ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯದಂತೆ ಡಮ್ಮಿ ನಾಯಕರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿ ರೆಬೆಲ್‌ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ದಾವಣಗೆರೆ (ಫೆ.27): ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯದಂತೆ ಡಮ್ಮಿ ನಾಯಕರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿ ರೆಬೆಲ್‌ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ತಾವೇ ಲಿಂಗಾಯತ ನಾಯಕ, ತಾವೇ ಹಿಂದೂ ನಾಯಕರೆಂದು ಹೇಳಿಕೊಂಡು ಓಡಾಡುತ್ತಾರೆ. 

ನಾನು ಸಾಕಷ್ಟು ಲಿಂಗಾಯತ ಒಳಪಂಗಡಗಳ ಮಠಾಧೀಶರನ್ನು ಸಂಪರ್ಕಸಿದ್ದು, ಆದಷ್ಟು ಬೇಗನೆ ವೀರಶೈವ ಲಿಂಗಾಯತ ಸಭೆ ಮಾಡುತ್ತೇವೆ. ಆ ಮೂಲಕ ವೀರಶೈವ ಮಠಾಧೀಶರೂ, ಎಲ್ಲ ಒಳಪಂಗಡಗಳು ಸೇರಿ ಇಡೀ ಸಮಾಜವೇ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆನ್ನಿಗೆ ನಿಲ್ಲುವಂತೆ ಮಾಡುವುದರ ಜತೆಗೆ ವಿಜಯೇಂದ್ರರನ್ನು ಸಿಎಂ ಮಾಡುತ್ತೇವೆ ಎಂದರು. ಅಂತಹವರು ಚಲಾವಣೆಯಲ್ಲೇ ಇಲ್ಲದ ನಾಣ್ಯಗಳಂತೆ ಎಂದು ಟೀಕಿಸಿದರು.

ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಬಂಡವಾಳ ಬಿಚ್ಚಿಡ್ತೀನಿ: ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ

ಹೈಕಮಾಂಡ್‌ ಬೇಡ ಅಂದಿಲ್ಲ: ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಜನ್ಮದಿನ ಆಚರಿಸುವುದಕ್ಕೆ ನಮಗೇನು ಬೇಡ ಅಂದಿಲ್ಲ. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಸದ್ಯಕ್ಕೆ ಬೇಡ ಅಂದಿದ್ದರು. ಆ ಮಾತಿಗೆ ಗೌರವ ಕೊಟ್ಟು ಸುಮ್ಮನಿದ್ದೇವಷ್ಟೇ. ಒಂದು ವೇಳೆ ಸಮಾರಂಭ ಮಾಡಿದರೆ ಪಕ್ಷದ ಹೈಕಮಾಂಡ್‌ ನಾಯಕರೂ ಭಾಗವಹಿಸುತ್ತಾರೆ ಎಂದರು.

ಪ್ರತ್ಯೇಕ ಸಭೆ ಇರಲ್ಲ: ಇನ್ನು ಮುಂದೆ ಪಕ್ಷದಲ್ಲಿ ಪ್ರತ್ಯೇಕ ಸಭೆಗಳು ಇರುವುದಿಲ್ಲ. ರಾಜ್ಯಾಧ್ಯಕ್ಷರ ನೇತೃತೃತ್ವದಲ್ಲೇ ಎಲ್ಲಾ ಸಭೆಗಳು ಹಾಗೂ ಹೋರಾಟಗಳು ನಡೆಯಲಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಒಂದು ವಾರದಲ್ಲಿ ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಕ್ತಾಯವಾಗಲಿದೆ. ಇನ್ನೇನಿದ್ದರೂ ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿಲ್ಲ. ಈ ಸರ್ಕಾರದ ವೈಫಲ್ಯಗಳನ್ನು ಜನರ ಮನೆಗೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಬುಧವಾರ ಜರುಗಲಿದ್ದ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರದ್ದುಗೊಳಿಸಲಾಗಿದೆ ಎಂದರು.

ವಿಜಯೇಂದ್ರ ಬಗ್ಗೆ ಮಾತಾಡೋ ನೈತಿಕತೆ ಶಾಸಕ ಯತ್ನಾಳ್‌ಗಿಲ್ಲ: ಎಂ.ಪಿ.ರೇಣುಕಾಚಾರ್ಯ

ವಾರದಲ್ಲಿ ಬಿಜೆಪಿ ಆಂತರಿಕ ಸಂಘರ್ಷ ಮುಕ್ತಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ಗೆ ಚಳಿ ಬಿಡಿಸಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ವರ್ಗಾವಣೆಯಲ್ಲಿ ಹಗಲು ದರೋಡೆ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ್ದಾರೆ. ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಬೂತ್‌ ಮಟ್ಟಕ್ಕೆ ಇಳಿದು ಪಕ್ಷ ಸಂಘಟಿಸಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರಿಗೆ ಈ ಎಲ್ಲದರ ಬಗ್ಗೆ ಮಾಹಿತಿ ಇದೆ. ಹೀಗಾಗಿ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ವಿಜಯೇಂದ್ರ ನೇತೃತ್ವದಲ್ಲೇ ಇನ್ನು ಮುಂದೆ ಸಭೆಗಳು, ಹೋರಾಟಗಳು ನಡೆಯಲಿವೆ. ನಾವೆಲ್ಲ ಅವರ ಭುಜಕ್ಕೆ ಭುಜ, ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆ. ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಮಾಡುತ್ತೇವೆ. ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ ಎಂದು ಹೇಳಿದರು.