ಸಿ.ಟಿ.ರವಿಗೆ ಅನ್ಯಾಯವಾಗಿದೆ, ಸರಿಪಡಿಸುತ್ತೇವೆ: ಯಡಿಯೂರಪ್ಪ
ವಿಧಾನಸೌಧದಲ್ಲಿ ಗುಡುಗುವಂಥವರು ಹೊರಗಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ ದೊರಕಿಸಿಕೊಡುವ ಮೂಲಕ ಸಿ.ಟಿ.ರವಿಗೆ ಆದ ಅನ್ಯಾಯ ತುಂಬಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕಡೂರು(ಏ.12): ಮಾಜಿ ಶಾಸಕ ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಸಿ.ಟಿ.ರವಿ ಅವರು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಮಗಾದ ಸೋಲಿನ ಕುರಿತು ವ್ಯಕ್ತಪಡಿಸಿದ ನೋವನ್ನು ಆಲಿಸಿದ ಬಳಿಕ ಯಡಿಯೂರಪ್ಪ ಈ ಭರವಸೆ ನೀಡಿದರು.
ಲೋಕಸಭೆ ಚುನಾವಣೆ 2024: ಗೃಹಲಕ್ಷ್ಮಿ ಹಣ ಜಯಪ್ರಕಾಶ್ ಹೆಗಡೆಗೆ ದೇಣಿಗೆ ನೀಡಿದ ಮಹಿಳೆ..!
ವಿಧಾನಸೌಧದಲ್ಲಿ ಗುಡುಗುವಂಥವರು ಹೊರಗಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ ದೊರಕಿಸಿಕೊಡುವ ಮೂಲಕ ಸಿ.ಟಿ.ರವಿಗೆ ಆದ ಅನ್ಯಾಯ ತುಂಬಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ ಎಂದರು. ಆಗ ನೆರೆದಿದ್ದ ಕಾರ್ಯಕರ್ತರು ಜೋರಾಗಿ ಚಪ್ಪಳೆ ತಟ್ಟಿ ಸ್ವಾಗತಿಸಿದರು.
ಇದಕ್ಕೂ ಮೊದಲು ಮಾತನಾಡಿದ ಸಿ.ಟಿ.ರವಿ, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ ನನಗೆ ಓಟು ಹಾಕದಂತೆ ಅಪಪ್ರಚಾರ ನಡೆಸಿದರು. ನನ್ನ ಗ್ರಹಚಾರ ಸರಿಯಿರಲಿಲ್ಲ. ಜೆಡಿಎಸ್ ಸಹ ಅವರನ್ನೇ ಬೆಂಬಲಿಸಿತು ಎಂದು ಪರೋಕ್ಷವಾಗಿ ವೇದಿಕೆಯಲ್ಲಿದ್ದ ಭೋಜೇಗೌಡರು ಮತ್ತಿತರ ಮುಖಂಡರಿಗೆ ಕುಟುಕಿದರು.
ಹೋರಾಟ ಮತ್ತು ಹಿಂದುತ್ವದ ಪ್ರೇರಣೆಯಿಂದಲೇ ಬಿಜೆಪಿಗೆ ಬಂದ ನನ್ನ ಮತ್ತು ಯಡಿಯೂರಪ್ಪ ನಡುವೆ ಹುಳಿ ಹಿಂಡುವ ಕಾರ್ಯವೂ ನಡೆಯಿತು. ಮೈ ಮರೆತು ಮತ ನೀಡಿದ ಪರಿಣಾಮ ಯಾರ ಕಾಲ್ಗುಣವೋ ಈಗ ಹಕ್ಕಿ ಕುಡಿಯಲೂ ನೀರಿಲ್ಲ. ದಿನದ ಕೂಳಿಗೆ ಹೋಗಿ ವರ್ಷದ ಕೂಳು ಕಳೆದುಕೊಳ್ಳುವ ಸ್ಥಿತಿ ಕ್ಷೇತ್ರಕ್ಕೆ ಬಂದಿದೆ. ದುಡಿಯುವ ಎತ್ತಿಗೆ ಮೇವು ಹಾಕದೆ ಕಳ್ಳೆತ್ತಿಗೆ ಮೇವು ಹಾಕಿದರೆ ಇದೇ ಸ್ಥಿತಿ ಮುಂದುವರಿಯುತ್ತದೆ ಎಂದರು.