Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಜಾತಿ, ಧರ್ಮ ಒಡೆಯುವುದರಲ್ಲಿ ನಿಸ್ಸಿಮ: ಕೆ.ಎಸ್.ಈಶ್ವರಪ್ಪ

ಇಡೀ ಕರ್ನಾಟಕದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ಆದರೆ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ಮೇಲೆ ಬೇಸರ ಇದೆ. ಇದು ನಿಜ. ರಾಜ್ಯ ಬಿಜೆಪಿ ಸ್ಥಿತಿಗತಿ ಬಗ್ಗೆ ರಾಷ್ಟ್ರೀಯ ಮುಖಂಡರು ಬಹಳ ಬೇಸರಗೊಂಡಿದ್ದಾರೆ. ಆದರೆ, ಅವರ ನಿಯಂತ್ರಣ ಇಲ್ಲ ಎನ್ನುವುದು ಸುಳ್ಳು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
 

Ex DCM KS Eshwarappa Slams On CM Siddaramaiah At Hubballi gvd
Author
First Published Dec 15, 2023, 12:46 PM IST

ಹುಬ್ಬಳ್ಳಿ (ಡಿ.15): ಇಡೀ ಕರ್ನಾಟಕದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ಆದರೆ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ಮೇಲೆ ಬೇಸರ ಇದೆ. ಇದು ನಿಜ. ರಾಜ್ಯ ಬಿಜೆಪಿ ಸ್ಥಿತಿಗತಿ ಬಗ್ಗೆ ರಾಷ್ಟ್ರೀಯ ಮುಖಂಡರು ಬಹಳ ಬೇಸರಗೊಂಡಿದ್ದಾರೆ. ಆದರೆ, ಅವರ ನಿಯಂತ್ರಣ ಇಲ್ಲ ಎನ್ನುವುದು ಸುಳ್ಳು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲವರಲ್ಲಿ ಅಸಮಾಧಾನ ಇರುವುದೂ ನಿಜ. ಅವರೆಲ್ಲರೂ ಪಕ್ಷ ನಿಷ್ಠರೇ ಹೊರತು ಬಂಡಾಯಗಾರರಲ್ಲ, ಅವರು ವೈಯಕ್ತಿಕ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹೊರತು ಪಕ್ಷದಿಂದಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಮುಂದಿನ ದಿನಗಳಲ್ಲಿ ಹೈಕಮಾಂಡ್ ನಾಯಕರು ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ. 

ಬಿಜೆಪಿಯಲ್ಲಿ ನಾವು ಯಾರು ಹೆದರೋದಿಲ್ಲ. ಅವರು ದೆಹಲಿಯಲ್ಲಿದ್ದಾರೆ ನಾವು ಬೆಂಗಳೂರಿನಲ್ಲಿದ್ದೇವೆ ಅಷ್ಟೇ ಎಂದರು. ಭಯೋತ್ಪಾದಕ ಜತೆ ಸಿಎಂ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವುದು ಶಾಸಕ ಯತ್ನಾಳ ಅವರ ಹೇಳಿಕೆ ವೈಯಕ್ತಿಕವಾದದು. ಅದನ್ನು ದೃಢಪಡಿಸುವುದಾಗಿ ಅವರು ತಿಳಿಸಿದ್ದು, ಪ್ರೂವ್ ಮಾಡಲಿ ನೋಡೊಣ ಎಂದರು. ಸಿಎಂ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ, ಜಾತಿ, ಧರ್ಮ ಒಡೆಯುವುದರಲ್ಲಿ ನಿಸ್ಸಿಮ. ಈ ಹಿಂದೆ ಲಿಂಗಾಯತರಲ್ಲಿ ಒಡಕು ಉಂಟು ಮಾಡಿದ್ದರು. ಈಗ ಈಡಿಗ ಸಮಾಜ ಒಡೆಯಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಮುಸ್ಲಿಮರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮುಸಲ್ಮಾನರಿಗೆ ತೃಪ್ತಿ ಪಡಿಸಲು ಯಾವ ಮಟ್ಟಕ್ಕಾದರೂ ಸಿಎಂ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಎಲ್ಲಿಂತ ತರ್ತಿರಾ?: ವಿಜಯೇಂದ್ರ

