ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. 

ಬೆಂಗಳೂರು (ಆ.03): ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದು ಕಾಂಗ್ರೆಸ್‌ ಸರ್ಕಾರದ ದುಬಾರಿ ದುನಿಯಾ. ಈ ಸರ್ಕಾರಕ್ಕೆ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೊಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ, ಮೋಟರ್‌ ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್‌ ಡ್ಯೂಟಿ ಹೆಚ್ಚಳ ಮೂಲಕ ಬರುವ ದಿನಗಳಲ್ಲಿ ಮತ್ತಷ್ಟುಬೆಲೆ ಏರಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸಿಗರಿಗೆ ಸೂಟ್‌ಕೇಸ್‌ ಟಾರ್ಗೆಟ್‌: ಎನ್‌.ರವಿಕುಮಾರ್‌ ಲೇವಡಿ

ಬೆಲೆ ಏರಿಕೆಯ ಬರೆ: ರಾಜ್ಯದ ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರ್ಕಾರ ಹಾಕುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡು ಐದು ಗ್ಯಾರಂಟಿ ಯೋಜನೆಗಳಿಗಾಗಿ 25 ರೀತಿಯಲ್ಲಿ ಬೆಲೆ ಏರಿಕೆ ಮಾಡಿದೆ. ಈ ಸರ್ಕಾರ ಒಂದು ಕಡೆ ಕೊಡುತ್ತದೆ. ಅನೇಕ ಕಡೆ ಕಿತ್ತುಕೊಳ್ಳುತ್ತಿದೆ. ಹಾಗಾಗಿ ಇದು ಬಡವರ ಪರ, ಹಿಂದುಳಿದವರ ಪರ, ದಲಿತರ ಪರವಾಗಿ ಇರುವ ಸರ್ಕಾರ ಅಲ್ಲ. ಇದು ಹಿಂದುಳಿದ ವರ್ಗಗಳ, ದಲಿತರ, ಎಸ್‌ಸಿ, ಎಸ್‌ಟಿ ಸಮುದಾಯದ ವಿರೋಧಿ ಸರ್ಕಾರ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿ: ಕಾಂಗ್ರೆಸ್‌ ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಯಾಗಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಮಗೆ ಬದ್ದತೆ ಇದೆ. ಕಾಂಗ್ರೆಸ್‌ನವರಿಂದ ಪಾಠ ಕಲಿಯಬೇಕಿಲ್ಲ. ಒಳ ಮೀಸಲಾತಿ ವಿರೋಧಿಸುವ ಕಾಂಗ್ರೆಸ್‌ನವರ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಅವಕಾಶ ವಿಚಾರದಲ್ಲಿ ಕಾಂಗ್ರೆಸ್‌ ಸದಾ ಗೊಂದಲ ಸೃಷ್ಟಿಸುತ್ತ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿ ಕೈಬಿಟ್ಟರು. ಒಳಮೀಸಲಾತಿ ಪರ ಬಂದವರಿಗೆ ಜಾರಿ ಮಾಡುತ್ತೇವೆ ಎನ್ನುವುದು, ಅದನ್ನು ವಿರೋಧಿಸುವವರು ಬಂದಾಗ ಜಾರಿ ಮಾಡುವುದಿಲ್ಲ ಎನ್ನುವುದು ಈಗ ಎಲ್ಲವೂ ಬಹಿರಂಗವಾಗಿದೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.

ಸಾಕ್ಷಿದಾರನ ಕೈಗೆ ಕೋಳ ಹಾಕಿದ ಪೊಲೀಸರು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಕೇಂದ್ರ ಸಚಿವ ಸಚಿವ ನಾರಾಯಣಸ್ವಾಮಿ ಪ್ರಸ್ತುತ ಒಳ ಮೀಸಲಾತಿಗೆ ಅವಕಾಶ ಇಲ್ಲ ಅಂತ ಹೇಳಿದ್ದಾರೆ. ನಾವೂ ಕೂಡ ಸಂವಿಧಾನದ ಆರ್ಟಿಕಲ್‌ 140ಗೆ ಕ್ಲಸ್‌ 2 ಹಾಕಿ ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಈ ಪ್ರಕರಣ ಕೋರ್ಟ್‌ನಲ್ಲಿದೆ. ಆದರೆ, ನಮಗೆ ಬದ್ದತೆ ಇದೆ. ಅದಕ್ಕಾಗಿಯೇ ಸಂವಿಧಾನ ತಿದ್ದುಪಡಿಗೆ ಶಿಫಾರಸ್ಸು ಮಾಡಿದ್ದೇವೆ. ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಸುತ್ತಿರುವ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.