Asianet Suvarna News Asianet Suvarna News

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಇಂದು ಪುರ ಪ್ರವೇಶ: ಭವ್ಯ ಸ್ವಾಗತಕ್ಕೆ ಬೆಂಗ್ಳೂರಲ್ಲಿ ಸಿದ್ಧತೆ

ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಎಐಸಿಸಿ ಅಧ್ಯಕ್ಷರಾದ ನಂತರ ಭಾನುವಾರ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದೆ. 

Felicitation Program For Aicc President Mallikarjun Kharge On November 6 In Bengaluru gvd
Author
First Published Nov 6, 2022, 3:00 AM IST

ಬೆಂಗಳೂರು (ನ.06): ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಭಾನುವಾರ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದೆ. ಜತೆಗೆ ‘ಸರ್ವೋದಯ ಸಮಾವೇಶ’ ಹೆಸರಿನಲ್ಲಿ ಭಾನುವಾರ ಅದ್ಧೂರಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ನೂತನ ಸಾರಥಿಯನ್ನು ಸ್ವಾಗತಿಸಲು ಭಾನುವಾರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಲಿದ್ದಾರೆ.

ಬಳಿಕ ದಾರಿಯುದ್ದಕ್ಕೂ ಅಭಿನಂದನೆ ಸಲ್ಲಿಸಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಆಗಮಿಸುವ ಖರ್ಗೆ ಅವರನ್ನು ಸಾದಹಳ್ಳಿ ಗೇಟ್‌ ಬಳಿ ಬೃಹತ್‌ ಸೇಬು ಹಾಗೂ ಹೂವಿನ ಹಾರಗಳೊಂದಿಗೆ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಮೇಖ್ರಿ ವೃತ್ತ ಸೇರಿ ನಾಲ್ಕು ಕಡೆ ಅಭಿನಂದನೆ ಸಲ್ಲಿಸಲಿದ್ದಾರೆ. ಬಳಿಕ ಖರ್ಗೆ ಅವರು ಸದಾಶಿವನಗರದ ನಿವಾಸಕ್ಕೆ ತೆರಳಲಿದ್ದು, ಮಧ್ಯಾಹ್ನ 2 ಗಂಟೆಗೆ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭಕ್ಕೆ ಹಾಜರಾಗಲಿದ್ದಾರೆ.

ನ.6ಕ್ಕೆ ಬೆಂಗಳೂರಿಗೆ ಖರ್ಗೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಮಾವೇಶ: ಡಿ.ಕೆ.ಶಿವಕುಮಾರ್

ಸರ್ವೋದಯ ಸಮಾವೇಶ: ಬಳಿಕ ಮಧ್ಯಾಹ್ನ 2 ಗಂಟೆಗೆ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ (ಗೇಟ್‌ ನಂ.2) ‘ಸರ್ವೋದಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು, ಖರ್ಗೆ ಅವರ ಅಭಿಮಾನಿಗಳು ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಜತೆಗೆ ರಣದೀಪ್‌ಸಿಂಗ್‌ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟಿಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು ಹಾಜರಿರಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಸಂಭ್ರಮ: ಎಐಸಿಸಿ ನೂತನ ಸಾರಥಿಯ ಆಗಮನದಿಂದ ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 6,825 ಮತಗಳ ಭಾರಿ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದು, ದೆಹಲಿಯಲ್ಲಿ ಪದಗ್ರಹಣ ಕಾರ್ಯಕ್ರಮವೂ ನಡೆದಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಾಯಿನಾಡಿಗೆ ವಾಪಸ್ಸಾಗುತ್ತಿರುವ ಖರ್ಗೆ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಹೀಗಾಗಿಯೇ ಬಳ್ಳಾರಿ ರಸ್ತೆಯುದ್ದಕ್ಕೂ ಖರ್ಗೆ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಹೆಬ್ಬಾಳ ಹಾಗೂ ಬ್ಯಾಟರಾಯನಪುರ, ಸಾದಹಳ್ಳಿ ಗೇಟ್‌ ಬಳಿ ಬೃಹತ್‌ ಕಟೌಟ್‌ಗಳನ್ನು ನಿರ್ಮಿಸಲಾಗಿದೆ. ತನ್ಮೂಲಕ ತಮ್ಮ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದಾರೆ.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ಏನೇನು ಕಾರ್ಯಕ್ರಮ?
- ಖರ್ಗೆ ಸ್ವಾಗತಿಸಲು ಡಿಕೆಶಿ, ಸಿದ್ದು, ಸುರ್ಜೇವಾಲಾ ಸೇರಿ ಹಲವು ನಾಯಕರ ದಂಡು ಏರ್‌ಪೋರ್ಟ್‌ಗೆ
- ಕಾಂಗ್ರೆಸ್‌ ಅತ್ಯುನ್ನತ ಹುದ್ದೆಗೇರಿದ 2ನೇ ಕನ್ನಡಿಗನಿಗೆ ಅದ್ಧೂರಿ ಸ್ವಾಗತ ನೀಡಲು ದಾರಿಯುದ್ದಕ್ಕೂ ಸಿದ್ಧತೆ
- ಏರ್‌ಪೋರ್ಟ್‌ ಬಳಿಯ ಸಾದಹಳ್ಳಿ ಗೇಟ್‌ ಬಳಿ ಬೃಹತ್‌ ಸೇವು, ಹೂವಿನ ಹಾರಗಳು ಖರ್ಗೆಗೆ ಅರ್ಪಣೆ
- ಮಾರ್ಗ ಮಧ್ಯೆ 4 ಕಡೆ ಖರ್ಗೆ ಅವರಿಗೆ ಅಭಿನಂದನೆ. ಬಳಿಕ ಸದಾಶಿವನಗರ ನಿವಾಸಕ್ಕೆ ಕಾಂಗ್ರೆಸ್‌ ಅಧ್ಯಕ್ಷ
- ಮಧ್ಯಾಹ್ನ 2ಕ್ಕೆ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾವೇಶ. ಸಾವಿರಾರು ಮಂದಿ ಭಾಗಿ ನಿರೀಕ್ಷೆ

Follow Us:
Download App:
  • android
  • ios