ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜು.28ಕ್ಕೆ 1 ವರ್ಷ ತುಂಬುತ್ತಿದ್ದು, ಈ ಪ್ರಯುಕ್ತ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಬೆಳಗಾವಿ, ಕಲಬುರಗಿ, ಮೈಸೂರು, ಬೆಂಗಳೂರು, ಮಂಗಳೂರಲ್ಲಿ ಪ್ರಾದೇಶಿಕ ಸಮಾವೇಶಗಳನ್ನು ನಡೆಸಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸಲು ತೀರ್ಮಾನಿಸ ಲಾಗಿದೆ.

ಬೆಂಗಳೂರು (ಜು.16): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್‌ 150’ ಕಾರ್ಯಗತಗೊಳಿಸುವ ಉದ್ದೇಶದಿಂದ ಪಕ್ಷ ಸಂಘಟನೆ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ತಂತ್ರ ರೂಪಿಸಿರುವ ಆಡಳಿತಾರೂಢ ಬಿಜೆಪಿ, ಆ ಭಾಗದ ಶಾಸಕರಿಗೆ ‘1+1’ ಸೂತ್ರದ ಗುರಿ ನೀಡಿದೆ. ಶುಕ್ರವಾರ ದೇವನಹಳ್ಳಿ ಬಳಿಯ ರೆಸಾರ್ಚ್‌ನಲ್ಲಿ ಸುಮಾರು 10 ತಾಸುಗಳಿಗೂ ಹೆಚ್ಚು ಕಾಲ ನಡೆದ ಪಕ್ಷದ ಪ್ರಮುಖರನ್ನು ಒಳಗೊಂಡ ‘ಚಿಂತನ ಸಭೆ’ಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಈ ‘1+1’ ಸೂತ್ರದ ಅನುಸಾರ ಹಳೆ ಮೈಸೂರು ಭಾಗದ ಹಾಲಿ ಶಾಸಕರು ತಾವು ಗೆಲ್ಲುವುದರ ಜತೆಗೆ ಮತ್ತೊಂದು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿಕೊಡುವ ಹೊಣೆ ಹೊರಬೇಕು. ತಾವು ಗೆಲ್ಲಿಸಿಕೊಡುವ ಕ್ಷೇತ್ರ ಯಾವುದು ಎಂಬುದರ ಹೆಸರನ್ನು ಶೀಘ್ರದಲ್ಲೇ ಪಕ್ಷದ ವರಿಷ್ಠರಿಗೆ ನೀಡಬೇಕು. ಜತೆಗೆ ತಕ್ಷಣದಿಂದಲೇ ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಕೆಲಸ ಆರಂಭಿಸಬೇಕು. ಇದಕ್ಕೆ ಅಗತ್ಯವಾದ ಸಹಕಾರವನ್ನು ಪಕ್ಷದ ವತಿಯಿಂದ ನೀಡಲಾಗುವುದು ಎಂದು ಸೂಚಿಸಲಾಗಿದೆ.

ಶಾಸಕರು ತಮ್ಮ ಪಕ್ಕದ ಕ್ಷೇತ್ರನ್ನೇ ಆಯ್ಕೆ ಮಾಡಿಕೊಂಡು ಗೆಲ್ಲಿಸಬೇಕು ಎಂದೇನೂ ಇಲ್ಲ. ಬೆಂಗಳೂರಿನ ಶಾಸಕರು ಚಾಮರಾಜನಗರ, ಹಾಸನ, ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪೈಕಿ ಯಾವುದಾದರೊಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ಹೊರ ಜಿಲ್ಲೆಯವರು ಬೆಂಗಳೂರು ಅಥವಾ ಸುತ್ತಮುತ್ತಲಿನ ಕ್ಷೇತ್ರವನ್ನು ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮುಖಂಡರ ಸಭೆಯಲ್ಲಿ ಮಿಷನ್‌ 50 ಯಶಸ್ವಿಗೊಳಿಸುವ ಬಗ್ಗೆಯೇ ಒತ್ತು ನೀಡಿ ಚರ್ಚೆ ನಡೆಸಲಾಯಿತು.

