Asianet Suvarna News Asianet Suvarna News

Karnataka Politics: ಬಿಜೆಪಿಯವರೇ ನಮ್ಮ ಮನೆ ಬಾಗಿಲು ಬಡಿದಿದ್ದರು ಎಂದ HDK

* ಜೆಡಿಎಸ್‌ ಕುರಿತ ಸಿಎಂ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು
* ಜೆಡಿಎಸ್‌ ಶಕ್ತಿ ಏನೆಂದು 2023ರಲ್ಲಿ ತೋರಿಸುತ್ತೇವೆ
* 123 ಸ್ಥಾನ ಗೆಲ್ಲಲು ಸಿದ್ಧತೆ ಆರಂಭಿಸಿದ್ದೇವೆ

Former Chief Minister HD Kumaraswamy Slams BJP and CM basavaraj bommai san
Author
Bengaluru, First Published Jan 28, 2022, 5:15 AM IST

ಬೆಂಗಳೂರು (ಜ.28): ನಾವೆಂದೂ ಅತಂತ್ರರಾಗಿಲ್ಲ. ಅವರೇ (ಬಿಜೆಪಿ) ಅತಂತ್ರವಾದಾಗ ಜೆಡಿಎಸ್‌ (JDS) ಬಾಗಿಲು ಬಡಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (Former Chief Minister HD Kumaraswamy) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM basavaraj bommai)ಅವರಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷಗಳು ಅತಂತ್ರವಾದಾಗ ಜೆಡಿಎಸ್‌ ಸ್ವತಂತ್ರವಾಗುತ್ತದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಕಿಡಿಕಾರಿದರು.

‘ಜೆಡಿಎಸ್‌ ಶಕ್ತಿ ಏನು ಎಂಬುದನ್ನು 2023ಕ್ಕೆ ತೋರಿಸುತ್ತೇವೆ. ಜೆಡಿಎಸ್‌ ಬಿಟ್ಟು ಏನು ಮಾಡಲು ಆಗಲ್ಲ ಎಂದಷ್ಟೇ ಹೇಳಿದ್ದೆ. ಅಂದರೆ ಬೇರೆ ಪಕ್ಷಗಳು ಕಡಿಮೆ ಸ್ಥಾನ ಗೆದ್ದರೆ ಅವರ ಜತೆ ಸೇರಿ ಅಧಿಕಾರ ಮಾಡುತ್ತೇವೆ ಎಂದಲ್ಲ. ನನ್ನ ಹೇಳಿಕೆಯ ಬಗ್ಗೆ ಅನ್ಯ ಅರ್ಥ ಬೇಡ. ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ’ ಎಂದರು.

ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಈವರೆಗೆ ಹೋಗಿಲ್ಲ. ಇನ್ನೂ ಮುಂದೆಯೂ ಹೋಗುವುದಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ತಲುಪಲು ಶ್ರಮಿಸುತ್ತೇವೆ. ಆಗ ಕಾರ್ಯಕರ್ತರ ಶ್ರಮ ಸಾಬೀತು ಮಾಡುತ್ತೇವೆ ಎಂದು ಹೇಳಿದರು.

