3ನೇ ಬಾರಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಆಹುತಿ: ಮಾಜಿ ಸಂಸದ ಶಿವರಾಮೇಗೌಡ
ಕುಟುಂಬದವರನ್ನು ಅಧಿಕಾರಕ್ಕೆ ತರಲು ಚುನಾವಣಾ ರಾಜಕೀಯ ನರಬಲಿ ದೇವೇಗೌಡರ ಕುಟುಂಬದಲ್ಲಿ ಸಾಮಾನ್ಯವಾಗಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಲು ಕುಮಾರಸ್ವಾಮಿ ಡ್ರಾಮಾ ಮಾಡುತ್ತಿದ್ದಾರೆ.
ನಾಗಮಂಗಲ (ಅ.27): ಕುಟುಂಬದವರನ್ನು ಅಧಿಕಾರಕ್ಕೆ ತರಲು ಚುನಾವಣಾ ರಾಜಕೀಯ ನರಬಲಿ ದೇವೇಗೌಡರ ಕುಟುಂಬದಲ್ಲಿ ಸಾಮಾನ್ಯವಾಗಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಲು ಕುಮಾರಸ್ವಾಮಿ ಡ್ರಾಮಾ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗಲ್ಲ. ಹೋಮದಲ್ಲಿ ಬೆಂಕಿಗೆ ಆಹುತಿ ಮಾಡಿದಂತೆ ನಿಖಿಲ್ ಅವರನ್ನು ಮೂರನೇ ಬಾರಿಗೆ ಚುನಾವಣೆಗೆ ಆಹುತಿಯಾಗಿಸುತ್ತಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಚುನಾವಣೆ ಬಂದಾಗ ಅವರ ಕುಟುಂಬದವರನ್ನು ಅಧಿಕಾರಕ್ಕೆ ತರಲು ಒಂದೊಂದು ನರಬಲಿ ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಇವರು ನಡೆದು ಬಂದಿರೋದೇ ಹಾಗೆ. ಕುಮಾರಸ್ವಾಮಿ ಬೃಹತ್ ನಾಟಕ ಮಾಡಿ ಮಗನನ್ನು ಚನ್ನಪಟ್ಟಣದ ಉಪ ಚುನಾವಣೆಗೆ ನಿಲ್ಲಿಸಿದ್ದಾರೆ. ಯಡಿಯೂರಪ್ಪ ಕೂಡ ಬಂದು ಹೋಗಿದ್ದಾರೆ. ಬಿ.ವೈ.ವಿಜಯೇಂದ್ರ ಅಲ್ಲೇ ಹೋಗಿ ಮಲಗಿದರೂ ಕೂಡ ನಿಖಿಲ್ ಅವರನ್ನು ಅಲ್ಲಿ ಪ್ರತಿಷ್ಠಾಪನೆ ಮಾಡೋಕೆ ಸಾಧ್ಯವಿಲ್ಲ ಎಂದು ಜರಿದರು.
ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ: ಸಚಿವ ಪರಮೇಶ್ವರ್
ಚನ್ನಪಟ್ಟಣದ ಜನರು ದಡ್ಡರಲ್ಲ: ಸಿ.ಪಿ.ಯೋಗೇಶ್ವರ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿ ನಾಮಪತ್ರ ಸಲ್ಲಿಕೆಯೂ ಆಗಿದೆ. ಅಲ್ಲಿ ನಿಖಿಲ್ ಅಲ್ಲ, ಕುಮಾರಸ್ವಾಮಿಯವರೇ ಬಂದರೂ ಏನೂ ಮಾಡಲಾಗುವುದಿಲ್ಲ. ಚನ್ನಪಟ್ಟಣದ ಜನ ದಡ್ಡರಲ್ಲಾ. ಸ್ಥಳೀಯ ಜನರಿಗೆ ನೀರಾವರಿ ವಿಷಯದಲ್ಲಿ ಅಭಿವೃದ್ಧಿ ಮಾಡಿರುವ ಸಿ.ಪಿ.ಯೋಗೇಶ್ವರ್ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಾ.ಸಿ.ಎನ್. ಮಂಜುನಾಥ್ ಅವರಿಗೆ ಎಂಪಿ ಟಿಕೆಟ್ ಕೊಡಿಸಲು ಬಹಳ ಕಷ್ಟಪಟ್ಟಿದ್ದ ಸಿ.ಪಿ.ಯೋಗೇಶ್ವರ್ ಈಗ ಬಲಿಯಾದರು. ಯೋಗೇಶ್ವರ್ ಆಚೆ ಹೋಗಲು ಬಿ.ಎಸ್.ಯಡಿಯೂರಪ್ಪ ಅವರೇ ಕಾರಣೀಭೂತರು. ಆ ಪಕ್ಷದ ಗುಂಪುಗಾರಿಕೆಯೇ ಇದಕ್ಕೆ ಕಾರಣ ಎಂದು ದೂರಿದರು.
ಬಿಜೆಪಿ ಕುತ್ತಿಗೆ ಹಿಚುಕಿದರು: ಬಿಜೆಪಿಯೊಂದಿಗೆ ಜೆಡಿಎಸ್ ಮೇಲ್ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಹಳೆ ಮೈಸೂರು ಭಾಗದ ಐದು ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮನವಿ ಮಾಡಿಕೊಂಡಿದ್ದೆ. ಈ ಪಕ್ಷವನ್ನು ಸಂಪೂರ್ಣವಾಗಿ ಕಟ್ಟುವುದಾಗಿ ವಿಜಯೇಂದ್ರ ಭರವಸೆ ನೀಡಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸಾರಾಸಗಟಾಗಿ ಕುತ್ತಿಗೆ ಹಿಚುಕಿ ಹಾಕಿದರು. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ನಂತರ ಇಲ್ಲಿ ಬಿಜೆಪಿ ಪಕ್ಷದ ಉಸಿರು ಸಂಪೂರ್ಣವಾಗಿ ನಿಂತುಹೋಗಿದೆ ಎಂದರು.
ಜಿಲ್ಲೆಗೆ ಯಾಕೆ ಬರ್ತಿರಿ ಸ್ವಾಮಿ ನೀವು?: ರಾಮನಗರದಲ್ಲಿ ಬಂಡೆ ಇದೆ ಎಂದು ಮಂಡ್ಯಕ್ಕೆ ಬಂದಿದ್ದೀರಿ. ಮುಂದೆ ಎಂಎಲ್‌ಎ ಚುನಾವಣೆಗೂ ಇಲ್ಲಿಗೇ ಬರೋಲ್ಲ ಅಂತ ಏನ್ ಗ್ಯಾರಂಟಿ? ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ದರೆ, ರಾಹುಲ್ ಗಾಂಧಿ ವೈನಾಡಿಗೆ ಹೋಗಿದ್ದರೆ ಅಲ್ಲಿಯವರು ಪ್ರಶ್ನೆ ಮಾಡಿಕೊಳ್ಳಲಿ. ನಾನು ಮಂಡ್ಯ ಜಿಲ್ಲೆಯವನು ಅದಕ್ಕೆ ಕೇಳುತ್ತಿದ್ದೇನೆ. ಮುಂದಿನ ಚುನಾವಣೆಗೆ ಮಂಡ್ಯ ಜೆಡಿಎಸ್‌ನಲ್ಲಿ ಯಾರಾದರೂ ಬಲಿಯಾಗುತ್ತಾರೆ ಎಂದು ಹೆಸರೇಳದೆ ಎಚ್ಡಿಕೆ ವಿರುದ್ಧ ಗುಡುಗಿದರು.
