ಮಹಿಳೆಯರ ಗಮನ ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಮೀಸಲಾತಿ ನಾಟಕ: ವಿ.ಎಸ್.ಉಗ್ರಪ್ಪ
ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನ್ ಕಲಾಕಾರ. ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಮಹಿಳೆಯರ ಗಮನ ಬೇರೆಡೆ ಸೆಳೆಯಲು ಮೀಸಲಾತಿ ನಾಟಕ ಆಡುತ್ತಿದ್ದಾರೆ.

ಬೆಂಗಳೂರು (ಸೆ.22): ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನ್ ಕಲಾಕಾರ. ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಮಹಿಳೆಯರ ಗಮನ ಬೇರೆಡೆ ಸೆಳೆಯಲು ಮೀಸಲಾತಿ ನಾಟಕ ಆಡುತ್ತಿದ್ದಾರೆ. ಚುನಾವಣೆಗಾಗಿ ಮೀಸಲಾತಿ ಘೋಷಿಸಿ ಜನಗಣತಿ ಹೆಸರು ಹೇಳಿ ಹದಿನೈದು ವರ್ಷ ಉದ್ದೇಶಪೂರ್ವಕ ವಿಳಂಬಕ್ಕೆ ಮುಂದಾಗಿದ್ದಾರೆ. ಇದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತಾಗಿದ್ದು, ಅವರಿಗೆ ನೈತಿಕತೆ ಇದ್ದರೆ ಕೂಡಲೇ ಮೀಸಲಾತಿ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಇದು ಕಾಂಗ್ರೆಸ್‌ನ ಕನಸಿನ ಕೂಸು. ಕಾಂಗ್ರೆಸ್ 1996ರಲ್ಲಿ ವಿಧೇಯಕ ಮಂಡನೆ ಮಾಡಿದರೆ ವಿರೋಧಪಕ್ಷದಲ್ಲಿದ್ದ ಬಿಜೆಪಿ ಬೆಂಬಲಿಸಲಿಲ್ಲ. ಇದೀಗ ಕ್ಷೇತ್ರ ಮರು ವಿಂಗಡಣೆ ಹಾಗೂ ಜನಗಣತಿ ಷರತ್ತು ವಿಧಿಸಿದ್ದು, ಇದು ಕೇವಲ ಕಣ್ಣೊರೆಸುವ ತಂತ್ರ. ಈ ಮೀಸಲಾತಿ ಯೋಜನೆ ತಕ್ಷಣ ಜಾರಿಗೆ ಬರುವುದಿಲ್ಲ ಎಂದು ಕಿಡಿಕಾರಿದರು. ಅರ್ಟಿಕಲ್ 82ಕ್ಕೆ ತಿದ್ದುಪಡಿ ತಂದು 2026ರ ತನಕ ಯಾವುದೇ ಸಂಸತ್- ವಿಧಾನಸಭಾ ಕ್ಷೇತ್ರಗಳು ಮರು ವಿಂಗಡಣೆ ಮಾಡುವಂವಂತಿಲ್ಲ ಎಂದು ಬಿಜೆಪಿಯವರೇ ತಿದ್ದುಪಡಿ ತಂದಿದ್ದಾರೆ.
ತಾಂತ್ರಿಕ ವಿಘ್ನ, ಆಸ್ತಿ ನೋಂದಣಿಗೆ ಭಾರಿ ರಶ್: ಕಾವೇರಿ-2 ಸರ್ವರ್ ಕ್ರ್ಯಾಶ್!
ಇನ್ನು 2031ಕ್ಕೆ ಜನಗಣತಿ ಪ್ರಾರಂಭ ಮಾಡಿದರೆ ಅದು ಮುಗಿಯಲು 2035ರವರೆಗೆ ಕಾಯಬೇಕು. ಹೀಗಾದರೆ ಮೀಸಲಾತಿ ಜಾರಿಗೆ ಬರಲೇ 13 ವರ್ಷ ಬೇಕು. ಆದರೆ ಕೇವಲ 15 ವರ್ಷಕ್ಕೆ ಮಾತ್ರ ಮಹಿಳಾ ಮೀಸಲಾತಿ ಜಾರಿಯಲ್ಲಿರುವುದಾಗಿ ಹೇಳಿದ್ದಾರೆ. ಇದು ಮಹಿಳೆಯರಿಗೆ ಮಾಡುತ್ತಿರುವ ದ್ರೋಹ ಅಲ್ಲವೇ? ಎಂದು ಪ್ರಶ್ನಿಸಿದರು. ವಿಧಾನಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ತರಾತುರಿಯಲ್ಲಿ ತಂದಂತಹ ಬಿಲ್. ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಂಡಿಲ್ಲ, ಸರಿಯಾದ ಚರ್ಚೆ ಮಾಡಿಲ್ಲ. ಮೋದಿಯವರ ಜುಮ್ಲಾಗಳಿಗೆ ಇದು ಹೊಸ ಸೇರ್ಪಡೆ ಎಂದು ಟೀಕಿಸಿದರು.