ದೇಶದ ಕಟ್ಟಕಡೆಯ ನಾಗರಿಕನಿಗೂ ಸರ್ಕಾರಿ ಯೋಜನೆಯ ಸೌಲಭ್ಯಗಳು ಸಿಗಬೇಕೆಂಬ ನಿಟ್ಟಿನಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು (ಏ.08): ದೇಶದ ಕಟ್ಟಕಡೆಯ ನಾಗರಿಕನಿಗೂ ಸರ್ಕಾರಿ ಯೋಜನೆಯ ಸೌಲಭ್ಯಗಳು ಸಿಗಬೇಕೆಂಬ ನಿಟ್ಟಿನಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಗರದಲ್ಲಿ ಬಿಜೆಪಿ ಡಿಜಿಟಲ್‌ ಮಾಧ್ಯಮ ಪ್ರಕೋಷ್ಠದ ವತಿಯಿಂದ ಬೆಂಗಳೂರು ಮಹಾನಗರ ವಿಭಾಗದ ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಸೌಲಭ್ಯಗಳು ಡಿಬಿಟಿ ಮೂಲಕ ನೇರ ವರ್ಗಾವಣೆಯಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣಗೊಂಡು ಫಲಾನುಭವಿಗಳು ಪೂರ್ಣ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಎಂದರೆ ಕಟ್ಟಕಡೆಯ ವ್ಯಕ್ತಿಯವರೆಗೆ ಅಕ್ಕಿ ತಲುಪುತ್ತದೆ. ಕಿಸಾನ್‌ ಸಮ್ಮಾನ್‌ ನಿಧಿ 12 ಕೋಟಿ ಸಣ್ಣ ರೈತರಿಗೆ ತಲುಪುತ್ತದೆ. ಯಾವುದೇ ಯೋಜನೆಗಳ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿಯೇ ಡಬಲ್‌ ಎಂಜಿನ್‌ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟಾಚಾರ ಕಡಿಮೆ ಮಾಡಲು ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈ ವಿಚಾರದಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಹುನಗುಂದ ಹೋರಾಟ: ಬಿಜೆಪಿ-ಕಾಂಗ್ರೆಸ್‌ ನೇರ ಹಣಾಹಣಿಗೆ ಪಕ್ಷೇತರರ ಅಡ್ಡಿ

ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಫಲವಾಗಿದೆ. ಶೇ.98ರಷ್ಟು ಲಸಿಕೆ ವಿತರಣೆ ಪ್ರಮಾಣ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 5.5 ಲಕ್ಷ ಕೋಟಿ ರು. ವಿವಿಧ ಯೋಜನೆಗಳ ಮೊತ್ತವು ಡಿಬಿಟಿ ಮೂಲಕ ತಲುಪಿದೆ. ಆರ್ಥಿಕ ವರ್ಷ ಮುಗಿಯುವ ವೇಳೆಗೆ 6.7 ಲಕ್ಷ ಕೋಟಿ ರು.ಗಳನ್ನು ಡಿಬಿಟಿ ಮೂಲಕ ಕಳುಹಿಸಲಾಗುವುದು. ಕಳೆದ ಸಾಲಿನಲ್ಲಿ 6.2 ಲಕ್ಷ ಕೋಟಿ ರು. ಡಿಬಿಟಿ ಮಾಡಲಾಗಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಡಿಜಿಟಲ್‌ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್‌ ಪುತ್ತೂರು, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್‌, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್‌.ಆರ್‌.ರಮೇಶ್‌ ಇತರರು ಉಪಸ್ಥಿತರಿದ್ದರು.

ಬಿಜೆಪಿಗೆ ಮತ್ತೆ ಅಧಿಕಾರ ಖಚಿತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಭವಿಷ್ಯ ನುಡಿದಿದ್ದಾರೆ. ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲ ವಾರ್ಡ್‌ನ ಶ್ರೀನಿವಾಗಿಲುನಲ್ಲಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾರಿ ಚುನಾವಣೆಯಲ್ಲಿ ಬಿಜೆಪಿ 125ರಿಂದ 135 ಸ್ಥಾನ ಗೆದ್ದು, ಮತ್ತೆ ಸರ್ಕಾರ ರಚಿಸಲಿದೆ ಎಂದರು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿಂದೇಟು ಹಾಕುತ್ತಿದ್ದು, ಈಗಾಗಲೇ ಆಯ್ಕೆ ಮಾಡಿರುವ ಅಭ್ಯರ್ಥಿಗಳನ್ನು ನೋಡಿದರೆ, ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಸುಲಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ರಾಜ್ಯದ ಉತ್ತಮ ಆಡಳಿತ ಬಿಜೆಪಿಗೆ ವರದಾನವಾಗಲಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಬಿಜೆಪಿ ಗೆಲುವು ಖಚಿತ ಎಂದರು.

ಕರಗ ಕಣ್ತುಂಬಿಕೊಂಡ 14 ಲಕ್ಷ ಭಕ್ತರು: 22 ಕಿ.ಮೀ. ಸಂಚರಿಸಿದ ಶಕ್ತ್ಯುತ್ಸವ

ಹಾಲಿ ಶಾಸಕರಾದ ರಾಮಲಿಂಗಾರೆಡ್ಡಿ ಅವರ ದುರಾಡಳಿತ ಹಾಗೂ ಈ ಭಾರಿ ಬಿಜೆಪಿಯಲ್ಲಿ ಬಿಟಿಎಂನಲ್ಲಿ ಕಮಲ ಅರಳಿಸಲೇಬೇಕೆಂಬ ಕಾರ‍್ಯಕರ್ತರ ಉತ್ಸಾಹವೇ ಮುಂದಿನ ಗೆಲುವಿನ ಸೋಪಾನವಾಗಲಿದೆ. ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದರಿಂದ ಪಕ್ಕದಲ್ಲಿಯೇ ಇರುವ ಜಯನಗರ, ಆನೇಕಲ್‌ಗೆ ಸೇರಿದಂತೆ ಇತರೇ ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಾಧ್ಯವಾಗಲಿದೆ. ಆದುದರಿಂದ ಕಾರ್ಯಕರ್ತರು ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮವಸಿ ಎಂದು ಕಿಮಾತು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.