Mandya: ಕುಮಾರಸ್ವಾಮಿ ಹೇಳಿಕೆ ಓಟಿನ ರಾಜಕಾರಣ: ಎಚ್.ಸಿ.ಮಹದೇವಪ್ಪ
ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಮುಖ್ಯಮಂತ್ರಿ ಹಾಗೂ ಮಹಿಳೆಯನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಕೇವಲ ಓಟಿನ ರಾಜಕಾರಣವಾಗಿದೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.
ಮದ್ದೂರು (ಡಿ.01): ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಮುಖ್ಯಮಂತ್ರಿ ಹಾಗೂ ಮಹಿಳೆಯನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಕೇವಲ ಓಟಿನ ರಾಜಕಾರಣವಾಗಿದೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯಾವತ್ತು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಆ ಪಕ್ಷದ ನಾಯಕರ ಮಾತುಗಳನ್ನು ಯಾರು ನಂಬುವ ಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.
ಜೆಡಿಎಸ್‌ನವರು ಹೊಂದಾಣಿಕೆ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಬಹುಮತದ ಹತ್ತಿರಕ್ಕೆ ಬಂದು. ನಿಲ್ಲುವಂತ ಪಕ್ಷಗಳ ಜೊತೆ ಕೈಜೋಡಿಸಿಕೊಂಡು ಸರ್ಕಾರ ರಚಿಸಿಕೊಳ್ಳುವುದು ಅವರ ಮುಖ್ಯ ಗುರಿಯಾಗಿದೆ. ಹೀಗಾಗಿ ಆ ಪಕ್ಷದ ನಾಯಕರು ಚುನಾವಣೆಯಲ್ಲಿ 30 ರಿಂದ 40 ಸ್ಥಾನಗಳನ್ನು ಗೆಲ್ಲುವುದಕ್ಕೆ ಮಾತ್ರ ಆಸಕ್ತಿ ತೋರಿಸುತ್ತಾರೆ ಎಂದರು. ಆ ಪಕ್ಷದ ನಾಯಕರಾದ ಕುಮಾರಸ್ವಾಮಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಯ ಜೊತೆಗೆ ಕಮೀಷನ್ ದಂಧೆಗೂ ಕಡಿವಾಣ ಹಾಕುತ್ತೇವೆ ಎನ್ನುವ ಮಾತನ್ನು ರಾಜ್ಯದ ಜನರು ನಂಬುವಂತಹ ಸ್ಥಿತಿಯಲ್ಲಿ ಇಲ್ಲ ಎಂದು ಕುಹಕವಾಡಿದರು.
ನಾನು ಎಂದಿಗೂ ಸಹ ನಿಮಗೆ ಚಿರಋಣಿಯಾಗಿದ್ದೇನೆ: ಎಚ್.ಸಿ.ಮಹದೇವಪ್ಪ
ಲೂಟಿಯಲ್ಲಿ ಬಿಜೆಪಿಗೆ ಆಸಕ್ತಿ: ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಕಮೀಷನ್ ದಂಧೆ ನಡೆಸಿ ಹಣ ಲೂಟಿ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿವೆಯೇ ವಿನಃ ಜನ ಸಾಮಾನ್ಯರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿವೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಈಗಾಗಲೇ ಶೇ.40 ರಷ್ಟುಕಮೀಷನ್ ಪಡೆಯುತ್ತಿರುವ ಸರ್ಕಾರದ ವಿರುದ್ಧ ಪ್ರಧಾನ ಮಂತ್ರಿಗೆ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ಪ್ರಧಾನಿ ಅಥವಾ ಮುಖ್ಯಮಂತ್ರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಕಮೀಷನ್ ಹಗರಣದ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಮೌನವಾಗಿರುವುದನ್ನು ನೋಡಿದಾಗ ಇದು ಶೇ.40 ರಷ್ಟುಕಮೀಷನ್ ಸರ್ಕಾರ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತ್ತಾಗಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಯಾವುದೇ ಕಮೀಷನ್ ದಂಧೆ ಇರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಅವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಚಿವ ಸಂಪುಟದ ಸಚಿವರುಗಳು ಹಣ ಲೂಟಿ ಮಾಡುವುದನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಸರ್ಕಾರ ತೊಲಗಬೇಕು ಎನ್ನುವುದು ರಾಜ್ಯದ ಜನರ ಅಭಿಪ್ರಾಯವಾಗಿದೆ ಎಂದರು.
ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಗೆಲ್ಲುತ್ತಾರೆ: ಎಚ್.ಸಿ.ಮಹದೇವಪ್ಪ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಯಾವುದೇ ಕಪ್ಪು ಚುಕ್ಕಿ ಇಲ್ಲದೇ 5 ವರ್ಷ ಸಮರ್ಥವಾದ ಆಡಳಿತ ನಡೆಸಿದ್ದಾರೆ. ಅವರ ಆಡಳಿತವನ್ನು ಮನಗಂಡಿರುವ ರಾಜ್ಯದ ಜನತೆ ಮತ್ತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನ ಬಯಸಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು. ಈ ವೇಳೆ ಕೆಪಿಸಿಸಿ ಎಸ್ಸಿ ವಿಭಾಗದ ಸಂಘಟನಾ ಕಾರ್ಯದರ್ಶಿ ಎಚ್.ಹೊಂಬಯ್ಯ, ಕಬ್ಬಾಳಯ್ಯ, ಅಂಬರೀಶ್, ಜಯರಾಂ, ಸತೀಶ್, ಪುಟ್ಟರಾಮು, ರವಿಕುಮಾರ್, ಸಿದ್ದರಾಮು, ತಿಮ್ಮಯ್ಯ ಮತ್ತಿತ್ತರರು ಇದ್ದರು.