Karnataka Politics ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದು ನಿಜ, ಜಾರಕಿಹೊಳಿ ಹೊಸ ಬಾಂಬ್
‘ಬಿಜೆಪಿ ಶಾಸಕರು, ಸಚಿವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಸಂಪರ್ಕದಲ್ಲಿದ್ದಾರೆ ಎಂದರೆ, ಅಂತವರಿಗೆ ಬಿಜೆಪಿ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿಯಲ್ಲಿಲ್ಲ. ಅವರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಬಿಜೆಪಿಗೆ ಆಗಿಲ್ಲ. ಬಿಜೆಪಿ ಉಳಿವಿಗಾಗಿ ಅಲ್ಲಿನ ನಾಯಕರು ಏನು ಮಾಡುತ್ತಿದ್ದಾರೋ ಹಾಗೆಯೇ ನಾವು ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸಂಘಟನೆಯನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಗೊಂದಲ ಸೃಷ್ಟಿಮಾಡುವುದಕ್ಕೆ ನಾವು ಎಲ್ಲಿಯೂ ಅವಕಾಶ ನೀಡಿಲ್ಲ. ನಮ್ಮ ಮುಮದೆ ಸವಾಲು ಇದೆ ನಿಜ. ಗುರಿಯ ಬಗ್ಗೆಯೂ ನಮಗೆ ಸ್ಪಷ್ಟತೆ ಇದೆ. ಪ್ರತ್ಯುತ್ತರ ನೀಡಲು ನಾವು ಸಿದ್ಧರಿದ್ದೇವೆ. 2023ರಲ್ಲಿ 123 ಕ್ಷೇತ್ರದಲ್ಲಿ ಜಯಗಳಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ, ಶಾಸಕರಾದ ಮಂಜುನಾಥ್‌, ಕೃಷ್ಣಾ ರೆಡ್ಡಿ, ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

Belagavi Politics ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಒಪ್ಪಿಕೊಂಡ ಜಾರಕಿಹೊಳಿ
ಇಬ್ರಾಹಿಂ ಜೆಡಿಎಸ್‌ಗೆ ಬಂದರೆ ಸ್ವಾಗತ: ಎಚ್‌ಡಿಕೆ

ಬೆಂಗಳೂರು: ಮಾಜಿ ಸಚಿವ ಸಿ.ಎಂ.ಇಬ್ರಾಹಿಂ (CM Ibrahim) ಅವರು ಜೆಡಿಎಸ್‌ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಅವರಿಗೆ ಸೂಕ್ತ ಸ್ಥಾನಮಾನವನ್ನೂ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ರಾಹಿಂ ಅವರ ಹೆಸರು ಮೇಲ್ಮನೆ ಪ್ರತಿಪಕ್ಷದ ಸ್ಥಾನಕ್ಕೆ ಕೇಳಿ ಬಂದಿತ್ತು. ಆ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದು ಅವರಿಗೆ ಹೇಳಿದ್ದೆ. ಆದರೆ ಅಲ್ಲಿ ಅವರಿಗೆ ಆ ಸ್ಥಾನ ತಪ್ಪಿದೆ. ಇಬ್ರಾಹಿಂ ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ. ನಮ್ಮ ಪಕ್ಷ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಏಳು ಬೀಳುವಿನಲ್ಲಿಯೂ ಜತೆಯಾದವರು. ಅವರು ಪಕ್ಷಕ್ಕೆ ಬಂದರೆ ಸ್ವಾಗತ. ನಾವು ಕದ್ದುಮುಚ್ಚಿ ಯಾವುದನ್ನೂ ಮಾಡಿಲ್ಲ. ಬುಧವಾರ ನಾನು ಕರೆ ಮಾಡಿ ಮಾತಾಡಿದ್ದೇನೆ ಎಂದು ಹೇಳಿದರು.

ಜನತಾ ಪರಿವಾರದ ನಾಯಕರು ಬೇರೆ ಬೇರೆ ಕಡೆ ಸೆಟಲ್‌ ಆಗಿದ್ದಾರೆ. ಅವರನ್ನು ವಾಪಸ್‌ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ. ಯುವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿನಮ್ಮ ಆದ್ಯತೆ. ಮೊದಲಿನಿಂದಲೂ ಜೆಡಿಎಸ್‌ ಗುರು ಮನೆ ಇದ್ದಂತೆ. ಹಲವಾರು ಜನ ಇಲ್ಲಿಂದ ನಾಯಕರಾಗಿ ಬೆಳೆದು ಹೋಗಿದ್ದಾರೆ ಎಂದರು.

Follow Us:
Download App:
  • android
  • ios