ನಾಮಪತ್ರ ಸಲ್ಲಿಕೆ ಅವಧಿ ಮುಗಿದ ನಂತರ ಎರಡನೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಕಾಂಗ್ರೆಸ್‌ ಪಟ್ಟಿ ಸುಸೂತ್ರ ಬಿಡುಗಡೆ

ರುದ್ರಪ್ಪ ಆಸಂಗಿ

ವಿಜಯಪುರ(ಅ.18):  ಅ.28ರಂದು ನಡೆಯಲಿರುವ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದಾಗಿ ಟಿಕೆಟ್‌ ವಂಚಿತರಲ್ಲಿ ಭಾರಿ ಅಸಮಾಧಾನದ ಹೊಗೆ ಎದ್ದಿದ್ದು, ಬಿಜೆಪಿ ಪಕ್ಷ ಬಂಡಾಯದ ಭೀತಿ ಎದುರಿಸುವಂತಾಗಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತಾದರೂ ಅಸಮಾಧಾನ ಕಾಂಗ್ರೆಸ್ಸಿನಲ್ಲಿ ಅಷ್ಟುಗಂಭೀರವಾಗಿ ಕಂಡು ಬರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷ ಭಾನುವಾರ ರಾತ್ರಿಯೇ ಪಾಲಿಕೆಯ 35 ವಾರ್ಡ್‌ಗಳಿಗೆ ಅಭ್ಯರ್ಥಿಗಳ ಟಿಕೆಟ್‌ ಫೈನಲ್‌ ಮಾಡಿ ಪಟ್ಟಿಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಮಾತ್ರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಲ್ಲಿ ಭಾರಿ ಹೈರಾಣ ಆಗಿದೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಗುಂಪುಗಳ ಮಧ್ಯೆ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿಸಲು ಭಾನುವಾರ ರಾತ್ರಿ ಬಹಳ ಹೊತ್ತಿನವರೆಗೆ ಭಾರಿ ಕಸರತ್ತು ನಡೆಸಿದ್ದರೂ 35 ವಾರ್ಡ್‌ಗಳ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡದೆ ಕೇವಲ 28 ಮಂದಿಗೆ ಮಾತ್ರ ಟಿಕೆಟ್‌ ಫೈನಲ್‌ ಮಾಡಿ ಬಿ ಫಾರಂ ನೀಡಲಾಗಿತ್ತು. ಇನ್ನು 7 ಮಂದಿಗೆ ಟಿಕೆಟ್‌ ಫೈನಲ್‌ ಮಾಡುವಲ್ಲಿ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿ ಬಿಟ್ಟಿತು. ಬಂಡಾಯ ಶಮನಕ್ಕೆ ಒಬ್ಬೊಬ್ಬರನ್ನು ಕರೆದು ಕದ್ದು ಮುಚ್ಚಿ ಬಿ ಫಾಮ್‌ರ್‍ ನೀಡಲಾಗಿದೆ. ಬಿ ಫಾರಂ ಸಿಕ್ಕವರು ವಾಟ್ಸಪ್‌, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಬಿ ಫಾರಂ ಸಿಕ್ಕಿದ್ದನ್ನು ಪೋಸ್ಟ್‌ ಮಾಡಿದ್ದರು. ಇದರಿಂದಲೂ ಟಿಕೆಟ್‌ ವಂಚಿತರ ಅಸಮಧಾನ ಮತ್ತಷ್ಟುಹೆಚ್ಚಿತು. ಬಿಜೆಪಿ ನಾಯಕರು ಕೊನೆಯ ಗಳಿಗೆಯಲ್ಲಿ ಉಳಿದ 7 ಅಭ್ಯರ್ಥಿಗಳಿಗೆ ಟಿಕೆಟ್‌ ಫೈನಲ್‌ ಮಾಡಲು ಹರ ಸಾಹಸ ಮಾಡಿದರು. ನಾಮಪತ್ರ ಸಲ್ಲಿಕೆ ಅವಧಿ ಮುಗಿದ ನಂತರ ಎರಡು ಹಂತದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಘೋಷಣೆ ಮಾಡಲಾಗಿದೆ. ಟಿಕೆಟ್‌ ವಂಚಿತರ ಅಸಮಾಧಾನದ ಬೇಗುದಿ ತಪ್ಪಿಸಲು ಬಿಜೆಪಿ ನಾಯಕರು ಸಾಕಷ್ಟುಪ್ರಯತ್ನ ಮಾಡಿದರೂ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಬಿ ಫಾರಂ ಸಿಗದಿದ್ದರೂ ಬಿಜೆಪಿ ಹೆಸರಿನಲ್ಲಿಯೇ ನಾಮಪತ್ರ ಸಲ್ಲಿಸಿ ಕೊನೆಯ ಕ್ಷಣದವರೆಗೂ ಟಿಕೆಟ್‌ ಆಶಾಭಾವನೆ ಹೊಂದಿದ್ದರು. ಆದರೂ ಬಹಳಷ್ಟುಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ಕೈ ತಪ್ಪಿದೆ. ಹೀಗಾಗಿ ಬಿಜೆಪಿ ನಾಯಕರು ಬಂಡಾಯದ ಬೇಗುದಿ ಎದುರಿಸುವಂತಾಗಿದೆ.

