ಬಿಜೆಪಿಯವರಿಂದ ಜಗತ್ತಿನೆದುರು ದೇಶದ ಮರ್ಯಾದೆ ಹರಾಜು: ಸಿದ್ದರಾಮಯ್ಯ
121 ದೇಶಗಳನ್ನು ಒಳಗೊಂಡ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 107ಕ್ಕೆ ಕುಸಿದಿದೆ. ಜನರ ಹೊಟ್ಟೆಗೆ ಸರಿಯಾಗಿ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೇ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು (ಅ.28): 121 ದೇಶಗಳನ್ನು ಒಳಗೊಂಡ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 107ಕ್ಕೆ ಕುಸಿದಿದೆ. ಜನರ ಹೊಟ್ಟೆಗೆ ಸರಿಯಾಗಿ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೇ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಚಾರಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ. ಜನರಿಗೆ ಅಗತ್ಯ ಪೋಷಕಾಂಶಯುಕ್ತ ಆಹಾರ ನೀಡಲಾಗದೆ ಬಿಜೆಪಿ ಸರ್ಕಾರವು ಕ್ಷುಲ್ಲಕ ಆಹಾರ ರಾಜಕಾರಣದ ಮೂಲಕ ಕೋಮುದ್ವೇಷ ಸೃಷ್ಟಿಸಲು ಹೊರಟಿದೆ.
ಜತೆಗೆ ತನ್ನ ಹುಳುಕು ಬಯಲಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸಮೀಕ್ಷೆಗಳನ್ನೇ ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಗಿದೆ. ಬಿಜೆಪಿಯವರು ಯಥಾಪ್ರಕಾರ ಈ ವರದಿಯೇ ಸರಿಯಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಮತ್ತೇನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದು, ಡಿಕೆಶಿ ಸದಾ ಉತ್ತರ-ದಕ್ಷಿಣ ಧ್ರುವ: ಸಚಿವ ಸುಧಾಕರ್ ವ್ಯಂಗ್ಯ
ವರದಿಯನ್ನು ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿಯೇ ಮಾಡಲಾಗಿದೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5ರಲ್ಲಿನ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ. 2017ರಲ್ಲಿ 100ನೇ ಸ್ಥಾನದಲ್ಲಿದ್ದ ಭಾರತ 2018ರಲ್ಲಿ 103ನೇ ಸ್ಥಾನಕ್ಕೆ ಕುಸಿಯಿತು. ಈಗ 121 ದೇಶಗಳ ಪೈಕಿ 107ನೇ ಸ್ಥಾನ. ನಮ್ಮ ನಂತರ ಕೇವಲ 15 ದೇಶಗಳಿವೆ. ದುರದೃಷ್ಟವೆಂದರೆ ನಮಗಿಂತ ಮೇಲೆ ಇಥಿಯೋಪಿಯಾ, ಕೀನ್ಯಾ, ಸುಡಾನ್‌ನಂತಹ ದೇಶಗಳಿವೆ. ಇದು ದೇಶಕ್ಕೆ ಹೆಮ್ಮೆ ತರುವ ಸಂಗತಿಯೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಮ್ಮೆ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಸಿದ್ದು ಆಪ್ತ ಹೊಳಬಸು ಶೆಟ್ಟರ
ಕ್ಷುಲ್ಲಕ ಆಹಾರ ರಾಜಕಾರಣ: ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯು ಅತ್ಯಂತ ಕ್ಷುಲ್ಲಕವಾದ ಆಹಾರದ ರಾಜಕಾರಣವನ್ನು ಮಾಡುತ್ತಿದೆ. ಮಾಂಸಾಹಾರದ ಮೇಲೆ ದಾಳಿ ನಡೆಸುತ್ತಿದೆ. ಮನುಷ್ಯರಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪ್ರೊಟೀನ್‌ಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಬಿಪಿಎಲ್ ಕಾರ್ಡ್‌ದಾರರಿಗೆ ತೊಗರಿಬೇಳೆ ನೀಡುತ್ತಿದ್ದೆವು. ಬೇಳೆ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ 3 ವರ್ಷಗಳಾಯಿತು. ಜತೆಗೆ ಬಡ ಜನರನ್ನು ಹಸಿವು ಮುಂತಾದ ಸಂಕಷ್ಟಗಳಿಂದ ಮೇಲೆತ್ತಲು ನೀಡುತ್ತಿರುವ ಸಬ್ಸಿಡಿಗಳನ್ನೇ ರದ್ದು ಮಾಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ ಎಂದು ಹೇಳಿದರು.