ಕೈಗೆ ಬಳೆ ತೊಟ್ಕೊಬೇಡ್ರಿ ಕಣಪ್ಪ..!: ಎಚ್.ಡಿ.ಕುಮಾರಸ್ವಾಮಿ ಒಂಥರಾ ಇಂಗ್ಲೀಷ್‌ನವರು ಇದ್ಹಂಗೆ. ಗಂಟು ಮೂಟೆ ಕಟ್ಟಿಕೊಂಡು ಹೊರಟರೆ ಬರ್ತಾ ಇರೋದೆ. ಏಕೆ, ಮಂಡ್ಯದಲ್ಲಿರುವ ನಾಯಕರು ಗಂಡಸರಲ್ಲವೇ? ತೆಳ್ಳಗೆ, ಬೆಳ್ಳಗೆ ಅವ್ರೆ ಅಂತ ಯಾರೇ ಬಂದರೂ ಮನೆಗೆ ಸೇರಿಸಿಕೊಳ್ಳಲಾಗುವುದೇ? ಮಂಡ್ಯದ ಎಲ್ಲಾ ಪಕ್ಷದ ನಾಯಕರು ಕೈಗೆ ಬಳೆ ತೊಟ್ಕೋಬೇಡ್ರಿ ಕಣ್ರಪ್ಪ ಅಂತ ವಿನಂತಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ರೈಲ್ವೆ ಯೋಜನೆ: ಸಂಸದ ಡಾ.ಕೆ.ಸುಧಾಕರ್
ಅಭಿವೃದ್ಧಿ ಕಡೆ ಗಮನವೇ ಇಲ್ಲ: ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಕುಮಾರಸ್ವಾಮಿ ಗಾಡಿ ನಿಂತೋಗಿತ್ತು. ಅದ್ಯಾವ ದೇವರ ಪೂಜೆ ಮಾಡಿದರೋ ಗೊತ್ತಿಲ್ಲ. ಬಿಜೆಪಿ ಜೊತೆ ಸೇರಿಕೊಂಡು ಮಂಡ್ಯದಲ್ಲಿ ಗೆದ್ದರು. ಪಾಪ ಕುಮಾರಣ್ಣನ ಕಂಪನಿ ಮುಳುಗುತ್ತಿದೆ ಎಂದುಕೊಂಡು ಮಂಡ್ಯದ ಮುಗ್ದ ಜನರು ಓಟು ಕೊಟ್ಟರು. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ದೊಡ್ಡ ಖಾತೆ ಕೊಟ್ಟಿದ್ದಾರೆ. ಬೆಳಗಾದರೆ ಕುಮಾರಸ್ವಾಮಿ ಅವರು ರಾಷ್ಟ್ರೀಯ ಸುದ್ದಿಯಲ್ಲಿ ಬರಬೇಕು. ಆದರೆ, ವಾರದಲ್ಲಿ ಮೂರು ದಿನ ಮಂಡ್ಯ, ಬೆಂಗಳೂರು ಎಂದು ಕುಳಿತುಕೊಂಡು ಮುಡಾ ಕೇಸು ಅಥವಾ ಡಿ.ಕೆ. ಶಿವಕುಮಾರ್ ಪುಕ್ಕ ಕೆರೆಯೋದು, ಇಷ್ಟು ಬಿಟ್ರೆ ಬೇರೇನೂ ಮಾಡುತ್ತಿಲ್ಲ. ಬೇರೆ ದೇಶಕ್ಕೆ ಹೋಗಿ ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಗೆ ದೊಡ್ಡ ದೊಡ್ಡ ಕಂಪನಿಯವರನ್ನು ಕರೆತನ್ನಿ. ನಿಮಗೂ ವ್ಯವಹಾರ ಆಗುತ್ತದೆ. ಅದರಲ್ಲಿ ಚೆನ್ನಾಗಿ ಪಳಗಿದ್ದೀರಿ ಎಂದು ಎಚ್ಡಿಕೆ ವಿರುದ್ಧ ವ್ಯಂಗ್ಯವಾಡಿದರು.