ಬೆಂಗಳೂರು : ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ಶಾಸಕರು ಆಪರೇಷನ್‌ ಕಮಲ ಭೀತಿಯಿಂದಾಗಿ ರೆಸಾರ್ಟ್‌ಗೆ ಪ್ರಯಾಣಿಸಿದ ಬೆನ್ನಲ್ಲೇ ಜೆಡಿಎಸ್‌ ಶಾಸಕರು ಸಹ ಅವರೊಟ್ಟಿಗೆ ಸೇರುವ ಸಾಧ್ಯತೆ ಇದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುವ ಪ್ರತಿಪಕ್ಷಗಳ ರಾರ‍ಯಲಿಯಲ್ಲಿ ಭಾಗವಹಿಸಲು ಕೋಲ್ಕತ್ತಾಗೆ ತೆರಳಿದ್ದಾರೆ. ಜೆಡಿಎಸ್‌ ವರಿಷ್ಠ ರಾಜ್ಯಕ್ಕೆ ಮರಳಿದ ಬಳಿಕ ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಬಗ್ಗೆ ಸ್ಪಷ್ಟಚಿತ್ರಣ ಗೊತ್ತಾಗಲಿದೆ.

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ಗೆ ಕಾಂಗ್ರೆಸ್‌ನ ಶಾಸಕರು ಶುಕ್ರವಾರ ರಾತ್ರಿ ತೆರಳಿದ್ದಾರೆ. ಜೆಡಿಎಸ್‌ ಪಕ್ಷದ ಕೆಲ ಶಾಸಕರಿಗೂ ಬಿಜೆಪಿ ಗಾಳ ಹಾಕಿದೆ. ಕೆಲ ಶಾಸಕರು ಬಿಜೆಪಿಗೆ ಹೋಗುವ ಆತಂಕವು ಇದೆ. ಈ ಕಾರಣ ಜೆಡಿಎಸ್‌ ಶಾಸಕರು ಸಹ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿರುವ ಈಗಲ್‌ಟನ್‌ ರೆಸಾರ್ಟ್‌ಗೆ ಹೋಗುವ ಸಾಧ್ಯತೆ ಇದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಕೊಲ್ಕತ್ತಾದಿಂದ ಹಿಂತಿರುಗಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಶಾಸಕರು ಸದ್ಯಕ್ಕೆ ತಮ್ಮ ಕ್ಷೇತ್ರದಲ್ಲಿದ್ದು, ಸಚಿವರು ಇತರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪಕ್ಷದ ಯಾವೊಬ್ಬ ಶಾಸಕರು ಬಿಜೆಪಿಯ ಗಾಳಕ್ಕೆ ಬಲಿಯಾಗುವುದಿಲ್ಲ ಎಂಬ ಆತ್ಮವಿಶ್ವಾಸ ಜೆಡಿಎಸ್‌ ಮುಖಂಡರಿಗೆ ಇದೆ. ಆದರೂ, ಆತಂಕ ಮಾತ್ರ ದೂರವಾಗಿಲ್ಲ. ಕೆಲವರಿಗೆ ವರಿಷ್ಠರ ನಡೆಯ ಬಗ್ಗೆ ಅಸಮಾಧಾನ ಇದೆ. 

ಅಂತಹವರು ಬಿಜೆಪಿಯ ಆಪರೇಷನ್‌ ಕಮಲಕ್ಕೊಳಗಾಗುವ ಸಾಧ್ಯತೆ ಇದೆ ಎಂಬ ದುಗುಡವೂ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುವುದು ಸೂಕ್ತ ಎಂಬ ಅಭಿಪ್ರಾಯ ಕೆಲವರಿಗಿದೆ. ಹೀಗಾಗಿ ಕಾಂಗ್ರೆಸ್‌ ಶಾಸಕರೊಟ್ಟಿಗೆ ಜೆಡಿಎಸ್‌ ಶಾಸಕರು ಸಹ ಸೇರುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿಬಂದಿವೆ.