ಚಿತ್ರನಟಿ ತಾರಾ, ಶೃತಿಗೆ ಜೈಲು ಭೀತಿ: ಎಫ್‌ಐಆರ್ ದಾಖಲಿಸಿದ ಚುನಾವಣಾ ಆಯೋಗ
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸ್ವಂತ ಉದ್ದೇಶಕ್ಕಾಗಿ ಸರ್ಕಾರಿ ವಾಹನ ಬಳಕೆ ಮಾಡಿದ ನಟಿ ತಾರಾ ಅನುರಾಧಾ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ಏ.26): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ ಸ್ಟಾರ್ ಪ್ರಚಾರಕಿ ನಟಿ ಶೃತಿ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಈಗ ಮತ್ತೊಬ್ಬ ನಟಿ, ಬಿಜೆಪಿಯ ಸ್ಟಾರ್ ಪ್ರಚಾರಕಿ ತಾರಾ ಅನುರಾಧಾ ಮೇಲೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ನೀಡಿದ ಸಾಕ್ಷಿ ಆಧಾರವಾಗಿ ಎಫ್‌ಐಆರ್ ದಾಖಲಿಸಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ತೀವ್ರ ಜೋರಾಗಿದೆ. ಎಲ್ಲಿ ನೋಡಿದರಲ್ಲಿ ಚುನಾವಣೆಯದ್ದೇ ಗುಂಗು ಎನ್ನುವಂತಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಅವರ ಪರ ಪ್ರಚಾರ ಮಾಡಲು ಹೋದವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಾರೆಯೇ ಎಂಬುದನ್ನು ನೋಡಲಿಕ್ಕೆಂದೇ ಕಾದು ಕುಳಿತುಕೊಳ್ಳುವವರೂ ಇದ್ದಾರೆ. ಆದರೆ, ಹೀಗೆ ಕಾಯುತ್ತಾ ಕುಳಿತಿದ್ದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರಿಗೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ ಅನುರಾಧ ಆಹಾರವಾಗಿದ್ದಾರೆ. ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಅರಣ್ಯ ಅಭಿವೃದ್ಧಿ ನಿಗಮದ (ಸರ್ಕಾರಿ ವಾಹನ) ಕಾರನ್ನು ತೆಗೆದುಕೊಂಡು ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಇದನ್ನು ನೋಡಿದ ಕಾಂಗ್ರೆಸ್ ನಾಯಕರು ಇಂದು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜಕಾರಣದಲ್ಲಿ ನಾಲಿಗೆ ಹರಿಬಿಟ್ಟ ನಟಿ ಶೃತಿ ವಿರುದ್ಧ ಕೇಸ್ ದಾಖಲು
ಸರ್ಕಾರಿ ವಾಹನ ಬಳಸಿದ ವೀಡಿಯೋ ಲಭ್ಯ: ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದೇ ತಿಂಗಳ ಏಪ್ರಿಲ್ 7ರಂದು ಮಧ್ಯಾಹ್ನ ನಟಿ ತಾರಾ ಅನುರಾಧಾ ಅವರು, ಸರ್ಕಾರಿ ವಾಹನ ಕೆಎ-04 ಎಂವಿ 1977 ಸಂಖ್ಯೆಯ ಸಿಲ್ವರ್ ಬಣ್ಣದ ವರ್ಣಾ ಕಾರನ್ನು ತಮ್ಮ ವೈಯಕ್ತಿಕ ಕಾರ್ಯಗಳಿಗಾಗಿ ಬಳಕೆ ಆಡಿದ್ದಾರೆ ಎಂಬುದನ್ನು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ವೀಡಿಯೋ ಸಮೇತ ದಾಖಲೆಗಳೊಂದಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ತಕ್ಷಣ ಚುನಾವಣಾ ಪರಿವೀಕ್ಷಕರು ತಾರಾ ಅನುರಾಧಾ ಅವರ ಮನೆ ತೆರಳಿ ನೋಡಿದಾಗಲೂ ಸರ್ಕಾರಿ ವಾಹನ ಮನೆಯಲ್ಲಿ ಇಲ್ಲದಿರುವುದು ಖಚಿತವಾಗಿದೆ. ಹೀಗಾಗಿ, ಕಾನೂನುರೀತ್ಯಾ ನಟಿ ತಾರಾ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಹದಿನೈದು ದಿನಗಳ ಹಿಂದೆ ಶೃತಿ ಮೇಲೆ ಎಫ್‌ಐಆರ್: ಏಪ್ರಿಲ್ ತಿಂಗಳ ಆರಂಭದಲ್ಲಿ ಹಾವೇರಿ ಜಿಲ್ಲೆಯ ಹಿರೇಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಸ್ಟಾರ್ ಪ್ರಚಾರಕಿಯಾಗಿ ಪಾಲ್ಗೊಂಡಿದ್ದ ನಟಿ ಶೃತಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಲಂ 505 ರಡಿ ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ನಟ ಹಾಗೂ ಮಾಜಿ ಸಚಿವ ಬಿ ಸಿ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿದ್ದ ನಟಿ ಶೃತಿ ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ ಹಾಗೂ ಭಯ ಭೀತಿಯನ್ನುಂಟು ಮಾಡಿದ ಅಪರಾಧವನ್ನು ಎಸಗಿದ್ದಾರೆ ಎಂದು ಕೇಸ್ ದಾಖಲಿಸಲಾಗಿದೆ.
Berngaluru: ರ್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುವ ಬೈಕ್‌ನಿಂದಲೇ ಜಿಗಿದ ಯುವತಿ
ಚುನಾವಣಾಧಿಕಾರಿಗಳ ಹದ್ದಿನ ಕಣ್ಣು: ಎಲ್ಲೆಲ್ಲೂ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನು ಹೊರತಾಗಿ ಪರಸ್ಪರ ವಿರೋಧ ಪಕ್ಷದವರು ಮಾತ್ರ ಇಂತಹ ಘಟನೆಗಳನ್ನು ಪರಿಶೀಲನೆ ಮಾಡುವುದಕ್ಕಾಗಿಯೇ ಕೆಲವು ಸಿಬ್ಬಂದಿಯನ್ನು ಕೂಡ ನೇಮಕ ಮಾಡಿರುತ್ತವೆ. ಆದರೆ, ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು, ಸ್ಟಾರ್ ಪ್ರಚಾರಕರು ಎಷ್ಟೇ ಕಾಳಜಿವಹಿಸಿದರೂ ಕೆಲವೊಮ್ಮೆ ತಪ್ಪುಗಳು ನಡೆಯುವುದು ಸಾಮಾನ್ಯವಾಗಿರುತ್ತದೆ. ಆದರೆ, ಇಂತಹ ವಿಚಾರಗಳಿಗೆ ಕಾಯುತ್ತಿರುವ ವಿರೋಧ ಪಕ್ಷದವರು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡದೇ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸು ದಾಖಲಿಸಿ ಕಾನೂನು ಕ್ರಮ ಆಗುವಂತೆ ಮಾಡುವುದಕ್ಕೆ ಹಿಂದೆ ಬೀಳುವುದಿಲ್ಲ.