ಸೋಮಣ್ಣರಿಂದ ಸಿದ್ಧಗಂಗಾ ಮಠದಲ್ಲಿ ರಾಜಕಾರಣವೇಕೆ?: ರೇಣುಕಾಚಾರ್ಯ ಅಸಮಾಧಾನ
ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗಿ ರಾಜಕಾರಣ ಮಾತನಾಡುವ ಅವಶ್ಯಕತೆ ಇತ್ತಾ? ಶ್ರೀಮಠದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ (ನ.27): ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗಿ ರಾಜಕಾರಣ ಮಾತನಾಡುವ ಅವಶ್ಯಕತೆ ಇತ್ತಾ? ಶ್ರೀಮಠದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಯಡಿಯೂರಪ್ಪನವರು ಕರೆದು, ನಮಗೆ ಹೊಡೆದರೂ ಪರವಾಗಿಲ್ಲ. ಬಿಎಸ್‌ವೈ ಬಗ್ಗೆ ಯಾರೇ ಮಾತನಾಡಿದರೂ ನಾನೂ ಅಂತಹವರ ವಿರುದ್ಧ ಮಾತನಾಡುತ್ತೇನೆ. ವಿನಾಕಾರಣ ಬಿಎಸ್‌ವೈ ಬಗ್ಗೆ ಮಾತನಾಡುವುದು ಸರಿಯಲ್ಲ. ವಿಧಾನಸಭೆ ಚುನಾವಣೆ ಸೋಲಿನ ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹಾಗಾಗಿಯೇ ವಿಜಯೇಂದ್ರಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್: ಎಂ.ಪಿ.ರೇಣುಕಾಚಾರ್ಯ ಟೀಕೆ
ನಮಗೆ ಸಚಿವರಾಗುವ ಸಾಮರ್ಥ್ಯ ಇರಲಿಲ್ಲವೇ?: ಕಾಂಗ್ರೆಸ್ಸಿನಿಂದ ಬಂದ ನೀವೇ 2 ಸಲ ಸಚಿವರಾಗಿದ್ದಲ್ಲದೇ, ಇಂತಹದ್ದೇ ಖಾತೆ ಬೇಕೆಂದು ಸೋಮಣ್ಣ ಪಡೆದಿದ್ದರು. ಬಿಜೆಪಿಯಲ್ಲಿದ್ದ ನಮಗೆ ಸಚಿವರಾಗುವ ಸಾಮರ್ಥ್ಯ ಇರಲಿಲ್ಲವೇ? ಅನ್ಯಾಯವಾಗಿದ್ದು ನಮಗೆ ಹೊರತು 2 ಸಲ ಸಚಿವರಾದ ನಿಮಗಲ್ಲ ಸೋಮಣ್ಣ. ನಿರಂತರ ಅಧಿಕಾರವನ್ನು ಅನುಭವಿಸಿ ಈಗ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದೀರಾ? ವಿಜಯೇಂದ್ರ ಸಂಘಟನಾ ಸಾಮರ್ಥ್ಯ, ಚುನಾವಣಾ ಚಾಣಾಕ್ಷ್ಯತೆ, ಪಕ್ಷ ನಿಷ್ಠೆ ಗುರುತಿಸಿ, ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ರಾಜ್ಯವ್ಯಾಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗಿದೆ ಎಂದು ತಿಳಿಸಿದರು.
ನಿರಂತರ ಅಧಿಕಾರ ಅನುಭವಿಸಿ, ಈಗ ಯಡಿಯೂರಪ್ಪ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ? ವಿಜಯೇಂದ್ರ ರಾಜ್ಯದಲ್ಲಿ ಪಕ್ಷ ಸಂಘಟಿಸಿಲ್ಲವಾ? ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ ರಾಷ್ಟ್ರೀಯ ನಾಯಕರಿಗೆ ಅವಮಾನಿಸುತ್ತಿದ್ದೀರಿ. ಸೋಮಣ್ಣ ನನಗೆ ಹಿರಿಯಣ್ಣನ ಸಮಾನ. ಈಗಲೂ ಬಾರಲೇ ತಮ್ಮ ಅಂತಲೇ ಮಾತನಾಡುವ ಸೋಮಣ್ಣ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮನೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು, ಹಾದಿ ರಂಪ, ಬೀದಿ ರಂಪ ಮಾಡುವುದು ಸರಿಯಲ್ಲ. ಮನೆಯನ್ನು ಕೂಡಿಸುವ ಕೆಲಸ ಮಾಡಲಿ. ಮನೆ ಒಡೆಯುವ ಕೆಲಸ ಬೇಡ ಎಂದು ಸೋಮಣ್ಣಗೆ ಮನವಿ ಮಾಡುವುದಾಗಿ ರೇಣುಕಾಚಾರ್ಯ ಹೇಳಿದರು.
ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದೇ ಯಡಿಯೂರಪ್ಪನವರು. ಬಿಎಸ್‌ವೈ ರೆಡಿಮೇಡ್ ಫುಡ್ ಅಲ್ಲ. ತಳಹಂತದಿಂದ ತಾವೂ ಬೆಳೆದು, ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕ. ವಿ.ಸೋಮಣ್ಣ ಕಾಂಗ್ರೆಸ್ಸಿನಿಂದ ಬಂದವರು. ಪಕ್ಷ ಅಧಿಕಾರಕ್ಕೆ ಬಂದಿದ್ದು ಸೋಮಣ್ಣನವರಿಂದ ಅಲ್ಲ. ಕಾಂಗ್ರೆಸ್ ಬಿಟ್ಟು ಬಂದ ನಂತರ ಎರಡು ಸಲ ಸಚಿವರಾಗಿದ್ದು, ಸೋತಾಗಲೂ ಸೋಮಣ್ಣಗೆ ಎಂಎಲ್‌ಸಿ ಮಾಡಿ, ಸಚಿವರಾಗಿದ್ದು ಇದು ಯಡಿಯೂರಪ್ಪ ಮಾಡಿದ ತಪ್ಪಾ?
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