಷನರೇಟ್‌ ಹಾಗೂ ಜಿಲ್ಲಾ ಎಸ್ಪಿ ಕಚೇರಿಗಳಲ್ಲಿ ಕೂಡಾ ಕಣ್ಗಾವಲು ಘಟಕಗಳ ಆರಂಭಕ್ಕೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೂಚಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅಸ್ವಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸುಳ್ಳು ಸುದ್ದಿ (ಫೇಕ್‌ ನ್ಯೂಸ್‌) ಹಾಗೂ ಕೋಮು ಸಾಮರಸ್ಯ ಧಕ್ಕೆ ತರುವ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಡಿಜಿಪಿ ಅಲೋಕ್‌ ಮೋಹನ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಮುಖ್ಯಮಂತ್ರಿಗಳ ನಿರ್ದೇಶನ ಹಿನ್ನಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲಿಗೆ ಪ್ರತ್ಯೇಕ ಘಟಕ ಸ್ಥಾಪನೆಗೆ ಡಿಜಿಪಿ ಅಲೋಕ್‌ ಮೋಹನ್‌ ನಿರ್ಧರಿಸಿದ್ದಾರೆ. ಈಗಾಗಲೇ ಆಯುಕ್ತರು, ಐಜಿಪಿಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಡಿಜಿಪಿ ಕಚೇರಿಯಿಂದ ಸುತ್ತೋಲೆ ಹೋಗಿದ್ದು, ಕೆಲವೇ ದಿನಗಳಲ್ಲಿ ಫೇಕ್‌ ನ್ಯೂಸ್‌ ಸೃಷ್ಟಿಕರ್ತರ ಮೇಲೆ ಪೊಲೀಸರ ಕಾರ್ಯಾಚರಣೆ ಪ್ರಾರಂಭವಾಗಲಿದೆ.

ಸುಳ್ಳು ಸುದ್ದಿ ಸೃಷ್ಟಿಕರ್ತರಿಗೆ ತನಿಖೆ ಬಿಸಿ: ಫೇಸ್‌ಬುಕ್‌, ಟ್ವೀಟರ್‌, ವಾಟ್ಸಾಪ್‌, ಯೂಟ್ಯೂಬ್‌, ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುದ್ದಿ ಸುಳ್ಳು ಸುದ್ದಿ ಹಬ್ಬಿಸಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಫೇಸ್‌ ನ್ಯೂಸ್‌ ಫ್ಯಾಕ್ಟರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಸರ್ಕಾರವು, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿಗೆ ಕಿಡಿ ಹೊತ್ತಿಸುವವರ ಮೇಲೆ ನಿಗಾಕ್ಕೆ ಪೊಲೀಸರಿಗೆ ಸೂಚಿಸಿದೆ. ಅಂತೆಯೇ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡಲು ಖಾಕಿ ಪಡೆ ಸಿದ್ಧವಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣೀಡುವ ಪೊಲೀಸರು, ಕೋಮುಭಾವನೆ ಕೆರಳಿಸುವ ಹಾಗೂ ಅಸತ್ಯದ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡುವ ಖಾತೆಗಳನ್ನು ಪರಿಶೀಲಿಸಲಿದ್ದಾರೆ. ಈ ರೀತಿ ಕೃತ್ಯದಲ್ಲಿ ನಿರತರವಾಗಿ ತೊಡಗುವವರನ್ನು ಗುರುತಿಸಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲು ಕೂಡ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಫ್‌ಐಆರ್‌ ದಾಖಲು ಸಾಧ್ಯತೆ: ಸುಳ್ಳು ಸುದ್ದಿ, ಮೂಲಭೂತ ಹಾಗೂ ಕೋಮುವಾದಿ ವಿಚಾರಗಳನ್ನು ಹಬ್ಬಿಸುವವರನ್ನು ಪತ್ತೆ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆಗೆ ಸಹ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲವು ಮುಖ್ಯ ಪ್ರಕರಣಗಳಲ್ಲಿ ಸಿಐಡಿ ಸೈಬರ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬಹುದು. ಅಲ್ಲದೆ ಕೆಲವರ ಮೇಲೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡಿ ಮುಂದಿನ ಕಾನೂನು ಕ್ರಮಕ್ಕೆ ಅಧಿಕಾರಿಗಳು ಶಿಫಾರಸು ಮಾಡಬಹುದು ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳಿಗೆ ಸೈಬರ್‌ ತರಬೇತಿ: ಸಾಮಾಜಿಕ ಜಾಲತಾಣಗಳ ನಿರ್ವಹಣೆ ಸಂಬಂಧ ಪೊಲೀಸರಿಗೆ ತರಬೇತಿ ಕಾರ್ಯಾಗಾರಗಳನ್ನು ಕೂಡಾ ಅಧಿಕಾರಿಗಳು ಹಮ್ಮಿಕೊಂಡಿದ್ದಾರೆ. ಸುಳ್ಳು ಸುದ್ದಿ ಅಥವಾ ಶಾಂತಿಭಂಗ ಉಂಟು ಮಾಡುವ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ಹೇಗೆ ನಿಗಾವಹಿಸಬೇಕು ಹಾಗೂ ಅವುಗಳ ನಿಯಂತ್ರಣ ಹೀಗೆ ಪ್ರತಿಯೊಂದು ತಾಂತ್ರಿಕ ಮಾಹಿತಿಯನ್ನು ಅಧಿಕಾರಿಗಳಿಗೆ ತಜ್ಞರ ಮೂಲಕ ತಿಳಿಸಿಕೊಡಲಾಗುತ್ತಿದೆ.

ಕಳೆದು ಹೋದ ಪಾಸ್‌ಪೋರ್ಟ್‌ ಮತ್ತೆ ಪಡೆಯಲು ಎಫ್‌ಐಆರ್‌ ಕಾಪಿ ಕಡ್ಡಾಯ: ಹೈಕೋರ್ಟ್‌

ಸಿಐಡಿಯಲ್ಲೇಕೆ ಸೋಶಿಯಲ್‌ ಮೀಡಿಯಾ ಸೇಲ್‌?: ಸಿಐಡಿಯಲ್ಲಿ ಅತ್ಯಾಧುನಿಕ ಮಟ್ಟದ ತಾಂತ್ರಿಕ ವ್ಯವಸ್ಥೆ ಹೊಂದಿರುವ ಸೈಬರ್‌ ವಿಭಾಗವಿದ್ದು, ಇದರಲ್ಲಿ ತಾಂತ್ರಿಕ ನುರಿತ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಪೊಲೀಸ್‌ ಇಲಾಖೆಗೆ ಮಾತ್ರವಲ್ಲದೆ ಕಾನೂನು ಸೇರಿದಂತೆ ಇತರೆ ಇಲಾಖೆಗಳಿಗೆ ಸಹ ಸೈಬರ್‌ ಸಂಬಂಧಿಸಿದ ತಾಂತ್ರಿಕ ತರಬೇತಿಯನ್ನು ಸಿಐಡಿ ಸೈಬರ್‌ ಅಧಿಕಾರಿಗಳು ನೀಡುತ್ತಿದ್ದಾರೆ. ಹೀಗಾಗಿ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಣ್ಗಾವಲು ಘಟಕವನ್ನು ಸಿಐಡಿ ಸೈಬರ್‌ ವಿಭಾಗದಲ್ಲೇ ರಚನೆಗೆ ಡಿಜಿಪಿ ಅಲೋಕ್‌ ಮೋಹನ್‌ ಸೂಚಿಸಿದ್ದಾರೆ.