ಎದುರಾಳಿಗಳಿಗೆ ಅಧ್ಯಕ್ಷ, ವಿಪಕ್ಷ ನಾಯಕ ಪಟ್ಟ ತಪ್ಪಿಸಲು ಕಸರತ್ತು, ಸಂಸತ್ ಚುನಾವಣೆಗೆ 10 ತಿಂಗಳಿರುವಾಗ ಪಕ್ಷದಲ್ಲಿ ಒಳಬೇಗುದಿ ತೀವ್ರ
ಬೆಂಗಳೂರು(ಜೂ.27): ಶಿಸ್ತಿನ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದ್ದ ಬಿಜೆಪಿಯಲ್ಲಿ ಇದೀಗ ಒಳಬೇಗುದಿ ತಾರಕಕ್ಕೇರಿದ್ದು, ಪಕ್ಷದ ಮುಖಂಡರು ಬಹಿರಂಗವಾಗಿಯೇ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ‘ಸೋಲಿನಲ್ಲಿ ಒಡಕು’ ಎಂಬ ಮಾತಿನಂತೆ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ವಿಶ್ಲೇಷಣೆ ಮೂಲಕ ಬಿಜೆಪಿ ಮುಖಂಡರು ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ, ಇದೆಲ್ಲದರ ಮೂಲ ನೂತನ ರಾಜ್ಯಾಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕಾಗಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ.
ತಮಗೆ ಬೇಕಾಗಿರುವವರು ಅಥವಾ ತಮ್ಮ ಬಣಕ್ಕೆ ಸೇರಿದವರು ಈ ಸ್ಥಾನಗಳನ್ನು ಅಲಂಕರಿಸಬೇಕು ಎಂಬ ಉದ್ದೇಶ ಈ ಒಳಬೇಗುದಿಯ ಹಿಂದಿರುವುದು ಸ್ಪಷ್ಟವಾಗುತ್ತಿದೆ. ಅಧಿಕಾರದಲ್ಲಿದ್ದಾಗ ತಟಸ್ಥಗೊಂಡಿದ್ದ ಪಕ್ಷದಲ್ಲಿನ ಬಣಗಳು ಈಗ ಮತ್ತೆ ಕ್ರಿಯಾಶೀಲಗೊಂಡಿವೆ. ಹೀಗಾಗಿ ಬಣ ರಾಜಕೀಯದ ಪರಿಣಾಮವೇ ಪರೋಕ್ಷವಾಗಿ ಚುನಾವಣೆಯ ಸೋಲಿನ ನೆಪ ಮುಂದಿಟ್ಟು ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪ-ಪ್ರತ್ಯಾರೋಪಗಳನ್ನು ಹೊರಿಸುತ್ತಿರುವುದು ವೇದ್ಯವಾಗಿದೆ. ವಿಚಿತ್ರ ಸಂಗತಿ ಎಂದರೆ, ಪಕ್ಷದ ಹೈಕಮಾಂಡ್ ಮಾತ್ರ ಇದುವರೆಗೂ ರಾಜ್ಯ ಬಿಜೆಪಿಯಲ್ಲಿನ ಈ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಎಲ್ಲವನ್ನೂ ಮೌನವಾಗಿ ಗಮನಿಸುತ್ತಿದೆ. ಚುನಾವಣೆ ಬಳಿಕ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಒಂದು ಬಾರಿ ಆಗಮಿಸಿದ್ದು ಬಿಟ್ಟರೆ ರಾಷ್ಟ್ರೀಯ ನಾಯಕರ ಪೈಕಿ ಬೇರೆ ಯಾರೂ ಇತ್ತ ಸುಳಿದಿಲ್ಲ. ಇದು ಕೂಡ ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದಿನಿಂದ ದೆಹಲಿಯಲ್ಲಿ 3 ದಿನ ವರಿಷ್ಠರ ಸಭೆ; 4 ದಿನದಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ?
ಪಕ್ಷದ ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಅವಧಿ ಈಗಾಗಲೇ ಮುಗಿದಿದ್ದು, ಹೊಸಬರ ಹುಡುಕಾಟ ನಡೆದಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನದ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಆಗಬೇಕಾಗಿದೆ. ಹೀಗಾಗಿ, ಈ ಎರಡೂ ಸ್ಥಾನಗಳಿಗೆ ತಮಗೆ ಬೇಕಾದವರನ್ನು ಆಯ್ಕೆ ಮಾಡಬೇಕು ಅಥವಾ ತಮಗೆ ಬೇಡವಾದವರು ನೇಮಕವಾಗದಂತೆ ತಡೆಯಬೇಕು ಎಂಬ ಉದ್ದೇಶದಿಂದ ಆಂತರಿಕ ಜಿದ್ದಾಜಿದ್ದಿ ಭರದಿಂದ ಮುಂದುವರೆದಿದೆ. ಕೆಲವರು ತಮಗೇ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಬಹಿರಂಗವಾಗಿಯೇ ಒತ್ತಾಯವನ್ನೂ ಮಾಡುತ್ತಿದ್ದಾರೆ ಎನ್ನಲಾಗಿದೆ.
