ಹಾನಗಲ್‌ ಉಪಕದನ: 40 ವರ್ಷದಿಂದ ಇಬ್ಬರ ನಡುವೆಯೇ ಫೈಟ್‌..!

*   1968ರಲ್ಲಿ ಬಿ.ಆರ್‌. ಪಾಟೀಲ್‌, ಈಗ ಉದಾಸಿ ನಿಧನದಿಂದ ಉಪ ಚುನಾವಣೆ
*   ಇಲ್ಲಿ ಯಾವಾಗಲೂ ಉದಾಸಿ ವರ್ಸಸ್‌ ತಹಶೀಲ್ದಾರ್‌
*   ಕಾಂಗ್ರೆಸ್‌ನಲ್ಲಿ ಶ್ರೀನಿವಾಸ ಮಾನೆ ಅಥವಾ ತಹಶೀಲ್ದಾರ್‌ ನಡುವೆ ಟಿಕೆಟ್‌ಗಾಗಿ ಪೈಪೋಟಿ

Fight Between the Two Since 40 Years in Hanagal Assembly constituency grg

ನಾರಾಯಣ ಹೆಗಡೆ

ಹಾವೇರಿ(ಅ.01):  ಸಿ.ಎಂ.ಉದಾಸಿ(CM Udasi) ನಿಧನದಿಂದ ತೆರವಾಗಿರುವ ಹಾನಗಲ್‌ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಇದು ಈ ಕ್ಷೇತ್ರದಲ್ಲಿ ಶಾಸಕರೊಬ್ಬರ ನಿಧನದಿಂದಾಗಿ ನಡೆಯುತ್ತಿರುವ ಎರಡನೇ ಉಪಚುನಾವಣೆ.

1967ರ ಚುನಾವಣೆಯಲ್ಲಿ ಬಿ.ಆರ್‌.ಪಾಟೀಲ್‌ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಅವರ ನಿಧನದಿಂದಾಗಿ 1968ರಲ್ಲಿ ಉಪಚುನಾವಣೆ(Byelection) ನಡೆದಿತ್ತು. ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿ ಎನಿಸಿದ್ದ ಸಿ.ಎಂ.ಉದಾಸಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಒಟ್ಟು 6 ಬಾರಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಪಕ್ಷೇತರರಾಗಿ, ಜನತಾಪಕ್ಷದಿಂದ, ಜನತಾದಳದಿಂದ, ಕೆಜೆಪಿ ಹಾಗೂ ಬಿಜೆಪಿ ಹೀಗೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರು. ಆದರೆ, ಜೂ.8ರಂದು ಅವರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿದೆ.

ಇಬ್ಬರ ನಡುವೆಯೇ ಫೈಟ್‌:

ಕಳೆದ 40 ವರ್ಷಗಳ ಚುನಾವಣಾ ಇತಿಹಾಸ ಅವಲೋಕಿಸಿದಾಗ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್‌(Manohar Tahashildar) ಬಿಟ್ಟರೆ ಬೇರೆ ಯಾರೂ ಆಯ್ಕೆಯಾಗಿಲ್ಲ ಎಂಬುದು ಗಮನಾರ್ಹ. 2018ರ ಚುನಾವಣೆ ಹೊರತುಪಡಿಸಿದರೆ 40 ವರ್ಷಗಳಿಂದ ಉದಾಸಿ ಮತ್ತು ತಹಶೀಲ್ದಾರ್‌ ನಡುವಿನ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗಿತ್ತು. ಇದೀಗ ಉದಾಸಿ ಅವರ ನಿಧನದಿಂದ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಕಾಣುತ್ತಿದೆ. 1978ರಿಂದ ಇಲ್ಲಿಯವರೆಗೆ ಅಂದರೆ ಬರೊಬ್ಬರಿ 40 ವರ್ಷಗಳ ಕಾಲ ಕ್ಷೇತ್ರದ ಜನತೆ ಒಮ್ಮೆ ಉದಾಸಿ ಅವರನ್ನು, ಮತ್ತೊಮ್ಮೆ ಮನೋಹರ ತಹಶೀಲ್ದಾರ್‌ ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತ ರಾಜಕೀಯ ಜಾಣ್ಮೆ ಪ್ರದರ್ಶಿಸುತ್ತ ಬಂದಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಮಹತ್ವ ನೀಡುವ ಹಾನಗಲ್‌ ರಾಜ್ಯ ರಾಜಕಾರಣದಲ್ಲಿಯೇ ಅತ್ಯಂತ ವೈಶಿಷ್ಟ್ಯತೆ ಮೆರೆದ ಕ್ಷೇತ್ರ.

ಹಾನಗಲ್‌ ಉಪಚುನಾವಣೆ : ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?

ಹಾನಗಲ್‌ ಕ್ಷೇತ್ರ ಹೀಗಿದೆ:

ಹಾನಗಲ್‌(Hanagal) ಕೃಷಿ ಪ್ರಧಾನ ತಾಲೂಕಾಗಿದ್ದು, 700ಕ್ಕೂ ಹೆಚ್ಚು ಕೆರೆಗಳಿವೆ. ಈ ಕೆರೆಗಳೇ ಇಲ್ಲಿಯ ಕೃಷಿಕರಿಗೆ ಜೀವಾಳ. ಮೂರು ಹೋಬಳಿಗಳನ್ನು ಹೊಂದಿರುವ ಹಾನಗಲ್‌ ತಾಲೂಕು 775 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. 1,33,171 ಪುರುಷರು, 1,27,284 ಮಹಿಳೆಯರು ಸೇರಿ ಒಟ್ಟು 2,60,455 ಜನಸಂಖ್ಯೆ (2011ರ ಜನಗಣತಿ ಪ್ರಕಾರ) ಹೊಂದಿದೆ.

