* 3-4 ದಿನಗಳಲ್ಲಿ ಸಂಪುಟ ವಿಸ್ತರಣೆ ಕುರಿತು ತೀರ್ಮಾನ* ಯಾರು ದುರ್ಬಲರಿದ್ದಾರೋ, ಯಾರು ಭ್ರಷ್ಟರಿದ್ದಾರೋ ಅವರ ಬಾಯಲ್ಲಿ ಅದೇ ಮಾತು ಬರುತ್ತಿದೆ* ಸಿದ್ದರಾಮಯ್ಯ ಕಾಲದಲ್ಲಿ ಏನೇನಾಯ್ತು ಎಂಬ ಕಥೆ ಜಗತ್ತಿಗೇ ಗೊತ್ತಿದೆ
ಮೈಸೂರು(ಮೇ.13): ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬರಲು ಕಾರಣರಾದ 17 ಮಂದಿ ಶಾಸಕರಲ್ಲಿ ಎಷ್ಟು ಮಂದಿ ಸಚಿವರಾಗಿ ಮುಂದುವರೆಯುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurapp) ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರನ್ನು ಭೇಟಿಯಾಗಿ ಬಂದಿದ್ದಾರೆ. 3-4 ದಿನಗಳೊಳಗೆ ಸಚಿವ ಸಂಪುಟ ವಿಸ್ತರಣೆ(Cabinet Expansion) ಸಂಬಂಧ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಹೀಗಾಗಿ 3-4 ದಿನದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇನ್ನು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ಸಚಿವ ಸಂಪುಟಕ್ಕೆ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೂ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಚುನಾವಣೆ ವರ್ಷವಾಗಿರೋ ಕಾರಣ ವಿರೋಧ ಪಕ್ಷದವರು ಬೇಕಾದಂತೆ ಮಾತನಾಡ್ತಾರೆ!
ಸಿದ್ದುಗೆ ತಿರುಗೇಟು
ರಾಜ್ಯದಲ್ಲಿರೋದು ಭ್ರಷ್ಟ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪ ಅವರು, ಯಾರು ದುರ್ಬಲರಿದ್ದಾರೋ, ಯಾರು ಭ್ರಷ್ಟರಿದ್ದಾರೋ ಅವರ ಬಾಯಲ್ಲಿ ಅದೇ ಮಾತು ಬರುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ಏನೇನಾಯ್ತು ಎಂಬ ಕಥೆ ಜಗತ್ತಿಗೇ ಗೊತ್ತಿದೆ. ಪ್ರತಿಪಕ್ಷ ನಾಯಕರು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಕುಟುಕಿದರು.
ಸಂಪುಟ ವಿಸ್ತರಣೆ ವರಿಷ್ಠರು, ಸಿಎಂಗೆ ಬಿಟ್ಟದ್ದು
ದಾವಣಗೆರೆ: ಕೇವಲ ಸಂಪುಟ ವಿಸ್ತರಣೆಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿರಲಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರು ಅದರಲ್ಲೂ ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ರಾಜ್ಯದ ಕುರಿತಂತೆ ಚರ್ಚಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವಿ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ನಗರದ ಹೊರ ವಲಯದ ಬಾಡಾ ಕ್ರಾಸ್‌ನಲ್ಲಿ ಗುರುವಾರ ಹರಿಹರದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ ಗೌಡ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಾರ್ಗ ಮಧ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಚರ್ಚೆಗಂತಲೇ ಹೋಗಿರಲಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರು.
ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸುತ್ತಾರೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದನ್ನು ಕೇಂದ್ರ ನಾಯಕರು, ಮುಖ್ಯಮಂತ್ರಿಗಳು ನಿರ್ದಾರ ಮಾಡುತ್ತಾರೆ ಎಂದು ಹೇಳಿದರು.
Cabinet Reshuffle ಸ್ಥಳೀಯ ಚುನಾವಣೆ ಮೇಲೆ ಸಂಪುಟ ಪುನಾರಚನೆ ಭವಿಷ್ಯ!
ಮುಂಬರುವ ವಿಧಾನಸಭೆ ಚುನಾವಣೆಗೆ ನಾನು ನಿಲ್ಲಬೇಕೋ ಅಥವಾ ಬೇಡವೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಈ ಬಗ್ಗೆ ನಮ್ಮ ಹೈಕಮಾಂಡ್, ರಾಜ್ಯ ನಾಯಕರು ಕುಳಿತು ಚರ್ಚಿಸುತ್ತಾರೆ. ಯಾವುದಕ್ಕೂ ಪಕ್ಷದ ವರಿಷ್ಟರು, ರಾಜ್ಯ ನಾಯಕರ ನಿರ್ಧಾರ ಮೇಲೆ ಅವಲಂಬಿತ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು(Nalin Kumar Kateel) ಬದಲಾವಣೆ ಆಗುತ್ತದೆಂಬ ವಿಚಾರ ಕೇವಲ ಊಹಾಪೋಹವಷ್ಟೇ. ಕಟೀಲರ ನೇತೃತ್ವದಲ್ಲಿ ರಾಜ್ಯದಲ್ಲಿ(Karnataka) ಬಿಜೆಪಿ ಅತ್ಯಂತ ಸದೃಢವಾಗುತ್ತಲೇ ಇದೆ. ಯಾವುದೇ ಕಾರಣಕ್ಕೂ ನಳೀನ್‌ಕುಮಾರ್ ಕಟೀಲು ಬದಲಾವಣೆ ಇಲ್ಲ. ಮುಂದಿನ ಚುನಾವಣೆ ಸಹ ನಳೀನ್ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಯುವ ಮುಖಂಡ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ, ಪಿ.ಸಿ.ಶ್ರೀನಿವಾಸಭಟ್, ಮಾಯಕೊಂಡ ಮುಖಂಡ ಶಾಮ್, ಅನಿಲಕುಮಾರ, ಶಿವಪ್ರಕಾಶ, ಶ್ರೀನಿವಾಸ ಗುಮ್ಮನೂರು, ಟಿಂಕರ್ ಮಂಜಣ್ಣ, ಸಚಿನ್, ಆಲೂರು ಪ್ರಕಾಶ ಇದ್ದರು.
