ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಿದೆ. ಪ್ರತಿ ರೈತನ ಜೀವವೂ ಅಮೂಲ್ಯ. ಹೀಗಾಗಿ ರೈತರ ಆತ್ಮಹತ್ಯೆ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಬೆಂಗಳೂರು (ಜು.18): ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಿದೆ. ಪ್ರತಿ ರೈತನ ಜೀವವೂ ಅಮೂಲ್ಯ. ಹೀಗಾಗಿ ರೈತರ ಆತ್ಮಹತ್ಯೆ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಬಸವರಾಜ ಬೊಮ್ಮಾಯಿ ಅವರೂ ಇದನ್ನು ಮಾಡಬೇಕು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರೂ ಮಾಡಬೇಕು. ಇದರಲ್ಲಿ ರಾಜಕಾರಣ ಮಾಡುತ್ತಾ ಕೂರಬಾರದು ಎಂದು ಹೇಳಿದರು.
ರೈತರ ಆತ್ಮಹತ್ಯೆ ಪ್ರಕರಣಗಳು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಿದೆ. 2018-19ರಲ್ಲಿ 1,085 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2019-20ರಲ್ಲಿ 1,091 ಮಂದಿ, 2020-21ರಲ್ಲಿ 855, 2021-22ರಲ್ಲಲಿ 915 ಹಾಗೂ 2022-23ರಲ್ಲಿ 755 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಏಪ್ರಿಲ್‌ನಿಂದ ಈವರೆಗೆ 96 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿವರಿಸಿದರು. ಪ್ರತಿ ರೈತನ ಜೀವಕ್ಕೂ ಬೆಲೆಯಿದೆ. ರೈತರ ಆತ್ಮಹತ್ಯೆ ತಡೆಯುವುದು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳ ಕರ್ತವ್ಯ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಐದು ಗ್ಯಾರಂಟಿ ಯೊಜನೆಗಳು ರೈತರ ಆತ್ಮಹತ್ಯೆ ತಡೆಯಲು ಸಹಕಾರಿಯಾಗಲಿವೆ ಎಂದರು.
ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಈ ಸಲ 33% ಪ್ರದೇಶದಲ್ಲಿ ಮಾತ್ರ ಬಿತ್ತನೆ: ಈ ಬಾರಿಯ ಮುಂಗಾರು ತಡವಾಗಿ ಆರಂಭವಾದ ಪರಿಣಾಮ ರಾಜ್ಯಾದ್ಯಂತ ಶೇ.36ರಷ್ಟುಮಳೆ ಕೊರತೆಯಾಗಿದ್ದು, ಬಿತ್ತನೆ ಸಹ ಕಡಿಮೆಯಾಗಿದೆ. ಜುಲೈ 7ರವರೆಗೆ 26.82 ಲಕ್ಷ ಹೆಕ್ಟೇರ್ (ಶೇ.33) ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು. ಬಿಜೆಪಿಯ ಹೇಮಲತಾ ನಾಯಕ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯಕ್ಕೆ 10 ದಿನ ತಡವಾಗಿ ಮುಂಗಾರು ಪ್ರವೇಶವಾಗಿದೆ. ಜು.7ರವರೆಗೆ ವಾಡಿಕೆ ಮಳೆ 257 ಮಿ.ಮೀ.ಗೆ ಬದಲಾಗಿ 166 ಮಿಮೀ ಮಳೆಯಾಗಿದ್ದು, ಶೇ.36ರಷ್ಟುಕೊರತೆಯಾಗಿದೆ.
ಬಾಗಲಕೋಟೆ, ಬಳ್ಳಾರಿ, ಬೀದರ್, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜು.7ರವರೆಗೆ 124 ಮಿ.ಮೀ ಮಳೆಯಾಗಬೇಕಿತ್ತು, ಆದರೆ 76 ಮಿಮೀ ಮಳೆಯಾಗಿದ್ದು, ಶೇ.39ರಷ್ಟುಕೊರತೆಯಾಗಿದೆ ಎಂದು ತಿಳಿಸಿದರು. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು 82.35 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಜು.7ರವರೆಗೆ 26.82 ಲಕ್ಷ ಹೆಕ್ಟೇರ್‌ನಲ್ಲಿ (ಶೇ.33)ರಷ್ಟುಬಿತ್ತನೆಯಾಗಿದೆ.
ಸಾವರ್ಕರ್ ಪಾಠ ಹೊರಕ್ಕೆ, ಕಾಂಗ್ರೆಸ್ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಮುತಾಲಿಕ್
ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ 56.20 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಜು.7ರವರೆಗೆ 26.60 ಲಕ್ಷ ಹೆಕ್ಟೇರ್‌ನಲ್ಲಿ (ಶೇ.36) ಬಿತ್ತನೆಯಾಗಿದೆ ಎಂದು ಸಚಿವರು ಅಂಕಿ-ಅಂಶಗಳ ಸಹಿತ ವಿವರಿಸಿದರು. ರೈತರಿಗೆ ನಕಲಿ ಅಥವಾ ಕಳಪೆ ಬಿತ್ತನೆ ಬೀಜ, ಔಷಧಿ, ರಾಸಾಯನಿಕ ಗೊಬ್ಬರ ಮಾರಾಟ ತಡೆಗೆ ಇಲಾಖೆಯ ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷ ಗದಗದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಈ ರೀತಿ ಮೋಸ ಮಾಡುವ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
