ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಟ್ ಹೊಲೆಸಿ, ಕಾಯ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿಯಾಗಲು ಸೂಟ್ ಹೊಲೆಸಿಕೊಂಡು ಅನೇಕರು ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ಅತೃಪ್ತರಿಗೆ ಮನವಿ ಮಾಡಿದರು.
ದಾವಣಗೆರೆ (ಸೆ.30): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ಮುಖ್ಯಮಂತ್ರಿಯಾಗಲು ಸೂಟ್ ಹೊಲೆಸಿಕೊಂಡು ಅನೇಕರು ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ಅತೃಪ್ತರಿಗೆ ಮನವಿ ಮಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ, ಮೈಸೂರು, ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದು ಪಕ್ಷದ ವರಿಷ್ಠರು. ಆದರೆ, ಬಿಜೆಪಿ ಸೋಲಲು ನಮ್ಮ ಸ್ವಯಂಕೃತಾಪರಾಧವೇ ಕಾರಣ. ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಂಡವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು? ನನಗೆ ಅಲ್ಲಿನ ಮುಖಂಡರೇ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಆಡಿಯೋ ರೆಕಾರ್ಡ್ ಸಹ ನನ್ನ ಬಳಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಟವೆಲ್, ಟಿಶ್ಯೂ ಪೇಪರ್ ಹಾಕಿಕೊಂಡು ಕಾಯುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 3-4 ತಿಂಗಳಿನಿಂದ ಸಿಎಂ, ಸಚಿವರು ಜನರ ಕೈಗೆ ಸಿಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ದೂರಿದರು.
ಭಾರತ ವಿಶ್ವಗುರುವಾಗುವುದರಲ್ಲಿ ದಾಪುಗಾಲು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸಚಿವ ಜಮೀರ್ ಅಹಮ್ಮದ್ ನ್ಯಾಯಾಂಗ ನಿಂದನೆ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಭೈರತಿ ಸುರೇಶ ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿ, ಮುಡಾ ಸೈಟ್‌ಗಳ ಕಡತದ ಗಂಟು ಮೂಟೆಗಳೆಲ್ಲವನ್ನೂ ಅಲ್ಲಿನ ಡಿಸಿ, ಮುಡಾ ಆಯುಕ್ತರಿಂದ ಬೆಂಗಳೂರಿಗೆ ತರುತ್ತಾರೆ. ಅಂದೇ ಸಿಎಂ ನಿವೇಶನ ಮರಳಿಸಿದ್ದರೆ ಇಂದು ಇಷ್ಟೆಲ್ಲಾ ಕಂಟಕ ಬರುತ್ತಿರಲಿಲ್ಲ ಎಂದ ರೇಣುಕಾಚಾರ್ಯ, ನೈತಿಕತೆ ಇಲ್ಲದ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಸರ್ಕಾರವನ್ನು ವಿಸರ್ಜಿಸಿ, ಮತ್ತೊಮ್ಮೆ ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದರು.
ಮುಡಾ ದಾಖಲೆ ನೀಡಿದ್ದೇ ಡಿಕೆಶಿ: ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿರುವುದೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಆಪ್ತ ಬಳಗದವರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿ, ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸಿದ್ದರಾಮಯ್ಯನವರ ಆಪ್ತ ಬಳಗದವರೇ ಒಳಸಂಚು ಮಾಡುತ್ತಿದ್ದಾರೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಈ ಪ್ರಸಿದ್ಧ ನಟಿ ಹಿಂದೆ ಬಿದ್ದು ಪ್ರೀತಿಸಿದ್ರಂತೆ: ಆದರೆ ಅದು ಒನ್ ವೇ ಲವ್!
ಸ್ವತಃ ಸಿದ್ದರಾಮಯ್ಯ ಅವರೇ ತಮಗೆ ಸಂಗೊಳ್ಳಿ ರಾಯಣ್ಣನ ರೀತಿಯ ಸಂಕಷ್ಟ ತಂದಿದ್ದಾರೆ ಎಂದಿರುವುದು ಸಿಎಂ ಆಪ್ತ ಬಳಗದವರೇ ಮುಡಾ ಹಗರಣದ ದಾಖಲೆ ನೀಡಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಕಾಂಗ್ರೆಸ್‌ನಲ್ಲಿಯೇ ಸಿಎಂ ಕುರ್ಚಿಗಾಗಿ ಒಳ ಜಗಳವಿದ್ದು, ಶೀಘ್ರವೇ ಸರ್ಕಾರ ಪತನವಾಗುವುದು ಖಚಿತ. ರಾಜ್ಯದ ಜನತೆ ಇಟ್ಟಿರುವ ಅಭಿಮಾನ ಉಳಿಸಿಕೊಳ್ಳಲು ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುವ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.