ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡದಿದ್ರೆ ಸಿದ್ದರಾಮಯ್ಯ ಮನೆ ಮುಂದೆ ಆತ್ಮಹತ್ಯೆ: ಸಿದ್ದು ಅಭಿಮಾನಿಗಳು
ರಾಜ್ಯಾದ್ಯಂತ ವಿವಿಧ ಮತಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೇಡಿಕೆ ಬೆನ್ನಲ್ಲೇ ಸಿದ್ದರಾಮಯ್ಯರನ್ನ ಬಿಡದ ಸ್ವಕ್ಷೇತ್ರದ ಜನ. ಸ್ಪರ್ಧೆ ಕುರಿತು ಸಿದ್ದರಾಮಯ್ಯಗೆ ಬೇಡಿಕೆ ಇಟ್ಟ ಬಾದಾಮಿ ಮತಕ್ಷೇತ್ರದ ಮುಖಂಡರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ನ.11): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಾದ್ಯಂತ ವಿವಿಧ ಮತಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಬೇಡಿಕೆ ಬಂದ ಬೆನ್ನಲ್ಲೇ ಸ್ವಕ್ಷೇತ್ರ ಬಾದಾಮಿಯ ಕೈ ಮುಖಂಡರು ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರ ಬೆನ್ನು ಬಿದ್ದಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯನವರು ಒಪ್ಪದಿದ್ದರೆ ಅವರ ಮನೆ ಎದುರೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳಿಂದ ಗೆಲವು ಕಂಡಿದ್ದು ಸಿದ್ದರಾಮಯ್ಯ, ತಮ್ಮ ರಾಜಕೀಯ ಪುನರ್ಜನ್ಮ ಪಡೆದಿದ್ದರು, ಇದರ ಬೆನ್ನಲ್ಲೇ ಬಾದಾಮಿ ಜನರ ಋಣ ತೀರಿಸಲು ಮುಂದಾದ ಸಿದ್ದರಾಮಯ್ಯ ಮೂರುವರೆ ಸಾವಿರ ಕೋಟಿ ರೂಪಾಯಿಗಳ ಅನುದಾನ ತಂದು ಮತಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ.
ಬಾದಾಮಿಯಿಂದ ಸಿದ್ದು ಸ್ಪರ್ಧೆ ಮಾಡದೇ ಹೋದ್ರೆ ಸಿದ್ದರಾಮಯ್ಯನವರ ಮನೆ ಮುಂದೆಯೇ ಆತ್ಮಹತ್ಯೆ
ಚುನಾವಣೆ ಇನ್ನೇನು ಸಮೀಪಿಸುತ್ತಿದ್ದಂತೆ ಇತ್ತ ರಾಜ್ಯಾದ್ಯಂತ ಎಲ್ಲೆಡೆ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಬಾದಾಮಿ ಮತಕ್ಷೇತ್ರದ ಕೈ ಮುಖಂಡರು, ಅಭಿಮಾನಿಗಳು ಇದೀಗ ಸಿದ್ದರಾಮಯ್ಯನವರಿಗೆ ಮತ್ತೇ ಬಾದಾಮಿಯಿಂದಲೆ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ದು, ಒಂದೊಮ್ಮೆ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧೆ ಮಾಡದೇ ಹೋದ್ರೆ ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯನವರ ಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಮುಚಖಂಡಯ್ಯ ಹಂಗರಗಿ ಹೇಳಿದ್ದಾರೆ.
ಬಣಜಿಗರ ಅವಹೇಳನ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ
ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಗೆದ್ದು ಸಿಎಂ ಆಗಬೇಕೆಂಬ ಆಶಯ...
