Asianet Suvarna News Asianet Suvarna News

ದಾಖಲೆ ಕೊಡ್ತೀನಿ, ತನಿಖೆ ಮಾಡುವ ತಾಕತ್ತಿದೆಯಾ?: ಸರ್ಕಾರಕ್ಕೆ ಎಚ್‌ಡಿಕೆಗೆ ಸವಾಲ್‌

ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದಿದ್ದಾರೆ. ಅದಕ್ಕೆ ನನ್ನ ಪ್ರತ್ಯುತ್ತರ, ನನ್ನ ಹತ್ತಿರ ದಾಖಲೆಗಳೂ ಇವೆ. ದಾಖಲೆ ಕೊಡುವ ದಮ್ಮು, ತಾಕತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಕತ್ತು ಕಾಂಗ್ರೆಸ್‌ ಸರ್ಕಾರಕ್ಕೆ ಇದೆಯಾ ಎಂದು ಟೀಕಾಪ್ರಹಾರ ನಡೆಸಿದ ಎಚ್‌.ಡಿ.ಕುಮಾರಸ್ವಾಮಿ 

Former CM HD Kumaraswamy Challenge to Government of Karnataka grg
Author
First Published Jul 5, 2023, 3:00 AM IST | Last Updated Jul 5, 2023, 3:00 AM IST

ಬೆಂಗಳೂರು(ಜು.05):  ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಮತ್ತು ಕಾಸಿಗಾಗಿ ಪೋಸ್ಟಿಂಗ್‌ ಬಗ್ಗೆ ಮಾಡಿರುವ ನನ್ನ ಆರೋಪಕ್ಕೆ ಸಂಬಂಧಿಸಿದಂತೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು, ತಾಕತ್ತು ಸರ್ಕಾರಕ್ಕೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದಿದ್ದಾರೆ. ಅದಕ್ಕೆ ನನ್ನ ಪ್ರತ್ಯುತ್ತರ, ನನ್ನ ಹತ್ತಿರ ದಾಖಲೆಗಳೂ ಇವೆ. ದಾಖಲೆ ಕೊಡುವ ದಮ್ಮು, ತಾಕತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಕತ್ತು ಕಾಂಗ್ರೆಸ್‌ ಸರ್ಕಾರಕ್ಕೆ ಇದೆಯಾ ಎಂದು ಟೀಕಾಪ್ರಹಾರ ನಡೆಸಿದರು.

ವಿಧಾನಸಭೆಯೊಳಗೆ ಸಂವಿಧಾನ ಪೀಠಿಕೆ ಓದು; ಸ್ಪೀಕರ್ ಖಾದರ್ ಹೊಸ ಸಂಪ್ರದಾಯ

ಸರ್ಕಾರ ಇನ್ನೂ ಹನಿಮೂನ್‌ ಪೀರಿಯಡ್‌ನಲ್ಲಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಸರ್ಕಾರಕ್ಕೆ 5-6 ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್‌ ಪೀರಿಯಡ್‌ನಲ್ಲಿದ್ದರೆ ಹೀಗೆಲ್ಲಾ ಮಾಡುತ್ತಾರೆಯೇ? ಹನಿಮೂನ್‌ ಅವಧಿಯಲ್ಲಿಯೇ ಹೀಗಾದರೆ ಮುಂದಿನ ಅವಧಿಗಳ ಕಥೆ ಏನು? ನನ್ನ ಆರೋಪಕ್ಕೆ ಕಾಂಗ್ರೆಸ್ಸಿಗರು ದಾಖಲೆ ಕೇಳುತ್ತಿದ್ದಾರೆ. ಅವರ ಕನಸು ನಾನು ಈಡೇರಿಸುತ್ತೇನೆ. ನಾನು ದಾಖಲೆ ಕೊಟ್ಟರೆ ಯಾವ ಸಚಿವರ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆಯೋ ಆ ಸಚಿವರನ್ನು ವಜಾ ಮಾಡುತ್ತೀರಾ? ಆ ಸಚಿವರನ್ನು ವಜಾ ಮಾಡುವ ತಾಕತ್‌ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.

ನನ್ನ ಬಳಿ ಇರುವ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೋ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರ್ಕಾರ ನೆಮ್ಮದಿಯಾಗಿರಲಿ ಎಂದು ಬಿಟ್ಟಿದ್ದೀನಿ ಅಷ್ಟೇ. ಕಳೆದ ಎರಡು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿಲ್ಲ. ಸಚಿವರೊಬ್ಬರು ನಾನು ದಾಖಲೆ ಸಮೇತ ಆರೋಪ ಮಾಡಿದ್ದೆ ಎಂದಿದ್ದಾರೆ. ಯಾವ ದಾಖಲೆ ನೀಡಿದ್ದಾರೆ? ಯಾವ ತನಿಖೆ ನಡೆದಿದೆ ಎನ್ನುವುದರ ಬಗ್ಗೆ ಮಾಹಿತಿ ಕೊಡಲಿ. ಚುನಾವಣೆ ಸಮಯದಲ್ಲಿ ಇವರು ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಜಾಹೀರಾತು ಕೊಟ್ಟರು. ಆದರೆ, ಒಂದು ದಾಖಲೆಯನ್ನಾದರೂ ಬಿಡುಗಡೆ ಮಾಡಿದರಾ? ಸುಳ್ಳು ದಾಖಲೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ ಎಂದು ಕಿಡಿಕಾರಿದರು.

ಸದನ ಆರಂಭವಾದ್ರೂ ಆಯ್ಕೆಯಾಗದ ವಿಪಕ್ಷ ನಾಯಕ: ಇಂದು ರಾಜ್ಯಕ್ಕೆ ಆಗಮಿಸಲಿರುವ ವೀಕ್ಷಕರು

ನನ್ನ ಅವಧಿಯಲ್ಲಿ ನಡೆದ ವರ್ಗಾವಣೆಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಐದು ವರ್ಷ ಕಾಂಗ್ರೆಸ್‌ನ ಪೂರ್ಣ ಸರ್ಕಾರ ಇತ್ತಲ್ಲ, ಆ ಸರ್ಕಾರದ ಅವಧಿಯಲ್ಲಿ ನಡೆದ ವರ್ಗಾವಣೆಗಳ ಕುರಿತು ಕೂಡ ತನಿಖೆ ನಡೆಸಲಿ. ಕಾಂಗ್ರೆಸ್‌ನವರು ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗಾವಣೆ ದಂಧೆಗೆ ಹಣ ನಿಗದಿ ಮಾಡಿದ್ದಾರೆ ಎಂಬುದು ಗೊತ್ತು. ಪ್ರತಿ ಹುದ್ದೆಗೂ ಒಂದೊಂದು ರೇಟ್‌ ಫಿಕ್ಸ್‌ ಮಾಡಿದ್ದಾರೆ. ಸಮಯ ಬಂದಾಗ ದಾಖಲೆ ಕೊಟ್ಟೇ ಕೊಡುತ್ತೇನೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ನಾನು ಕೊಡುವ ದಾಖಲೆ ನೋಡಿದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಮೊದಲು ಹೇಳಲಿ ಎಂದು ಕುಮಾರಸ್ವಾಮಿ ಹೇಳಿದರು.

ಕೆಲವರು ಸತೀಶ್‌ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಗೆ ಟವಲ್‌ ಹಾಕಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios