ವಿಧಾನಸಭೆ ಚುನಾವಣೆಗೆ ಇನ್ನು 6 ತಿಂಗಳು ಇರುವಾಗಲೇ ಕಾಂಗ್ರೆಸ್ ಟಿಕೆಟ್‌ಗೆ ಫೈಟ್..!
ಹನುಮನ ಬಾಲದಂತೆ ಬೆಳೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ, ನಾನು ಟಿಕೆಟ್ ಆಕಾಂಕ್ಷಿ ಎಂದ ಮಾಜಿ ZP ವಿನೋದ್ ಪಾಟೀಲ್
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ(ಅ.06): ವಿಧಾನಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿಯಿದೆ. ಆದ್ರೆ ಯಾದಗಿರಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿಯೇ ನಡೀತಾ ಇದೆ. ಆದ್ರೆ ಎಲ್ಲಾ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಹೆಚ್ಚಿದೆ. ಜೊತೆಗೆ ಹಿಂದುಳಿದ ವರ್ಗದವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಬೇಕು ಅಂತ ಹಲವಾರು ಆಕಾಂಕ್ಷಿ ಕಾಂಗ್ರೆಸ್ ನಾಯಕರುಗಳನ್ನು ಭೇಟಿಯಾಗಿ ಒಂದು ಸುತ್ರಿನ ಮಾತುಕತೆಯನ್ನು ಮುಗಿಸಿ ಬಂದಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ವಿನೋದ್ ಪಾಟೀಲ್ ನಾನು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.
ಯಾದಗಿರಿ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡುವುದೇ ಚಾಲೆಂಜ್..?
ಯಾದಗಿರಿ ಮತಕೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗ್ತಾರೆ ಎಂಬ ಪ್ರಶ್ನೆ ಕಾರ್ತಕರ್ತರಿಗೆ ಗೊಂದಲವಾಗಿ ಪರಿಣಮಿಸಿದೆ. ಯಾದಗಿರಿ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಕೊರತೆಯಿದೆ. ನಾಯಕರಲ್ಲಿ ಯಾವುದೇ ಸಮನ್ವಯತೆ ಕಾಣುತ್ತಿಲ್ಲ. ಪ್ರಮುಖವಾಗಿ ಕಾಂಗ್ರೆಸ್‌ನಲ್ಲಿರುವ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಈಗ ಹನುಮನ ಬಾಲದಂತೆ ಬೆಳೆದಿದೆ. ಚೆನ್ನಾರೆಡ್ಡಿಗೌಡ ತುನ್ನೂರು, ಎ.ಸಿ.ಕಾಡ್ಲೂರ್, ಮರಿಗೌಡ ಹುಲಕಲ್, ಡಾ.ಭೀಮಣ್ಣ ಮೇಟಿ, ಡಾ.ಎಸ್.ಬಿ.ಕಾಮರೆಡ್ಡಿ ಈಗ ಇದರ ಮಧ್ಯೆ ನಾನು ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಪಾಟೀಲ್ ಹೇಳಿದ್ದು ನೋಡಿದ್ರೆ ಕಾಂಗ್ರೇಸ್ ನಲ್ಲಿ ಇನ್ನು ಆಕಾಂಕ್ಷಿಗಳ ದಂಡು ಇದ್ದಂತೆ ಕಾಣ್ತಾ ಇದೆ. ಹಾಗಾಗಿ ಕಾಂಗ್ರೇಸ್ ನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೋಲಿಸಿದಂಗೆ, ಟಿಕೆಟ್ ಗಾಗಿ ನಾ ಮುಂದು, ತಾ ಮುಂದು ಎಂದು ಪಕ್ಷ ಸಂಘಟನೆ ಮಾಡದೇ ಕೇವಲ ಟಿಕೆಟ್ ಗಾಗಿ ಹೋರಾಟ ಮಾಡಿದಂಗೆ ಕಾಣ್ತಾ ಇದ್ದು, ಈಗ ಕಾಂಗ್ರೆಸ್ ಮತ್ತೊಂದು ಫಜೀತಿ ಎದುರಾಗಿದ್ದು ಯಾರಿಗೆ 2023 ರ ವಿಧಾನಸಭಾ ಟಿಕೆಟ್ ನೀಡಬೇಕು ಎಂಬ ಪ್ರಶ್ನೆ ಕಾಡುತ್ತಿದೆ, ಒಬ್ಬರಿಗೆ ಮಾತ್ರ ಟಿಕೆಟ್ ಕೊಡೋಕೆ ಸಾಧ್ಯ, ಉಳಿದವರು ಪಕ್ಷದಲ್ಲಿ ಉಳಿತಾರ ಅಥವಾ ಪಕ್ಷ ಬಿಟ್ಟು ಬೇರೆ ಕಡೆ ಮುಖ ಮಾಡ್ತಾರಾ ಎಂಬುದೇ ಹೊಸ ಟೆನ್ಷನ್ ಶುರುವಾಗಿದೆ. ಹಾಗಾಗಿ ಕಾಂಗ್ರೇಸ್ ಪಕ್ಷಕ್ಕೆ ಯಾದಗಿರಿ ಮತಕ್ಷೇತ್ರಕ್ಕೆ ಟಿಕೆಟ್ ನೀಡುವುದೇ ಒಂದು ಸವಾಲಿನ ಕೆಲಸವಾಗಿದೆ.
ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ: ರೂಪ ಶಶಿಧರ್
ಕಾರ್ಯಕರ್ತರ ಅಭಿಪ್ರಾಯ ಪಡೆದು ಗೆಲ್ಲುವ ಕುದರೆಗೆ ಟಿಕೆಟ್ ನೀಡಬೇಕು: ವಿನೋದ ಪಾಟೀಲ್
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ ಪಾಟೀಲ್, ಯಾರಿಗೆ ಜನಾಶೀರ್ವಾದ, ಜನಸಂಪರ್ಕ ಇರುವ ಕಾರ್ಯಕರ್ತರನ್ನು ಅಭಿಪ್ರಾಯ ತೆಗೆದುಕೊಂಡು ಟಿಕೆಟ್ ನೀಡಬೇಕು. ಜೊತೆಗೆ ನಮ್ಮ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ಥಳೀಯ ನಾಯಕರಾದ ಶರಣಬಸಪ್ಪ ದರ್ಶನಾಪುರ, ಮರಿಗೌಡ ಹಲಕಲ್, ರಾಜಾ ವೆಂಕಟಪ್ಪ ನಾಯಕ ಅವರ ಜೊತೆ ಕುಳಿತು ಗೆಲ್ಲುವ ಕುದರೆಯನ್ನು ಕಣಕ್ಕಿಳಿಸಬೇಕು. ಯಾದಗಿರಿ ಮತಕ್ಷೇತ್ರಕ್ಕೆ 14 ಬಾರಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಅದರಲ್ಲಿ 1 ಬಾರಿ ಮಾತ್ರ ಹಿಂದುಳಿದ ವರ್ಗದವರು ಶಾಸಕರಾಗಿದ್ದಾರೆ. 13 ಬಾರಿ ಬೇರೆಯವರು ಶಾಸಕರಾಗಿದ್ದಾರೆ. ಹಾಗಾಗಿ ಈ ಬಾರಿ ಹಿಂದುಳಿದ ವರ್ಗಕ್ಕೆ ಒಂದು ಅವಕಾಶ ನೀಡಬೇಕು. ಹಿಂದುಳಿದ ವರ್ಗದಲ್ಲಿ ಸಾಕಷ್ಟು ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಮರಿಗೌಡ ಹುಲಕಲ್, ಎ.ಸಿ.ಕಾಡ್ಲೂರ್, ಶರಣಪ್ಪ ಸಲಾದಪುರ, ಡಾ.ಭೀಮಣ್ಣ ಮೇಟಿ, ಮಲ್ಲಣ್ಣ ದಾಸನಕೇರಿ, ಭಾಷಿಮೀಯಾ ವಡಿಗೇರಾ ಇದ್ದಾರೆ. ಬೇರೆ ಪಕ್ಷದಿಂದ ಬಂದವರು ಕಾಂಗ್ರೇಸ್ ನಲ್ಲಿ ಹೆಚ್ಚಾಗಿಯೇ ಇದಾರೆ. ಡಾ.ಭೀಮಣ್ಣ ಮೇಟಿ, ಎ.ಸಿ.ಕಾಡ್ಲೂರ್, ಡಾ.ಎಸ್.ಬಿ.ಕಾಮರೆಡ್ಡಿ ಈ ಮೂವರು ಕಾಂಗ್ರೇಸ್ ಪಕ್ಷಕ್ಕೆ ಬಂದಿದ್ದು ಟಿಕೆಟ್ ಗಾಗಿ ಸಾಕಷ್ಟು ಸರ್ಕಸ್ ನಡೆಸ್ತಿದ್ದಾರೆ.
ಮರಳಿ ಗೂಡಿಗೆ ಮರಳ್ತಾರ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ..?
ಯಾದಗಿರಿ ಮತಕ್ಷೇತ್ರದ ಮಾಜಿ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರಿಗೆ ವಯಸ್ಸಾಗಿದೆ, ಆದ್ರೆ ಅವರ ವರ್ಚಸ್ಸು ಮಾತ್ರ ವಯಸ್ಸಿಗಿಂತ ಜಾಸ್ತಿನೇ ಇದೆ. ಯಾದಗಿರಿ ಮತಕ್ಷೇತ್ರದಲ್ಲಿ ತನ್ನದೆಯಾದ ಹಿಡಿತ, ತನ್ನದೆಯಾದ ಪ್ರಭಾವವನ್ನು ಹೊಂದಿರುವ ಜೆಂಟ್ಲಮ್ಯಾನ್ ಪೊಲಿಟಿಷಿಯಮ್ ಡಾ.ಎ.ಬಿ.ಮಾಲಕರೆಡ್ಡಿ ಹಾಗಾಗಿ ಅವರು ಮತ್ತೆ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಬಂದು ಅಭ್ಯರ್ಥಿಯಾಗ್ತಾರಾ ಎಂಬ ಆಶಾಭಾವನೆ ಸಾಕಷ್ಟು ಕಾಂಗ್ರೇಸ್ ಕಾರ್ಯಕರ್ತರಲ್ಲಿ ಹುಟ್ಟಿದೆ. ಆದ್ರೆ ಡಾ.ಎ.ಬಿ.ಮಾಲಕರೆಡ್ಡಿ ಈಗ ಬಿಜೆಪಿಯಲ್ಲಿದ್ದು, ಅವರ ನಡೆ ಯಾವ ಕಡೆ ಇದೆ ಎಂಬುದೇ ಸಸ್ಪೆನ್ಸ್ ಆಗಿದೆ.