Asianet Suvarna News Asianet Suvarna News

ಸಿದ್ದು ಸರ್ಕಾರ ಬರ ಪರಿಹಾರ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಅಧಿವೇಶನದ ಬಳಿಕ ವಿಶ್ರಮಿಸದೇ ರೈತರ ಸಾಲಮನ್ನಾ ