Asianet Suvarna News Asianet Suvarna News

ಬಿಜೆಪಿಯ ಗುಣವೇ ಸುಳ್ಳು ಹೇಳೋದು: ಎಚ್‌.ಸಿ.ಮಹದೇವಪ್ಪ

‘ದೇಶಭಕ್ತರು ಬೇಕಾ? ದೇಶ ವಿಭಜಕರು ಬೇಕಾ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣ, ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದವರು ಕಾಂಗ್ರೆಸ್ಸಿನವರು. ದೇಶಕ್ಕಾಗಿ ಬಿಜೆಪಿಯವರು ಹೋರಾಡಿದ ಒಂದು ಉದಾಹರಣೆ ಹೇಳಲಿ ನೋಡೋಣ’ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸವಾಲು ಹಾಕಿದ್ದಾರೆ. 
 

Ex Minister HC Mahadevappa Slams On BJP Government gvd
Author
First Published Jan 3, 2023, 1:30 AM IST

ಬೆಂಗಳೂರು (ಜ.03): ‘ದೇಶಭಕ್ತರು ಬೇಕಾ? ದೇಶ ವಿಭಜಕರು ಬೇಕಾ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣ, ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದವರು ಕಾಂಗ್ರೆಸ್ಸಿನವರು. ದೇಶಕ್ಕಾಗಿ ಬಿಜೆಪಿಯವರು ಹೋರಾಡಿದ ಒಂದು ಉದಾಹರಣೆ ಹೇಳಲಿ ನೋಡೋಣ’ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸವಾಲು ಹಾಕಿದ್ದಾರೆ. ಬಿಜೆಪಿಯವರ ಗುಣವೇ ಸುಳ್ಳು ಹೇಳುವುದು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಹೋರಾಟಗಾರರ ಪಟ್ಟಿತೆಗೆದುಕೊಳ್ಳಲಿ. ಅದರಲ್ಲಿ ಯಾವುದಾದರಲ್ಲಾದರೂ ಬಿಜೆಪಿಯವರು ಭಾಗವಹಿಸಿದ್ದರೆ ಉದಾಹರಣೆ ನೀಡಲಿ ಎಂದರು. ಅವರಿಗೆ ದೇಶಭಕ್ತಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಟಿಕೆಟ್‌ ಬಗ್ಗೆ ಹೈಕಮಾಂಡ್‌ ನಿರ್ಧಾರ: ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿ ಸೃಷ್ಟಿಯಾಗಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಹೀಗಾಗಿ ಇದೊಂದು ಉತ್ತಮ ಅವಕಾಶ, ನಾವೂ ಶಾಸಕರಾಗಬಹುದು ಎಂಬ ಕಾರಣಕ್ಕೆ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಅಂತಿಮವಾಗಿ ಟಿಕೆಟ್‌ ಯಾರಿಗೆ ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನನಗೆ ಹಾಗೂ ನನ್ನ ಮಗನಿಗೆ ಟಿಕೆಟ್‌ ನೀಡುವ ಬಗ್ಗೆಯೂ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಲಿದೆ ಎಂದರು.