ಇನ್ನು ಸಿದ್ದರಾಮಯ್ಯನವರು ಇಲ್ಲಿಯವರೆಗೆ ರಾಜ್ಯದ ತುಂಬ ಹೋದ ಕಡೆಗೆಲ್ಲಾ ತಮ್ಮ ಸ್ಪರ್ಧೆ ಬಗ್ಗೆ ಕೇಳಿದರೆ ಚುನಾವಣೆಗೆ ಇನ್ನೂ ಸಮಯ ಇದೆ ಅಂತ ಹೇಳುತ್ತಾ ಇದ್ರು, ಆದ್ರೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದು, ಹೀಗಾಗಿ ಸಿದ್ದರಾಮಯ್ಯನವರು ಈಗ ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಅರ್ಜಿಯನ್ನ ಸಲ್ಲಿಸಬೇಕು ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತಾಗಬೇಕೆಂಬ ಬೇಡಿಕೆಯನ್ನ ಸ್ವಕ್ಷೇತ್ರ ಬಾದಾಮಿಯ ಜನತೆ ಇರಿಸಿದ್ದು, ಈ ಮಧ್ಯೆ ಬಾದಾಮಿಯಿಂದ ಗೆಲುವು ಸಾದಿಸಿ ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಆಶಯವನ್ನಿಟ್ಟುಕೊಂಡು ಅವರನ್ನ ಮತ್ತೇ ಬಾದಾಮಿಯಿಂಧ ಸ್ಪರ್ಧೆ ಮಾಡುವಂತೆ ಕೋರುತ್ತಿದ್ದೇವೆ ಎಂದು ಕೈ ಮುಖಂಡ ಹೊಳಬಸು ಶೆಟ್ಟರ್ ಹೇಳಿದ್ದಾರೆ.
ಬಾದಾಮಿಯಿಂದ ಸಿದ್ದು ಕಣಕ್ಕಿಳಿದರೆ ಉತ್ತರ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಅನುಕೂಲ
ಇನ್ನು ಬಾದಾಮಿಯಿಂದ ಸಿದ್ದರಾಮಯ್ಯನವರು ಆಯ್ಕೆಯಾದ ಮೇಲೆ ಹೆಚ್ಚೆಚ್ಚು ಗಮನ ಸೆಳೆದಿದ್ದು, ಆದರೆ ಒಂದೊಮ್ಮೆ ಸಿದ್ದರಾಮಯ್ಯನವರು ಈ ಕ್ಷೇತ್ರದಲ್ಲಿ ಸ್ಫರ್ಧಿಸದೇ ಹೋದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದು, ಭಿನ್ನಮತಕ್ಕೂ ಹಾದಿ ಮಾಡಿಕೊಟ್ಟಂತಾಗುತ್ತದೆ, ಹೀಗಾಗಿ ಈ ಬಾರಿ ಸಿದ್ದರಾಮಯ್ಯನವರೇ ಮತ್ತೇ ಬಾದಾಮಿಯಿಂದ ಸ್ಫರ್ಧೆ ಮಾಡಬೇಕು, ಇದು ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೆ ಇಡೀ ಉತ್ತರ ಕರ್ನಾಟಕದ ದೃಷ್ಟಿಯಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಅನುಕೂಲವಾಗಲಿದೆ, ಹೀಗಾಗಿ ಶತಗತಾಯ ಸಿದ್ದರಾಮಯ್ಯನವರೇ ಈ ಬಾರಿ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನ ಆಗ್ರಹ ಇಟ್ಟಿದ್ದಾರೆ.
ಒಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹುತೇಕ ಮತಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಬೇಡಿಕೆ ಹೆಚ್ಚಿದ್ದು, ಇವುಗಳ ಮಧ್ಯೆ ಬಾದಾಮಿ ಮತಕ್ಷೇತ್ರದ ಕೈ ಮುಖಂಡರು ಮತ್ತು ಅಭಿಮಾನಿಗಳು ಒಕ್ಕೊರಲಿನಿಂದ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಬೇಡಿಕೆಯನ್ನಿಟ್ಟಿದ್ದು, ಇದಕ್ಕೆ ಸಿದ್ದರಾಮಯ್ಯ ಯಾವ ರೀತಿ ನಿಲುವು ತಾಳುತ್ತಾರೆ ಅಂತ ಕಾದು ನೋಡಬೇಕಿದೆ.