ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕನಕಪುರ ಮಾದರಿ ರಾಜ್ಯಕ್ಕೆ ವಿಸ್ತರಣೆ: ಡಿಕೆಶಿ
ಕ್ಷೇತ್ರದ ಜನರ ಹಾಗೂ ಗುರು ಹಿರಿಯರ ಅಪೇಕ್ಷೆಯಂತೆ ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಇಡೀ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ. ಡಿಕೆಶಿ
ಕನಕಪುರ(ಜು.25): ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಅಧಿಕಾರ ನೀಡಿದರೆ ಕನಕಪುರ ಕ್ಷೇತ್ರದ ಅಭಿವೃದ್ಧಿ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಅಭಿಲಾಷೆ ಹೊಂದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ 513ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕ್ಷೇತ್ರದ ಜನರ ಹಾಗೂ ಗುರು ಹಿರಿಯರ ಅಪೇಕ್ಷೆಯಂತೆ ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಇಡೀ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ. ನಿಮ್ಮೆಲ್ಲರ ಸಹಕಾರ ಹಾಗೂ ಆಶಿರ್ವಾದ ಸದಾ ನನ್ನ ಹಾಗೂ ನಮ್ಮ ಪಕ್ಷದ ಮೇಲೆ ಇರಲಿ ಎಂದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಏಕೈಕ ಮೇರು ವ್ಯಕ್ತಿಯಾಗಿರುವ ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕರಾಗಿದ್ದು, ಬಹಳ ಆಸೆ ಯಿಂದ ನಿರ್ಮಾಣ ಮಾಡಿದ್ದ ಬೆಂಗಳೂರು ನಗರ ಇಂದು ಬೃಹದಾಕಾರವಾಗಿ ಬೆಳೆದಿದೆ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ ಸರ್ವ ಜನಾಂಗದವರು ಅವರನ್ನು ಗೌರವಿಸುವಂತಾಗಲಿ ಎಂದು ಆಶಿಸಿದರು.
ಬಾಯ್ಮುಚ್ಚಿಕೊಂಡು ಪಕ್ಷದ ಕೆಲ್ಸ ಮಾಡಿ: ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ..!
ಕೆಂಪೇಗೌಡರನ್ನು ಕೇವಲ ಒಕ್ಕಲಿಗರ ಆಸ್ತಿ ಮಾಡಿಕೊಳ್ಳಬೇಡಿ. ಈ ಜನಾಂಗದಲ್ಲಿ ಹುಟ್ಟಿದರೂ ಅವರ ಚಿಂತನೆ, ಆಚಾರ, ವಿಚಾರಗಳಿಂದಾಗಿ ಬೆಂಗಳೂರು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ. ನಾವು ಯಾವಾಗಲೂ ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಬೆಂಗಳೂರನ್ನು ಐಟಿ ರಾಜಧಾನಿಯನ್ನಾಗಿ ಮಾಡಿದ ಎಸ್.ಎಂ.ಕೃಷ್ಣ ಅವರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಕೆಂಪೇಗೌಡರ ದೂರದೃಷ್ಟಿತ್ವದಿಂದ ಬೆಂಗಳೂರಿಗೆ ಹೆಸರು:
ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ, ಕೆಂಪೇಗೌಡರು ವಿಜಯನಗರ ರಾಜರ ಆಡಳಿತದಲ್ಲಿ ಸಾಮಂತರಾಗಿ ತಮ್ಮ ಆಡಳಿತಾವಧಿಯಲ್ಲಿ ಸಮಾಜದ ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಕೊಡುಗೆಗಳನ್ನು ನೀಡುವುದರ ಜೊತೆಗೆ ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಲು ಅವರ ದೂರ ದೃಷ್ಟಿಯೇ ಕಾರಣವಾಗಿದೆ. ಅವರು ಹಾಗೂ ಅವರ ಕುಟುಂಬ ಜನರ ಉಪಯೋಗಕ್ಕಾಗಿ ನಗರದ ಸುತ್ತಲೂ ಕೆರೆಗಳನ್ನು ಅಭಿವೃದ್ಧಿಪಡಿಸಿದ ಫಲ ಇಂದು ಬೆಂಗಳೂರು ನಗರ ಗಾರ್ಡನ್ ಸಿಟಿಯಾಗಿ ಹೆಸರುಗಳಿಸಲು ಸಾಧ್ಯ ವಾಗಿದೆ ಎಂದು ಹೇಳಿದರು.
ಕೆಂಪೇಗೌಡರ ಇತಿಹಾಸ ಹಾಗೂ ಸಾಧನೆಯ ಬಗ್ಗೆ ಮಾತನಾಡಿದ ಮದ್ದೂರಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೃಷ್ಣೇಗೌಡ ಕೆಂಪೇಗೌಡರು ನಗರದ ಕೇಂದ್ರಸ್ಥಾನ ದಲ್ಲಿ ದ್ರೌಪದಮ್ಮ-ಧರ್ಮರಾಯರ ದೇವಸ್ಥಾನ ಕಟ್ಟಿಸಿ ಪರಂಪರಾಗತವಾಗಿ ಬಂದಿರುವ ವಿಶ್ವ ವಿಖ್ಯಾತ ಬೆಂಗಳೂರು ಕರಗ ನಡೆಯಲು ಹೊಸಬುನಾದಿ ಹಾಕಿಕೊಟ್ಟಹೆಗ್ಗಳಿಕೆ ಕೆಂಪೇಗೌಡರಿಗೆ ಸಲ್ಲಬೇಕಾಗಿದೆ ಎಂದು ತಿಳಿಸಿದರು.
ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ತಮ್ಮ ವ್ಯಾಪ್ತಿಯ ಬೆಂಗಳೂರು ನಗರದಲ್ಲಿ ಎಲ್ಲಾ ಜಾತಿ,ಧರ್ಮ ಹಾಗೂ ಸಮುದಾಯದ ಜನರ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿ ಎಂಬ ದೂರ ದೃಷ್ಠಿ ಹಾಗೂ ಚಿಂತನೆ ಯಿಂದ ಚಿಕ್ಕಪೇಟೆ,ಬಳೆಪೇಟೆ ಅಕ್ಕಿಪೇಟೆ,ತರಗುಪೇಟೆ ಯಂತಹ ಹಲವು ಪೇಟೆಗಳನ್ನು ನಿರ್ಮಾಣ ಮಾಡಿ ವಾಣಿಜ್ಯೋದ್ಯಮಕ್ಕೆ ಹೆಚ್ಚು ಒತ್ತನ್ನು ನೀಡುವ ಮೂಲಕ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಅಡಿಗಲ್ಲನ್ನು ಹಾಕಿದ ಕೀರ್ತಿ ನಾಡಪ್ರಭು ಕೆಂಪೇಗೌಡರಾಗಿದ್ದಾಗಿದೆ. ಮಾಗಡಿ ಪ್ರದೇಶದಿಂದ ಬಂದು ಇಡೀ ಬೆಂಗಳೂರನ್ನು ಪ್ರಪಂಚವೇ ತಿರುಗಿ ನೋಡುವ ಹಾಗೆ ಸುಂದರ ಹಾಗೂ ಸುರಕ್ಷಿತವಾದ ಬೆಂಗಳೂರಿನ ನಿರ್ಮಾಣ ಮಾಡಿದ್ದು ಒಂದು ಹೆಗ್ಗಳಿಕೆಯಾಗಿರುವುದರಿಂದ ಅವರ ಜಯಂತಿ ಯನ್ನು ಎಲ್ಲಾ ಜನಾಂಗದವರು ಪ್ರತಿ ವರ್ಷ ಆಚರಿಸಿ ಗೌರವಿಸಬೇಕಾಗಿದೆ ಎಂದರು.
ಒಕ್ಕಲಿಗ ಜನಾಂಗದ ಮುಖಂಡ ದುಂತೂರು ವಿಶ್ವನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಹುಟ್ಟಿಬೆಳೆದು ಕೆಎಎಸ್, ಐಎಎಸ್ ವ್ಯಾಸಂಗ ಮಾಡಿ ಉನ್ನತ ಪದವಿ ಪಡೆದಿರುವ ಮಹನೀಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ರಷ್ಟುಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.
ರಾಮನಗರದಲ್ಲಿ ಒಕ್ಕಲಿಗರ ಬೆಂಬಲ ಕೇಳಿದ ಡಿಕೆಶಿ, ಇದಕ್ಕೆ ಎಚ್‌ಡಿಕೆ ಹೇಳಿದ್ದಿಷ್ಟು
ಎಂಎಲ್ಸಿ ಎಸ್.ರವಿ, ಮುಖಂಡ ಎಂ.ಡಿ.ವಿಜಯ್ ದೇವ್, ನಗರಸಭಾ ಅಧ್ಯಕ್ಷ ಕಿರಣ್ , ಮಾಜಿ ಅಧ್ಯಕ್ಷರಾದ ಆರ್ . ಕೃಷ್ಣ ಮೂರ್ತಿ, ಕೆ.ಎನ್.ದಿಲೀಪ್, ಸಮಿತಿಯ ಕಬ್ಬಾಳೇಗೌಡ, ಕುಮಾರಸ್ವಾಮಿ, ಸ್ಟೊಡಿಯೋ ಚಂದ್ರು, ಶಿಕ್ಷಕ ಪ್ರಸಾದ್, ಒಕ್ಕಲಿಗರ ಸಂಘದ ಗಬ್ಬಾಡಿ ಕಾಡೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಧರಂಸಿಂಗ್ ಕಾಲದಲ್ಲಿ ನನಗೆ ಮಂತ್ರಿ ಮಾಡಲು ದೇವೇಗೌಡರು ಅವಕಾಶ ನೀಡಿರಲಿಲ್ಲ.. ಆಗ ಮನಮೋಹನ್ ಸಿಂಗ್ ರವರು ಬೆಂಗಳೂರಿಗೆ ಬಂದಿದ್ದಾಗ ನನ್ನನ್ನು ಪಕ್ಕಕ್ಕೆ ಕರೆದುಕೊಂಡುಹೋಗಿ ನೀವು ತಾಳ್ಮೆಯಿಂದ ಇರಬೇಕೆಂದು ಹೇಳಿದರು. ನಾನು ಏಕೆಂದು ಕೇಳಿದಾಗ ದೇಶಕ್ಕೆ ಕರ್ನಾಟಕ ರಾಜ್ಯದಿಂದ ಶೇ.37ರಷ್ಟುತೆರಿಗೆ ಬರುತ್ತಿದೆ. ಬೆಂಗಳೂರಿನಿಂದ ದೇಶ ನಡೆಯುತ್ತಿದೆ ಎಂದು ತಿಳಿ ಹೇಳಿದರು. ಇಂತಹ ಶಕ್ತಿ ಬೆಂಗಳೂರಿಗೆ ಇದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.