ಮೂರು ಪಕ್ಷಗಳಿಗೂ ಒಳ ಏಟಿನ ಭೀತಿ- ಈ ಕ್ಷೇತ್ರಗಳ ಫಲಿತಾಂಶವೇ ಬದಲಾಗುತ್ತಾ?
ಲೋಕಸಭೆ ಚುನಾವಣೆಗೆ ಕರ್ನಾಟಕದ ಮೊದಲ ಹಂತದ ಚುನಾವಣೆಯ ದಿನ ಹತ್ತಿರ ಬರುತ್ತಿರುವಾಗಲೇ ಮೂರೂ ಪಕ್ಷಗಳಿಗೆ ಒಳಏಟಿನ ಭೀತಿ ಶುರುವಾಗಿದೆ. ಇದರಿಂದ ಈ ಕ್ಷೇತ್ರಗಳ ಫಲಿತಾಂಶವೇ ಬದಲಾಗುತ್ತಾ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.
ಶಿವರಾಜ್, ಬುಲೆಟಿನ್ ಪ್ರೊಡ್ಯುಸರ್, ಏಷ್ಯಾನೆಟ್ ಸುವರ್ಣನ್ಯೂಸ್
ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮೂರು ಪಕ್ಷಗಳಿಗೂ ಒಳ ಏಟಿನ ಆತಂಕ ಶುರುವಾಗಿದೆ. ತಮ್ಮ ಪಕ್ಷದ ಒಳಜಗಳೇ ಮತ್ತೊಂದು ಪಕ್ಷಕ್ಕೆ ಲಾಭ ಮಾಡಿಕೊಡ್ತಿದ್ದು. ಆಯಾ ಕ್ಷೇತ್ರಗಳನ್ನ ಕಳೆದುಕೊಳ್ಳುವ ಆತಂಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಿಗೂ ಕಾಡಲಾರಂಭಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಾಲಿಗೆ ಹಾಸನ, ಮಂಡ್ಯ, ಕಲಬುರಗಿಯಲ್ಲಿ ಮೈತ್ರಿ ಒಳಜಗಳ ಶುರುವಾಗಿದ್ದು. ಇದನ್ನ ಶಮನ ಮಾಡೋದೇ ರಾಜ್ಯ ನಾಯಕರಿಗೆ ಸವಾಲಾಗಿದೆ.. ಇತ್ತ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ಲಾಭ ಪಡೆದು ಗೆದ್ದು ಬೀಗೋಕೆ ತಯಾರಿ ಮಾಡಿಕೊಳ್ತಿದೆ.
ಹಾಸನ - ಪ್ರೀತಂ ಗೌಡ ಮುನಿಸು
ನಾಮಪತ್ರ ಸಲ್ಲಿಕೆ ಮುಗಿದು ಇನ್ನೇನು ಮತದಾನದ ದಿನಾಂಕ ಹತ್ತಿರ ಬಂದರೂ ಮಾಜಿ ಶಾಸಕ ಪ್ರೀತಂಗೌಡ ಮಾತ್ರ ಇನ್ನೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಬೆಂಬಲ ಘೋಷಿಸಿಲ್ಲ.. ಸದ್ಯ ಮೈಸೂರು-ಚಾಮರಾಜನಗರ ಉಸ್ತುವಾರಿ ಆಗಿರೋ ಪ್ರೀತಂ ಗೌಡ ಹಾಸನದಿಂದ ದೂರ ಉಳಿದಿದ್ದಾರೆ.. ಇದು ಪ್ರೀತಂ ಗೌಡ ಬೆಂಬಲಿಗರಲ್ಲೂ ಗೊಂದಲ ಉಂಟು ಮಾಡಿದೆ. ಈ ಮಧ್ಯೆ ಕೆಲ ಪ್ರೀತಂ ಗೌಡ ಬೆಂಬಲಿಗರು ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು, ಜೆಡಿಎಸ್ ಪಾಳಯದಲ್ಲಿ ಆತಂಕ ಮನೆ ಮಾಡಿದೆ.
ಕಲಬುರಗಿ - ಶರಣಗೌಡ ಕಂದಕೂರ ಕೋಪ
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರೋ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಬಿಜೆಪಿ ವಿರುದ್ಧ ಅಸಮಾಧಾನದ ಮುಂದುವರೆಸಿದ್ದಾರೆ. ಮೈತ್ರಿ ಆರಂಭವಾದಗಿನಿಂದಲೂ ಕಂದಕೂರು ಕಿಡಿ ಕಾರುತ್ತಲೇ ಇದ್ದು, ಇದೀಗ ಬಿಜೆಪಿ ಅಭ್ಯರ್ಥಿ ಭೇಟಿಯಾಗಿಲ್ಲ ಎಂದು ಜೆಡಿಎಸ್ ಶಾಸಕ ಬೇಸರ ಹೊರ ಹಾಕಿದ್ದಾರೆ. ಹೀಗಾಗಿ ಬಿಜೆಪಿಗೆ ಬೆಂಬಲಿಸಲು ಅಭಿಪ್ರಾಯ ಸಂಗ್ರಹಕ್ಕೆ ಶಾಸಕರು ಮುಂದಾಗಿದ್ದು, ಇನ್ನೆರಡು ದಿನದಲ್ಲಿ ಬಿಜೆಪಿ ಬೆಂಬಲಿಸುವ ಬಗ್ಗೆ ನಿರ್ಧಾರ ತಿಳಿಸೋದಾಗಿ ಹೇಳಿದ್ದಾರೆ.
