ಇಂಡಿಯಾ ಒಕ್ಕೂಟ ಬಲಪಡಿಸಲು ನೀರು ಬಿಡುತ್ತಿದ್ದಾರೆ: ಯಡಿಯೂರಪ್ಪ
ಸುಪ್ರೀಂಕೋರ್ಟನ್ನು ಅಪ್ರೋಚ್ ಮಾಡದೆ ತಮಿಳುನಾಡನ್ನು ತೃಪ್ತಿಪಡಿಸಲು ನೀರು ಹರಿಸಿರುವುದು ಅಕ್ಷಮ್ಯ ಅಪರಾಧ. ಸುಪ್ರೀಂಕೋರ್ಟಿಗೆ ಈ ವಿಚಾರವನ್ನು ಮನವರಿಕೆ ಮಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು(ಸೆ.16): ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇರುವುದರಿಂದ ‘ಇಂಡಿಯಾ ಒಕ್ಕೂಟ’ವನ್ನು ಬಲಪಡಿಸಲು ನಿತ್ಯ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಕರ್ನಾಟಕದಿಂದ ಬಿಡಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಂಚೆಯೇ ಸುಪ್ರೀಂಕೋರ್ಟಲ್ಲಿ ದಾವೆ ಹೂಡಬೇಕಿತ್ತು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟನ್ನು ಅಪ್ರೋಚ್ ಮಾಡದೆ ತಮಿಳುನಾಡನ್ನು ತೃಪ್ತಿಪಡಿಸಲು ನೀರು ಹರಿಸಿರುವುದು ಅಕ್ಷಮ್ಯ ಅಪರಾಧ. ಸುಪ್ರೀಂಕೋರ್ಟಿಗೆ ಈ ವಿಚಾರವನ್ನು ಮನವರಿಕೆ ಮಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.
ತಮಿಳುನಾಡಿಗೆ ಕಾವೇರಿ ನೀರು: ಸುಮತಲಾ- ಸಚಿವರ ವಾಕ್ಸಮರ
ಕಾವೇರಿ ಸಂಕಷ್ಟವನ್ನು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಬೇಕಾದುದು ಅತ್ಯಂತ ಅವಶ್ಯಕ. ಇದನ್ನು ಸರ್ಕಾರ ಮಾಡುತ್ತಿಲ್ಲ. ತಮಿಳುನಾಡಿನಲ್ಲಿ ಕಾವೇರಿ ನೀರನ್ನು ನಂಬಿ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಕಾಯ್ದೆ ಪ್ರಕಾರ 1.08 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬಹುದು. ಆದರೆ, 3.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇಷ್ಟು ಪ್ರದೇಶಕ್ಕೆ ನೀರು ಕೊಡಲು ಅಸಾಧ್ಯ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಥ ಮಾಡಿಸಬೇಕಿದೆ ಎಂದರು.
ತಮಿಳುನಾಡಿನಲ್ಲಿ ಕುರುವೈ ಬೆಳೆಯನ್ನು ಹಿಂದೆಂದಿಗಿಂತ ಹೆಚ್ಚು ಬೆಳೆಯಲಾಗುತ್ತಿದೆ. ರಾಜ್ಯದ ರೈತರ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂದರಲ್ಲದೆ, ಸುಪ್ರೀಂ ಕೋರ್ಟಿನ ಮುಂದೆ ಸಮರ್ಪಕ ವಾದ ಮಂಡಿಸಿ ರಾಜ್ಯದ ಹಿತವನ್ನು ಕಾಪಾಡಲು ಆಗ್ರಹಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವೈಫಲ್ಯವನ್ನು ಖಂಡಿಸುವುದಾಗಿ ತಿಳಿಸಿದರು.