ಒಗ್ಗಟ್ಟಾಗಿದ್ದರೆ ಮಾತ್ರ ಬಿಜೆಪಿಗೆ ಅಧಿಕಾರ ಖಚಿತ: ಸುರಾನಾ

ವಾರ್ಡ್‌ ನ. 35ರಲ್ಲಿ ಬಿಜೆಪಿ ಧುರೀಣ ರಾಜು ಬಿರಾದಾರ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ವಾರ್ಡ್‌ ನ. 16ರ ನಿವಾಸಿ ರಾಜಶೇಖರ ಕುರಿ ಅವರಿಗೆ ವಾರ್ಡ್‌ ನ. 35ರಲ್ಲಿ ಟಿಕೆಟ್‌ ನೀಡಿದ್ದರಿಂದಾಗಿ ಬಿಜೆಪಿ ಮುಖಂಡ ರಾಜು ಬಿರಾದಾರ ಅವರು ಅತೃಪ್ತರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದಿದ್ದಾರೆ. ತಮ್ಮ ವಾರ್ಡ್‌ನವರನ್ನು ಬಿಟ್ಟು ಬೇರೆ ವಾರ್ಡ್‌ನವರಿಗೆ ಟಿಕೆಟ್‌ ನೀಡಿದ್ದರಿಂದಾಗಿ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಘೇವರಚಂದ, ಟ್ರಝರಿ ಕಾಲನಿ ಮುಂತಾದ ಬಡಾವಣೆಯ ಜನರು ಹೊರಗಿನ ವಾರ್ಡ್‌ನವರನ್ನು ವಿರೋಧಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಕೆಲವರು ಅಸಮಾಧಾನಗೊಂಡು ಜೆಡಿಎಸ್‌ ಪಕ್ಷದ ಕದ ತಟ್ಟಿದ್ದಾರೆ. ವಾರ್ಡ್‌ ನ. 33ರಲ್ಲಿ ಬಿಜೆಪಿ ಮುಖಂಡ ಸಂತೋಷ ಪೋಳ ಅವರಿಗೆ ಟಿಕೆಟ್‌ ಸಿಗದ ಕಾರಣ ಸಂತೋಷ ಪೋಳ ಅವರು ಜೆಡಿಎಸ್‌ ಪಕ್ಷದ ಟಿಕೆಟ್‌ ಪಡೆದುಕೊಂಡು ಚುನಾವಣೆ ಅಖಾಢಕ್ಕೆ ಇಳಿದಿದ್ದಾರೆ.