ಮಂಡ್ಯ- ಎಚ್ಡಿಕೆ ಬೆಂಬಲ ಬಗ್ಗೆ ಸುಮಲತಾ ಮೌನ
ಮಂಡ್ಯ ಹಾಲಿ ಸಂಸದೆ ಸುಮಲತಾ, ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಸಿದ್ದಾರೆ. ಆದರೆ, ಕುಮಾರಸ್ವಾಮಿಗೆ ಮಾತ್ರ ಬೆಂಬಲ ಘೋಷಿಸಿಲ್ಲ, ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದರೂ ಬೆಂಬಲದ ಬಗ್ಗೆ ಮಾತಾಡಿಲ್ಲ. ಇನ್ನೂ ರಾಜ್ಯ ಬಿಜೆಪಿ ಸುಮಲತಾ ಅವರನ್ನ ಸ್ಟಾರ್ ಕ್ಯಾಂಪೇನರ್ ಆಗಿ ಬಳಸಿಕೊಳ್ಳಲು ಮುಂದಾಗಿದ್ದು, ಶೀಘ್ರದಲ್ಲೇ ಪ್ರವಾಸದ ಪಟ್ಟಿ ಸಿದ್ಧಪಡಿಸೋದಾಗಿ ರಾಜ್ಯ ಬಿಜೆಪಿ ಹೇಳಿದೆ. ನಇದಕ್ಕೆ ಸುಮಲತಾ ಮಂಡ್ಯ ಬಿಟ್ಟು ಬೇರೆ ಕಡೆ ಪ್ರವಾಸ ನಿಗದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರಂತೆ. ಒಂದು ವೇಳೆ ಸುಮಲತಾ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡದೇ ಹೋದರೆ ಕಾಂಗ್ರೆಸ್ಗೆ ಲಾಭವಾಗುವ ನಿರೀಕ್ಷೆ ಇದೆ ಎನ್ನಲಾಗ್ತಿದೆ.
ಬಿಜೆಪಿ-ಜೆಡಿಎಸ್ನಂತೆ ಕಾಂಗ್ರೆಸ್ಗೂ ಕೂಡ 3 ಕ್ಷೇತ್ರಗಳು ತಲೆ ನೋವಾಗಿ ಪರಿಣಮಿಸಿದ್ದು.. ತನ್ನದೇ ಪಕ್ಷದ ನಾಯಕರು ಬಂಡಾಯದ ಮುನ್ಸೂಚನೆ ನೀಡಿದ್ದಾರೆ.. ಮೈತ್ರಿ ನಾಯಕರು ಕಾಂಗ್ರೆಸ್ ಬಂಡಾಯವನ್ನ ಅಸೆಗಣ್ಣಿನಿಂದ ನೋಡ್ತಿದ್ದು.. ಕಾಂಗ್ರೆಸ್ ಒಳಜಗಳದ ಲಾಭ ಪಡೆದು ಗೆದ್ದು ಬೀಗುವ ಲೆಕ್ಕಾಚಾರದಲ್ಲಿದ್ದಾರೆ..
ಕೋಲಾರ - ಮುನಿಸು ಬಿಡದ ಮುನಿಯಪ್ಪ
ಕೋಲಾರದಲ್ಲಿ ಅಳಿಯನಿಗೆ ಟಿಕೆಟ್ ನೀಡದ್ದಕ್ಕೆ ಸಚಿವ ಮುನಿಯಪ್ಪ ಅಸಮಾಧಾನ ಮುಂದುವರೆಸಿದ್ದಾರೆ. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ಗೆ ನೀಡದಂತೆ ಜಿಲ್ಲೆಯ ಶಾಸಕರು ಹಾಗೂ ಸಚಿವರು ರಾಜೀನಾಮೆ ಹೈಡ್ರಾಮಾ ಮಾಡಿದ್ರು. ಬಳಿಕ ಕಾಂಗ್ರೆಸ್ ಹೈಕಮಾಂಡ್ ತಟಸ್ಥ ಬಣದ ಕೆ.ವಿ ಗೌತಮ್ಗೆ ಟಿಕೆಟ್ ನೀಡಿತ್ತು, ಇಷ್ಟಾದ್ರೂ ಮುನಿಯಪ್ಪ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸದೇ ಪ್ರಚಾರದಿಂದ ದೂರ ಉಳಿದಿದ್ದಾರೆ. ಸದ್ಯ ರಮೇಶ್ ಕುಮಾರ್ ಬಣ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದು, ಮೈತ್ರಿ ನಾಯಕರು ಕೋಲಾರ ಕಾಂಗ್ರೆಸ್ ಬಣ ಬಡಿದಾಟದ ಲಾಭ ಪಡೆಯಲು ತಯಾರಿ ಮಾಡಿಕೊಳ್ತಿದ್ದಾರೆ.