ಬಿಜೆಪಿಗರು ಬ್ರಿಟಿಷರ ಋಣ ತೀರಿಸುತ್ತಿದ್ದಾರೆ: ಎಚ್‌.ಸಿ.ಮಹದೇವಪ್ಪ ಟೀಕೆ

ಸಮಯ ಸಾಧಕ ರಾಜಕಾರಣ, ಜೆಡಿಎಸ್‌ ಬಗ್ಗೆ ಪರೋಕ್ಷ ಟೀಕೆ: ಕೆಲವರು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿ ಎಂದು ಕಾಯುತ್ತಿದ್ದಾರೆ. ಅಂತಹ ಪಕ್ಷಗಳಿಗೆ ಏನೆಂದು ಕರೆಯಬೇಕು. ಸಮಯ ಸಾಧಕ ರಾಜಕಾರಣವೇ ಹಾಗಲ್ಲವೇ? ಎಂದು ಪರೋಕ್ಷವಾಗಿ ಜೆಡಿಎಸ್‌ ಪಕ್ಷವನ್ನು ಡಾ.ಎಚ್‌.ಸಿ. ಮಹದೇವಪ್ಪ ಟೀಕಿಸಿದ್ದಾರೆ. ಇನ್ನು ಎಚ್‌.ಡಿ. ದೇವೇಗೌಡರು ಮಾಜಿ ಪ್ರಧಾನಮಂತ್ರಿಗಳು. ಅವರು ಯಾರನ್ನು ಯಾವಾಗ ಬೇಕಾದರೂ ಭೇಟಿಯಾಗಬಹುದೆಂದು ಎಂದು ಅಮಿತ್‌ ಶಾ ಜತೆ ವೇದಿಕೆ ಹಂಚಿಕೊಂಡ ಬಗ್ಗೆ ವ್ಯಂಗ್ಯವಾಡಿದರು.

ಬಡವರ ಬಗ್ಗೆ ಮೋದಿಗೆ ಎಂತಹ ಕಾಳಜಿ ಇದೆ?: ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ 1 ವರ್ಷ ಉಚಿತ ಪಡಿತರವ ವಿತರಿಸಲು ಕೇಂದ್ರ ನಿರ್ಧರಿಸಿದ್ದು, ಇದನ್ನು ಬಡವರ ಬಗ್ಗೆ ಮೋದಿ ಅವರಿಗೆ ಎಂತಹ ಕಾಳಜಿ ಇದೆ ನೋಡಿ ಎಂದು ಬಿಜೆಪಿಗರು ಹೇಳಲು ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಜರಿದಿದ್ದಾರೆ. ಆದರೆ ಅನ್ನಭಾಗ್ಯ ಯೋಜನೆಯಡಿ ಪೂರ್ಣ 5 ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಆಹಾರ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡಿದ ಸಂದರ್ಭದಲ್ಲಿ ಇದೇ ಬಿಜೆಪಿಗರು ಅನ್ನಭಾಗ್ಯ ಬಡವರನ್ನು ಸೋಮಾರಿಗೊಳಿಸುವ ಯೋಜನೆ ಎಂದು ಹೇಳಿದ್ದರು.

Mysuru: ಅಮಿತ್‌ ಶಾ ಹೇಳಿಕೆ ಹಾಸ್ಯಾಸ್ಪದ: ಎಚ್‌.ಸಿ.ಮಹದೇವಪ್ಪ

ಮೋದಿ ಅವರ ಆಹಾರ ಧಾನ್ಯ ವಿತರಣೆಯ ನಿರ್ಧಾರವು ಬಡವರ ಪರ ಎಂದ ಮೇಲೆ, ಸಿದ್ದರಾಮಯ್ಯ ಅವರ ಅನ್ನಭಾಗ್ಯವು ಅದಾನಿ ಪರ ಇರುತ್ತದೆಯೇ? ಈ ಎರಡು ತಲೆ ಹಾವಿನಂತಹ ಬಿಜೆಪಿಗರಿಗೆ ಇನ್ನೇನು ಹೇಳುವುದು? ಎಂದು ಪ್ರಶ್ನಿಸಿದ್ದಾರೆ. ಆಹಾರ ಯೋಜನೆಗಳಿಂದ ಎಂದಿಗೂ ಆರ್ಥಿಕತೆ ನಷ್ಟವಾಗುವುದಿಲ್ಲ. ಉತ್ಪಾದನೆಯಲ್ಲಿ ತೊಡಗುತ್ತಲೇ ಬಂದಿರುವ ಬಡವರಿಗೆ ಆಹಾರ ದೊರೆತರೆ ಅವರ ದುಡಿಯುವ ಶಕ್ತಿ ಹೆಚ್ಚಾಗುತ್ತದೆ ಮತ್ತು ಅದು ಆರ್ಥಿಕತೆಯ ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತದೆ ಎಂಬ ಅರ್ಥಶಾಸ್ತ್ರೀಯ ಜ್ಞಾನವನ್ನು ಅಸಮರ್ಪಕ ಶೀರ್ಷಿಕೆ ನೀಡುವ ಮಾಧ್ಯಮದ ಆದಿಯಾಗಿ ಎಲ್ಲರೂ ಹೊಂದಬೇಕು ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios