ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಪ್ರಪಚಾರ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಸಾರಿಗೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.
ರಾಮನಗರ (ಮೇ.18): ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಪ್ರಪಚಾರ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಸಾರಿಗೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುವ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ಪೊಲೀಸರು ಕಾನೂನಿನಡಿ ತಿಳಿಸಬೇಕು. ಅದಕ್ಕಾಗಿ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಪ್ರಕಟವಾದಾಗ ಮುಂದೆ ಈ ರೀತಿಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದರು.
ಎಸ್ಪಿ ಶ್ರೀನಿವಾಸ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ರೀತಿಯ ೧೧ ಪ್ರಕರಣಗಳು ದಾಖಲಾಗಿವೆ. ೯ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಎರಡು ಪ್ರಕರಣ ವಿಚಾರಣೆಯ ಹಂತದಲ್ಲಿವೆ. ಜಿಲ್ಲೆಯ ಬಿಡದಿ ಬಳಿ ಇತ್ತೀಚೆಗೆ ನಡೆದಿರುವ ಬಾಲಕಿಯ ಹತ್ಯಾ ಘಟನೆಯಂತಹ ಪ್ರಕರಣಗಳು ವರದಿಯಾದಾಗ ಪೊಲೀಸರು ಅಗತ್ಯ ಕ್ರಮ ಕೈಗೊಂಡು ಆ ಘಟನೆಯ ನೈಜ ವಿಚಾರ ಏನೆಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಜಿಲ್ಲೆಯಲ್ಲಿ ದುರ್ಘಟನೆಗಳು ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರ ವಹಿಸಬೇಕು. ಜಿಲ್ಲೆಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗುತ್ತಿದೆ ೧೦,೬೦೦ ಸಿಸಿಟಿವಿಗಳನ್ನು ಜಿಯೋ ಟ್ಯಾಗಿಂಗ್ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ರಾಜ್ಯದಲ್ಲಿ ಸ್ವಂತ ಸಾಮರ್ಥ್ಯದಲ್ಲಿ ಕಾಂಗ್ರೆಸ್ ಆಡಳಿತ: ಸಚಿವ ಡಾ.ಎಂ.ಸಿ.ಸುಧಾಕರ್
ಹಳ್ಳಿಗಳಿಗೆ ಬಸ್ ಕಲ್ಪಿಸಿ: ಕೆಎಸ್ಆರ್‌ಟಿಸಿ ವತಿಯಿಂದ ಜಿಲ್ಲೆಯ ಕನಕಪುರ, ಚನ್ನಪಟ್ಟಣ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬಸ್ ಸೌಲಭ್ಯವಿಲ್ಲದ ಹಳ್ಳಿಗಳಿಗೆ ಕೂಡಲೇ ಬಸ್ ಸೌಕರ್ಯ ಕಲ್ಪಿಸಿ ಕೊಡುವಂತೆ ಹಾಗೂ ಶಾಲಾ ಅವಧಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಾಂಗಕ್ಕೆ ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿ ಕೊರೆಯಿಸಲು ಇದೀಗ ರಾಜ್ಯ ವ್ಯಾಪ್ತಿ ಒಂದೇ ಸಂಸ್ಥೆ ಕೆಲಸ ಮಾಡಲು ಟೆಂಡರ್ ಪಡೆದಿದೆ. ಅದನ್ನು ಜಿಲ್ಲಾ ಮಟ್ಟದಲ್ಲಿಯೇ ಟಿಂಡರ್ ಮಾಡಲು ಅನುಕೂಲವಾಗುವಂತೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವುದು.
ಯೋಜನೆಯಡಿ ರಾಜ್ಯಮಟ್ಟದಲ್ಲಿ ಟೆಂಡರ್ ಪಡೆದಿದ್ದ ಕಂಪನಿಯವರು ಕಳೆದ ಮೂರು ವರ್ಷದಿಂದ ಸೂಕ್ತವಾಗಿ ಕೊಳವೆ ಬಾವಿ ಕೊರೆಯುತ್ತಿಲ್ಲ. ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಜಲ್ ಜೀವನ್ ಮಿಷನ್ ಯೋಜನೆಗಳ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕಳೆದ ಕೆಡಿಪಿ ಸಭೆಯಲ್ಲಿ ಜಿಪಂ ಸಿಇಒಗೆ ಸೂಚಿಸಲಾಗಿತ್ತು, ಕೂಡಲೇ ವರದಿ ನೀಡುವಂತೆ ಸಚಿವರು ತಿಳಿಸಿದರು. ಜಿಪಂ ಸಿಇಒ ಅನ್ಮೋಲ್ ಜೈಲ್ ತನಿಖೆ ಪ್ರಗತಿಯಲ್ಲಿದೆ ಎಂದರು.
ತುಮಕೂರಿಗೆ ಶೀಘ್ರ ಮೆಟ್ರೋ ಯೋಜನೆ: ಕೇಂದ್ರ ಸಚಿವ ವಿ.ಸೋಮಣ್ಣ
ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ರಾಜ್ಯದ ಎಲ್ಲಾ ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಕುಡಿಯುವ ನೀರು ಪೂರೈಸುತ್ತಿದ್ದ ಕೊಳವೆ ಬಾವಿಗಳು ಬರಿದಾಗಿದ್ದಲ್ಲಿ ಸಂಬಂಧಿಸಿದ ತಾಲೂಕಿನ ಇಒಗಳು ಆ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಕೊಳ್ಳಬೇಕು, ಬೋರ್‌ವೆಲ್‌ನಲ್ಲಿ ನೀರು ಲಭ್ಯವಿಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ೧೬೩ ಕೊಳವೆಬಾವಿಗಳ ಸಂಪರ್ಕಗಳಲ್ಲಿ ೧೬೨ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ೧,೫೩೭ ಟ್ರಾನ್ಫಾರ್ಮರ್‌ಗಳಿಗೆ ಈಗಾಗಲೇ ಟೆಂಡರ್ ಆಗಿದೆ, ಟ್ರಾನ್ಸ್‌ಫಾರ್ಮರ್‌ಗಳು ಹಾಳಾದಲ್ಲಿ ಕೂಡಲೇ ಅಳವಡಿಸಿಕೊಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.