ಈವರೆಗೆ ಗೆದ್ದವರು:

1957ರಲ್ಲಿ ಬಿ.ಆರ್‌. ಪಾಟೀಲ (ಪಕ್ಷೇತರ), 1962ರಲ್ಲಿ ಜಿ.ಎಸ್‌. ದೇಸಾಯಿ (ಕಾಂಗ್ರೆಸ್‌), 1967ರಲ್ಲಿ ಬಿ.ಆರ್‌.ಪಾಟೀಲ (ಪಕ್ಷೇತರ), ಬಿ.ಆರ್‌.ಪಾಟೀಲ ಅವರ ನಿಧನದಿಂದ 1968ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಿ.ಎಸ್‌.ದೇಸಾಯಿ (ಕಾಂಗ್ರೆಸ್‌) ಆಯ್ಕೆಯಾಗಿದ್ದರು. 1972ರಲ್ಲಿ ಪಿ.ಸಿ. ಶೆಟ್ಟರ್‌ (ಕಾಂಗ್ರೆಸ್‌), 1978ರಲ್ಲಿ ಮನೋಹರ ತಹಶೀಲ್ದಾರ್‌ (ಕಾಂಗ್ರೆಸ್‌), 1983ರಲ್ಲಿ ಸಿ.ಎಂ. ಉದಾಸಿ (ಪಕ್ಷೇತರ), 1985ರಲ್ಲಿ ಸಿ.ಎಂ.ಉದಾಸಿ (ಜನತಾಪಕ್ಷ), 1989ರಲ್ಲಿ ಮನೋಹರ ತಹಶೀಲ್ದಾರ್‌ (ಕಾಂಗ್ರೆಸ್‌), 1994ರಲ್ಲಿ ಸಿ.ಎಂ. ಉದಾಸಿ(ಜನತಾದಳ), 1999ರಲ್ಲಿ ಮನೋಹರ ತಹಶೀಲ್ದಾರ್‌ (ಕಾಂಗ್ರೆಸ್‌), 2004, 2008ರಲ್ಲಿ ಸಿ.ಎಂ.ಉದಾಸಿ (ಬಿಜೆಪಿ), 2013ರಲ್ಲಿ ಮನೋಹರ ತಹಶೀಲ್ದಾರ್‌ (ಕಾಂಗ್ರೆಸ್‌) ಹಾಗೂ 2018ರಲ್ಲಿ ಮತ್ತೆ ಸಿ.ಎಂ. ಉದಾಸಿ ಬಿಜೆಪಿಯಿಂದ ಗೆದ್ದಿದ್ದರು.

ಅಭ್ಯರ್ಥಿ ಯಾರು?:

ಹಾನಗಲ್‌ ಕ್ಷೇತ್ರವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ತವರು ಜಿಲ್ಲೆಯಲ್ಲಿರುವುದರಿಂದ ರಾಜಕೀಯವಾಗಿ ಈ ಉಪ ಚುನಾವಣೆ ಸಾಕಷ್ಟುಮಹತ್ವ ಪಡೆದುಕೊಂಡಿದೆ. ಹೀಗಾಗಿ ಆಡಳಿತಾರೂಢ ಬಿಜೆಪಿಯು ಕ್ಷೇತ್ರ ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದರೆ, ಕಾಂಗ್ರೆಸ್‌ ಗೆಲ್ಲುವ ಲೆಕ್ಕಾಚಾರ ಹಾಕುತ್ತಿದೆ. ಹೀಗಾಗಿ ಎರಡೂ ಪಕ್ಷಗಳು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಪಕ್ಕಾ. ಬಿಜೆಪಿಯಿಂದ ಉದಾಸಿ ಕುಟುಂಬಕ್ಕೆ ಮಣೆ ಹಾಕುವ ಸಾಧ್ಯತೆಯಿದ್ದರೆ, ಕಾಂಗ್ರೆಸ್‌ನಲ್ಲಿ ಶ್ರೀನಿವಾಸ ಮಾನೆ ಅಥವಾ ಮನೋಹರ ತಹಶೀಲ್ದಾರ್‌ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

ಒಟ್ಟು ಮತದಾರರು-204206

ಪುರುಷ- 190000
ಪುರುಷ- 105405
ಮಹಿಳೆಯರು-98798

2018ರ ಚುನಾವಣೆ ಫಲಿತಾಂಶ ಅಭ್ಯರ್ಥಿ ಪಕ್ಷ ಪಡೆದ ಮತಗಳು

ಸಿ.ಎಂ.ಉದಾಸಿ- ಬಿಜೆಪಿ -80529 (ಗೆಲವು)
ಶ್ರೀನಿವಾಸ ಮಾನೆ -ಕಾಂಗ್ರೆಸ್‌ -4015
ಬೊಮ್ಮನಳ್ಳಿ ಬಾಬು -ಜೆಡಿಎಸ್‌- 1028

Latest Videos
Follow Us:
Download App:
  • android
  • ios