ವ್ಯಕ್ತಿ ಪೂಜೆ ಬಿಡಿ, ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಸಿಎಂ ಯಾರೆಂದು ಹೈಕಮಾಂಡ್‌ ನಿರ್ಧರಿಸುತ್ತೆ: ಡಿಕೆಶಿ

ಬೆಂಗಳೂರು/ಕನಕಪುರ(ಜು.24): ‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್‌ ಮಾಡುತ್ತದೆ. ಹೀಗಾಗಿ ವ್ಯಕ್ತಿ ಪೂಜೆ ಬಿಟ್ಟು ಪ್ರತಿಯೊಬ್ಬರೂ ಬಾಯಿ ಮುಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿ.’ ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪಕ್ಷಕ್ಕೆ ಧಕ್ಕೆ​ಯಾ​ಗುವ ಹೇಳಿಕೆ ನೀಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ಶಾಸಕ ಜಮೀರ್‌ ಅಹ​ಮದ್‌ ವಿರು​ದ್ಧವೂ ಪಕ್ಷದ ಶಿಸ್ತು ಸಮಿತಿ ಪರಿಶೀಲಿಸಿ ಕ್ರಮ ಕೈಗೊ​ಳ್ಳ​ಲಿದೆ ಎಂದಿದ್ದಾರೆ.

ಎಲ್ಲರಿಗೂ ಎಚ್ಚರಿಕೆ:

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಂ ಹುದ್ದೆ ವಿಚಾರಗಳನ್ನು ಆಗಾಗ ಪ್ರಸ್ತಾಪಿಸುತ್ತಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಎಲ್ಲ ನಾಯಕರಿಗೂ ಈ ಎಚ್ಚರಿಕೆ ನೀಡಿರುವ ಅವರು, ವ್ಯಕ್ತಿ ಪೂಜೆ ಬಿಟ್ಟು, ಬಾಯಿ ಮುಚ್ಚಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮಾಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಸಮುದಾಯಗಳನ್ನು ಸೆಳೆಯಲು ಏನು ಬೇಕೋ ಅದನ್ನು ಮಾಡಿ. ಅದನ್ನು ಬಿಟ್ಟು ಅನಗತ್ಯವಾಗಿ ಮಾತನಾಡಬೇಡಿ. ‘ಐ ಆ್ಯಮ್‌ ಟೆಲ್ಲಿಂಗ್‌ ದಿಸ್‌ ಟು ಎವರಿವನ್‌’ (ಈ ಮಾತನ್ನು ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ)’ ಎಂದು ಹೇಳಿದ್ದಾರೆ.

ಡಿಕೆಶಿ-ಸಿದ್ದು ಗುದ್ದಾಟದ ಮಧ್ಯೆ ಕಾಂಗ್ರೆಸ್‌ನಿಂದ ಸಿಎಂ ರೇಸ್‌ಗೆ ಲಿಂಗಾಯತ ಪ್ರಭಾವಿ ನಾಯಕ ಎಂಟ್ರಿ

ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್‌ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು. ವ್ಯಕ್ತಿ ಪೂಜೆ ಮಾಡದೆ ಪಕ್ಷ ಪೂಜೆ ಮಾಡಬೇಕು. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಜಮೀರ್‌ ಲೆವೆಲ್‌!:

‘ನನ್ನ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ಬೇಜಾರಾದರೆ ನಾನೇನೂ ಮಾಡಲು ಆಗಲ್ಲ’ ಎಂದಿರುವ ಜಮೀರ್‌ ಅಹಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ‘ನನ್ನ ಲೆವೆಲ್‌ಗೆ ಮಾತನಾಡುವವರು ಇದ್ದರೆ ಮಾತನಾಡುತ್ತೇನೆ. ಎಲ್ಲರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡಲ್ಲ’ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ಶಿಸ್ತುಕ್ರಮ: 

ಬಳಿಕ ಕನಕಪುರದಲ್ಲಿ ಮಾತನಾಡಿದ ಅವರು, ‘ಶಾಸಕ ಜಮೀರ್‌ ಅಹ​ಮದ್‌ ಪಕ್ಷದ ಪ್ರಮುಖ ನಾಯಕ. ಮುಂದಿನ ಮುಖ್ಯ​ಮಂತ್ರಿ ಪದ​ವಿಯ ಬಗ್ಗೆ ಪಕ್ಷದ ಚೌಕಟ್ಟು ಮೀರಿ ಮಾತ​ನಾ​ಡಿ​ರು​ವುದು ಅವರ ವೈಯ​ಕ್ತಿಕ ಅಭಿ​ಪ್ರಾಯ. ಆದರೂ, ಪಕ್ಷದ ಶಿಸ್ತು ಸಮಿತಿ ಇದರ ಬಗ್ಗೆ ಪರಿ​ಶೀ​ಲನೆ ನಡೆ​ಸಿದ ಸೂಕ್ತ ಕ್ರಮ​ ಕೈ​ಗೊ​ಳ್ಳು​ತ್ತದೆ’ ಎಂದ​ರು.