ಅಂಬೇಡ್ಕರರು ಬುದ್ದಿವಂತಿಕೆಯಿಂದ ಸಂವಿಧಾನ ರಚಿಸಿದ್ದು, ಒಬ್ಬರಿಗೆ ಸಿಎಂ ಆಗಲು ಅವಕಾಶ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಬಹಳ ಜನ ಅಂಬೇಡ್ಕರ್‌ ಆಗಿದ್ದಾರೆ. ಅವಕಾಶ ಸಿಕ್ಕರೆ ಸಿಎಂ ಆಗ್ತಿನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಇನ್ನೊಂದೆಡೆ ಜಾರಕಿಹೊಳಿ ಕೂಡ ನಾನೇನು ಕಡಿಮೆ ಎನ್ನುತ್ತಿದ್ದಾರೆ. ಹೀಗೆ ಐದಾರು ಜನರು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಜಗದೀಶ್ ಶೆಟ್ಟರ ತಂದೆ ಜನಸಂಘದಲ್ಲಿ ಇದ್ದವರು. ಸೈದ್ಧಾಂತಿಕವಾಗಿ ಹಿಂದುತ್ವ, ರಾಷ್ಟ್ರವಾದಿಯಾಗಿದ್ದ ಶೆಟ್ಟರ ಯಕಃಶ್ಚಿತ ಟಿಕೆಟ್ ಸಿಗದೇ ಇದ್ದುದ್ದಕ್ಕೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದು, ಅವರ ತಂದೆಯವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.ಅವರು ಬಿಜೆಪಿಗೆ ಮತ್ತೆ ಬರಬೇಕೆನ್ನುವುದು ನನ್ನ ವೈಯಕ್ತಿಕ ಆಶಯ. ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಲೋಕಸಭೆ ಚುನಾವಣೆಗೆ ಸಜ್ಜಾಗುವಂತೆ ಪಕ್ಷ ನನ್ನ ಪುತ್ರ ಕಾಂತೇಶ್‌ಗೆ ಸೂಚನೆ ನೀಡಿದೆ. ಹಾಗಾಗಿ ಎಲ್ಲ ಕಡೆಗೂ ಓಡಾಡುತ್ತಿದ್ದಾನೆ.ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತಾನೆ. ಇಲ್ಲವೆಂದಾದಲ್ಲಿ ಪಕ್ಷ ಸಂಘಟಿಸುತ್ತಾನೆ ಎಂದರು. ಬಿಜೆಪಿಯು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಪರವಾಗಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ಹಿಂದುಳಿದ ವರ್ಗಗಳ ನಾಯಕರ ಅಭಿಪ್ರಾಯ ಪಡೆದಿದ್ದು, ಪರವಾಗಿ ನಿಲುವು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಜಾತಿ ಗಣತಿ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸುವ ಕುರಿತಾಗಿ ಸರ್ಕಾರದ ಸರ್ವ ಪಕ್ಷಗಳ ನಾಯಕರು, ಸ್ವಾಮೀಜಿಗಳು, ಸಮುದಾಯದ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದುವರಿಯಬೇಕು ಎಂದರು.

ಎಚ್‌ಡಿಕೆ ಬಿಜೆಪಿ ನಾಯಕತ್ವ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲ ವಿಚಾರವಾಗಿಯೂ ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಅವರು ಅವರ ಕೆಲಸ ಮಾಡ್ತಾ ಇದ್ದಾರೆ, ನಾವು ನಮ್ಮ ಕೆಲಸ ಮಾಡ್ತಾ ಇದ್ದೇವೆ. ಅವರು ನಾವು ಒಂದಾಗಿದ್ದೇವೆ. ಇದು ಆರಂಭ ಆಗಿದೆ ಮುಂದೆ ನೋಡೋಣ. ಈಗ ಪ್ರೀತಿ ಆರಂಭವಾಗಿದೆ ಇನ್ನೂ ಮದುವೆ ಆಗಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಲಿಂಗರಾಜ ಅಂಗಡಿ, ರವಿ ನಾಯಕ ಇದ್ದರು.

ಸಿದ್ದು ಸರ್ಕಾರ ಬರ ಪರಿಹಾರ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ

ಕೇಂದ್ರವೇ ಸ್ಪಷ್ಟಪಡಿಸಲಿ: ಯುವಕರು ಸಂಸತ್‌ನಲ್ಲಿ ಹೇಗೆ ನುಗ್ಗಿದರು ಎನ್ನುವುದನ್ನು ಕೇಂದ್ರ ಸರ್ಕಾರವೇ ತಿಳಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಧಾನಿ ಮೋದಿ ಸರ್ಕಾರಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿರುವುದಕ್ಕೆ ಕೆಲವೊಂದು ದುಷ್ಟ ಸಂಘಟನೆಗಳು ಹೀಗೆ ಮಾಡುತ್ತಿವೆ ಎಂದು ಆರೋಪಿಸಿದರು. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಎಂಪಿ ಪಾಸ್ ತೆಗೆದುಕೊಂಡು ಯುವಕ ಒಳನ್ನುಗ್ಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇದು ನಂಬಿಕೆ ಪ್ರಶ್ನೆ. ಕೂಲಂಕಷ ತನಿಖೆ ನಂತರ ಸತ್ಯ ಗೊತ್ತಾಗಲಿದೆ ಎಂದರು.

Latest Videos
Follow Us:
Download App:
  • android
  • ios