ಬಾಗಲಕೋಟೆ - ವೀಣಾ ಕಾಶಪ್ಪನವರ್ ಬಂಡಾಯ
ಬಾಗಲಕೋಟೆ ಟಿಕೆಟ್ ನಿರೀಕ್ಷೆಯಲ್ಲಿದ್ದ ವೀಣಾ ಕಾಶಪ್ಪನವರ್ಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿತ್ತು. ಈ ಬಾರಿ ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ಗೆ ಟಿಕೆಟ್ ನೀಡಿತ್ತು. ಇದು ವೀಣಾ ಕಾಶಪ್ಪನವರ್ ಕೋಪ ನೆತ್ತಿಗೇರಿಸಿದ್ದು, ಬಂಡಾಯ ಸ್ಪರ್ಧೆಯ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಬೆಂಬಲಿಗರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಯುಗಾದಿ ಬಳಿಕ ನಿರ್ಧಾರ ಹೇಳ್ತೀನಿ ಎಂದಿದ್ದಾರೆ ವೀಣಾ ಕಾಶಪ್ಪನವರ್.
ಕುಮಾರಸ್ವಾಮಿ ಸಹಕಾರ ಕೇಳಿದ್ದಾರೆಯೇ ವಿನಾ ಪ್ರಚಾರಕ್ಕೆ ಬನ್ನಿ ಎಂದಿಲ್ಲ: ಸುಮಲತಾ ಅಂಬರೀಶ್
ದಾವಣಗೆರೆ - ಸಿಡಿದೆದ್ದ ವಿನಯ್ ಕುಮಾರ್
ದಾವಣಗೆರೆ ಟಿಕೆಟ್ ಸಿಗದ್ದಕ್ಕೆ ಕಾಂಗ್ರೆಸ್ ಯುವ ನಾಯಕ ವಿನಯ್ ಕುಮಾರ್ ಸಿಡಿದೆದ್ದಿದ್ದು, ಈ ಬಾರಿ ಬಂಡಾಯ ಸ್ಪರ್ಧೆ ನಿಶ್ಚಿತ ಎಂದಿದ್ದಾರೆ.. ದಾವಣಗೆರೆಯಲ್ಲಿ ಜಾತಿ ಸಮೀಕರಣದ ಕಾರಣ ಕುರುಬ ಸಮುದಾಯದ ವಿನಯ್ ಕುಮಾರ್ಗೆ ಟಿಕೆಟ್ ಕೈ ತಪ್ಪಿದೆ ಎನ್ನಲಾಗಿದೆ.. ಆದ್ರೆ ಟಿಕೆಟ್ ಘೋಷಣೆಗೂ ಮೊಲದೇ ವಿನಯ್ ಕುಮಾರ್ ಕ್ಷೇತ್ರದಲ್ಲಿ ಒಂದು ಹಂತದ ಪ್ರಚಾರ ಮಾಡಿದ್ದು, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಸಚಿವ ಮಲ್ಲಿಕಾರ್ಜುನ್ ಪತ್ನಿಗೆ ಟಿಕೆಟ್ ನೀಡಿದ್ದು, ಯಾವೊಬ್ಬ ಕೈ ನಾಯಕರು ವಿನಯ್ ಕುಮಾರ್ ಸಮಾಧಾನ ಮಾಡೋ ಪ್ರಯತ್ನ ಮಾಡಿಲ್ಲ ಹೀಗಾಗಿ ಬೆಂಬಲಿಗರ ನಿರ್ಧಾರದಂತೆ ಬಂಡಾಯ ಸ್ಪರ್ಧೆ ಮಾಡೋದಾಗಿ ನಿಶ್ಚಯಿಸಿದ್ದಾರೆ.
ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಯ ಅಪ್ಪನಿಗಿಂದ ಒಂದು ವೋಟು ಜಾಸ್ತಿನೇ ಲೀಡ್ ಕೊಡಿಸ್ತೇನೆ: ಪ್ರೀತಂ ಗೌಡ ವಾಗ್ದಾನ