Asianet Suvarna News Asianet Suvarna News

ಸಿದ್ದುರನ್ನು ಶಾಶ್ವತವಾಗಿ ವಿಪಕ್ಷದಲ್ಲಿರಿಸುವೆ: ಕಟೀಲ್ ಜೊತೆ ಬಿಎಸ್‌ವೈ ರಾಜ್ಯ ಪ್ರವಾಸ!

* ಏಕಾಂಗಿ ಪ್ರವಾಸ ಕೈಬಿಟ್ಟ ಯಡಿಯೂರಪ್ಪ

* ಕಟೀಲ್‌ ಜತೆ ರಾಜ್ಯ ಪ್ರವಾಸ: ಬಿಎಸ್‌ವೈ

* ಅಧಿವೇಶನದ ಬಳಿಕ ಪಕ್ಷ ಸಂಘಟನೆ ಯಾತ್ರೆ

Former CM BS Yediyurappa To Conduct Karnataka Tour After Assempply Session pod
Author
Bangalore, First Published Sep 14, 2021, 7:25 AM IST

ಬೆಂಗಳೂರು(ಸೆ.14): ಇತ್ತೀಚೆಗೆ ಏಕಾಂಗಿಯಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿ ಬಿಜೆಪಿ ಒಳಗೆ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜತೆ ರಾಜ್ಯಪ್ರವಾಸ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಶ್ವತವಾಗಿ ವಿಪಕ್ಷದಲ್ಲಿ ಕೂರಿಸುತ್ತೇನೆ ಎಂದು ಗುಡುಗಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲದ ಅಧಿವೇಶನದ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದೂ ಅವರು ಹೇಳಿದರು.

‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಅಧಿವೇಶನಕ್ಕೆ ಬರುತ್ತಿದ್ದೇನೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ಧನಿದ್ದೇನೆ’ ಎಂದರು.

‘ಬರುವ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತೇವೆ. ಮುಖ್ಯಮಂತ್ರಿ ಆಗಿಯೇ ಕೆಲಸ ಮಾಡಬೇಕು ಅಂತ ಏನೂ ಇಲ್ಲ. ಒಬ್ಬ ಶಾಸಕನಾಗಿ ಕೆಲಸ ಮಾಡುವೆ. ಸರ್ಕಾರದ ಒಳ್ಳೆಯ ಕೆಲಸಗಳನ್ನು ಶ್ಲಾಘಿಸುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ಸಿದ್ದರಾಮಯ್ಯಗೂ ಚಾಟಿ ಏಟು ನೀಡಿದ ಯಡಿಯೂರಪ್ಪ, ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಚುನಾವಣೆಯಲ್ಲಿ ಆಕಸ್ಮಾತ್‌ ಆಗಿ ಗೆದ್ದವರು. ಅವರನ್ನು ಮುಂದೆ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ’ ಎಂದು ಗರ್ಜಿಸಿದರು.

ಕಳೆದ ತಿಂಗಳೇ ಹೇಳಿದ್ದ ಬಿಎಸ್‌ವೈ:

ಗಣೇಶ ಹಬ್ಬದ ಬಳಿಕ ಪಕ್ಷ ಸಂಘಟನೆಗಾಗಿ ತಾವು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಯಡಿಯೂರಪ್ಪ ಅವರು ಕಳೆದ ತಿಂಗಳೇ ಹೇಳಿಕೆ ನೀಡಿದ್ದರು. ಆ ಹೇಳಿಕೆ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟಾಗಿತ್ತು. ಹೈಕಮಾಂಡ್‌ ಮಟ್ಟದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿ ಯಡಿಯೂರಪ್ಪ ಅವರೊಬ್ಬರೇ ರಾಜ್ಯ ಪ್ರವಾಸ ಕೈಗೊಳ್ಳುವುದರಿಂದ ಅದು ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೊಬ್ಬರೇ ರಾಜ್ಯ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಪ್ರವಾಸ ನಡೆಸಲಿ ಎಂಬ ಸಂದೇಶವನ್ನು ವರಿಷ್ಠರು ರಾಜ್ಯ ನಾಯಕರಿಗೆ ರವಾನಿಸಿದರು. ಕಟೀಲ್‌ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ಯಡಿಯೂರಪ್ಪ ಮತ್ತು ನಾನು ಒಟ್ಟಿಗೆ ಸೇರಿ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ ಎಂಬ ಮಾತನ್ನು ಕಟೀಲ್‌ ಅವರು ಕೂಡ ಇತ್ತೀಚೆಗೆ ಹೇಳಿದ್ದರು. ಇದೀಗ ಯಡಿಯೂರಪ್ಪ ಅವರು ಅದನ್ನೇ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದುಗೆ ವಿಪಕ್ಷ ಸ್ಥಾನ ಕಾಯಂ

ಪಕ್ಷದ ರಾಜ್ಯಾಧ್ಯಕ್ಷ ಕಟೀಲ್‌ ಜೊತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ. ಬೊಮ್ಮಾಯಿ ಅವರಿಗೆ ಎಲ್ಲ ಸಹಕಾರ ನೀಡುತ್ತೇನೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದ ಬಾರಿ ಅಕಸ್ಮಾತ್‌ ಆಗಿ ಗೆದ್ದವರು. ಅವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Follow Us:
Download App:
  • android
  • ios