NEWS HOUR: ಯುದ್ಧ ಘೋಷಣೆಗೂ ಮುನ್ನವೇ ಬಿಜೆಪಿ ತಾಲೀಮು: ಜುಲೈ 28ಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಾಧನಾ ಸಮಾವೇಶ

ಸಭೆಯಲ್ಲಿ ಪ್ರಸ್ತಾಪವಾಗಿರುವ ಇತರ ಅಂಶಗಳು:

- ಸಚಿವರು ರಾಜ್ಯ ಪ್ರವಾಸ ಮಾಡುವ ಮೂಲಕ ಆ ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಒಂದು ಅಥವಾ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿ ಪ್ರವಾಸ ಕೈಗೊಳ್ಳುವುದು ಬೇಡ. ಒಂದಾದ ಮೇಲೆ ಮತ್ತೊಂದರಂತೆ ಎಲ್ಲ ಜಿಲ್ಲೆಗಳಿಗೂ ಸಚಿವರು ಪ್ರವಾಸ ಕೈಗೊಳ್ಳಬೇಕು.

- ಸರ್ಕಾರ ಮತ್ತು ಪಕ್ಷದ ನಡುವೆ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು.

- ಸಂಪುಟದ ಕೆಲವು ಸಚಿವರ ಕಾರ್ಯವೈಖರಿ ಸಮಾಧಾನಕರವಾಗಿಲ್ಲ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬಂದಿದೆ. ಅಂಥ ಸಚಿವರು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಂಡು ಉತ್ತಮವಾಗಿ ಕೆಲಸ ಮಾಡಬೇಕು.

- ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡುವುದು ಬೇಡ. ಕೆಲವು ಜಿಲ್ಲೆಗಳಲ್ಲಿ ಇನ್ನೂ ಬಿಜೆಪಿ, ಕೆಜೆಪಿ ಎಂಬ ತೆರೆಮರೆಯ ಗುದ್ದಾಟ ನಿಂತಿಲ್ಲ. ಅದನ್ನು ನಿವಾರಿಸುವುದಕ್ಕೆ ತಕ್ಷಣವೇ ಮುಖಂಡರು ಆಸ್ಥೆ ವಹಿಸಬೇಕು.

- ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಮತ್ತು ಸರ್ಕಾರದ ಘನತೆಗೆ ಧಕ್ಕೆ ತರುವಂಥ ಹೇಳಿಕೆಗಳನ್ನಾಗಲಿ, ಕೆಲಸವನ್ನಾಗಲಿ ಮಾಡಬಾರದು. ಇದು ಸಾಮಾಜಿಕ ಜಾಲತಾಣ ಯುಗವಾಗಿದ್ದರಿಂದ ಎಚ್ಚರಿಕೆಯಿಂದ ಇರಬೇಕು. ಒಬ್ಬ ಮುಖಂಡ ಅಥವಾ ಕಾರ್ಯಕರ್ತ ಮಾಡುವ ಕೆಲಸ ಅಥವಾ ನೀಡುವ ಹೇಳಿಕೆಯಿಂದ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

- ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಹೇಗೆ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ಇದುವರೆಗೆ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನತೆಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಬೇಕು.

ಬಿಜೆಪಿ ತೊರೆಯುತ್ತಾರಾ ಹಿರಿಯ ನಾಯಕ ಸಂಗಣ್ಣ ಕರಡಿ..?

ಭಾರತ್‌ ಜೋಡೋ ಬಗ್ಗೆ ಚರ್ಚೆ: ಪ್ರತಿಪಕ್ಷ ಕಾಂಗ್ರೆಸ್‌ ಹಮ್ಮಿಕೊಳ್ಳುತ್ತಿರುವ ಭಾರತ್‌ ಜೋಡೋ ಕಾರ್ಯಕ್ರಮವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಬಿಜೆಪಿ ಹಿರಿಯ ನಾಯಕರು ಸಭೆಯಲ್ಲಿದ್ದ ಪಕ್ಷದ ಇತರ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ಈ ಭಾರತ್‌ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಮುಖಂಡರು ಪ್ರಸ್ತಾಪ ಮಾಡುವ ವಿಚಾರಗಳನ್ನು ಗಂಭಿರವಾಗಿ ಪರಿಗಣಿಸಿ ಎದಿರೇಟು ನೀಡಬೇಕು. ಅವರ ಆರೋಪಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಜನರಿಗೆ ಸತ್ಯಾಂಶ ಗೊತ್ತಾಗುವಂತೆ ಮಾಡಬೇಕು ಎಂದಿದ್ದಾರೆ ಎನ್ನಲಾಗಿದೆ.