ಬೆಂಗಳೂರು[ಡಿ.05]: ಉಪಚುನಾವಣೆ ಹಿನ್ನೆಲೆಯಲ್ಲಿ ಸತತವಾಗಿ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಜ್ವರದಿಂದ ಬಳಲಿದ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.

ಜ್ವರ ಮತ್ತು ಕೆಮ್ಮಿನಿಂದ ಬಳಲಿದ ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು. ವೈದ್ಯಕೀಯ ಪರೀಕ್ಷೆ ಮಾಡಿದ ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ವಾತಾವರಣ ಬದಲಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. 3-4 ದಿನ ವಿಶ್ರಾಂತಿ ಪಡೆದುಕೊಂಡರೆ ಆರೋಗ್ಯ ಸುಧಾರಿಸಲಿದೆ ಎಂದು ವೈದ್ಯರು ಹೇಳಿದ್ದಾರೆ.

ಬಿಜೆಪಿ, ಅನರ್ಹರ ವಿರುದ್ಧ ಆರೋಪಗಳ ಪಟ್ಟಿ ರಿಲೀಸ್ ಮಾಡಿದ HDK: ಪಟ್ಟಿಯಲ್ಲೇನಿದೆ.?

ಜೆ.ಪಿ.ನಗರದಲ್ಲಿನ ನಿವಾಸದಲ್ಲಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ. ಕೆಲವು ದಿನಗಳ ಮಟ್ಟಿಗೆ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಲಿದ್ದು, ನಂತರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.