ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಜಾಹೀರಾತು ಪ್ರಚಾರ ಆರಂಭಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಬೆಂಗಳೂರು (ಏ.20): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಜಾಹೀರಾತು ಪ್ರಚಾರ ಆರಂಭಿಸಿರುವುದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಗ್ಗೆ ಶುಕ್ರವಾರ ಕಿಡಿಕಾರಿರುವ ಬಿಜೆಪಿ ನಾಯಕರು, ಗ್ಯಾರಂಟಿಗಳ ಮೂಲಕ ಜನರಿಗೆ ಟೋಪಿ ಹಾಕಿರುವ ಕಾಂಗ್ರೆಸ್‌ ಪಕ್ಷವೇ ರಾಜ್ಯದ ಜನರಿಗೆ ನಿಜವಾಗಿಯೂ ಚೊಂಬು ನೀಡಿದೆ ಎಂದು ಹೇಳಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕರು, ಚೊಂಬಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಮಾನ, ಮರ್ಯಾದೆ ಇದೆಯೇ? ಗ್ಯಾರಂಟಿಗಳ ಮೂಲಕ ಅವರೇ ರಾಜ್ಯದ ಜನರಿಗೆ ಚೊಂಬು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ. ವಿಪಕ್ಷ ನಾಯಕ ಆರ್‌.ಅಶೋಕ್‌, ‘ತಮಗೆ ಚೊಂಬು ನೀಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಜನರೂ ಚೊಂಬು ನೀಡಲಿದ್ದಾರೆ’ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಬಿಜೆಪಿಯವರು ನೀಡಿರುವುದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿದ ನಟ ದರ್ಶನ್: ಯಾಕೆ ಗೊತ್ತಾ?

ಬಿಜೆಪಿಯವರು ರಾಜ್ಯಕ್ಕೆ ಕೊಟ್ಟಿರೋದು ಬರೀ ಚೊಂಬಲ್ಲ, ಖಾಲಿ ಚೊಂಬು. ಕೇಂದ್ರದವರು ರಾಜ್ಯಕ್ಕೆ ಒಂದು ಪೈಸೆಯಾದರೂ ಬರ ಪರಿಹಾರದ ಹಣ ಕೊಟ್ಟಿದ್ದಾರೇನ್ರಿ. ಮೋದಿ ಹೇಳಿದಂತೆ ರಾಜ್ಯದ ಜನರಿಗೆ ಅಚ್ಛೇ ದಿನ್‌ ಬಂತೆನ್ರಿ. ಬಿಜೆಪಿಯ 25 ಸಂಸದರು ನಮ್ಮ ಪಾಲಿನ ಹಣ ಕೊಡಿ ಎಂದು ಕೇಳಿದ್ದಾರೇನ್ರಿ. ಅದಕ್ಕೆ ಹೇಳಿದ್ದು, ಬಿಜೆಪಿಯವರು ರಾಜ್ಯದ ಜನರಿಗೆ ಕೊಟ್ಟಿದ್ದು ಬರೀ ಚೊಂಬು.
- ಸಿದ್ದರಾಮಯ್ಯ, ಸಿಎಂ

ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಾ ಕಾಂಗ್ರೆಸ್‌ನವರು ರಾಜ್ಯದ ಜನರಿಗೆ ಹಾಕಿಲ್ವ ಟೋಪಿ?. 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಕೊಟ್ರಾ. ಕೊಟ್ಟಿದ್ದು ಟೋಪಿ. ಇವರ ಯೋಗ್ಯತೆಗೆ ಚೊಂಬಿನಷ್ಟು ನೀರು ಕೊಡಲೂ ಆಗ್ತಿಲ್ಲ, ಈಗ ಬಹಿರಂಗವಾಗಿ ರಾಜ್ಯದ ಜನರ ಮರ್ಯಾದೆ ತೆಗೆಯುವ ಕೆಲಸವನ್ನು ಮಾಡ್ತಿದ್ದಾರೆ. ಕಾಂಗ್ರೆಸ್‌ ಈಗ ಜನರಿಗೆ ಕೊಡ್ತಿರೋದು ಸಾಲದ ಚೊಂಬು.
- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

ಜೆಡಿಎಸ್‌, ಬಿಜೆಪಿಯ ‘ಬಿ’ ಟೀಂ ಎಂದು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲೇ ನಾನು ಹೇಳಿದ್ದೆ. ನನ್ನ ಮಾತು ಈಗ ನಿಜವಾಗಿದೆ. ಅವರೀಗ ಬಿಜೆಪಿ ‘ಬಿ’ ಟೀಂ ಮಾತ್ರವಲ್ಲ, ಬಿಜೆಪಿಯ ಪಾಲುದಾರರೇ ಆಗಿ ಬಿಟ್ಟಿದ್ದಾರೆ. ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಜಾತ್ಯತೀತ ತತ್ವಕ್ಕೆ ಎಳ್ಳು-ನೀರು ಬಿಟ್ಟು ಕೋಮುವಾದಿ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ.

ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಇಂದು ಮೋದಿ ಸಮಾವೇಶ: ಸಿದ್ಧತೆ ಪರಿಶೀಲಿಸಿದ ವಿಜಯೇಂದ್ರ

ಹೌದಪ್ಪ, ನಾನು ಬಿಜೆಪಿಯ ‘ಬಿ’ ಟೀಂ ಮುಖಂಡ, ಆಯ್ತಪ್ಪ. ಹಾಗಿದ್ರೆ, ನಿಮ್ಮ ತಾತ, ಅಜ್ಜಿ, ಅಪ್ಪ ಈ ಹಿಂದೆ ಎಲ್ಲಿ ಸ್ಪರ್ಧೆ ಮಾಡಿದ್ದರು. ನೀನು, ನಿನ್ನ ತಾಯಿ ಎಲ್ಲಿ ಸ್ಪರ್ಧೆ ಮಾಡಿದ್ರಿ. ಈಗ ನೀನೇ ಕೇರಳದ ವಯನಾಡ್‌ಗೆ ಓಡಿ ಬಂದಿದ್ದಿಯಲ್ಲಪ್ಪ ರಾಹುಲ್‌. ನಿನ್ನ ತವರು ನೆಲದಲ್ಲೀಗ ನಿನ್ನ ಟೀಂ ಎಲ್ಲಿದೆ?. ನಿನ್ನ ‘ಎ’ ಟೀಂ, ‘ಬಿ’ ಟೀಂನ ಪ್ರಧಾನಿ ಅಭ್ಯರ್ಥಿ ಯಾರು?.
- ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ.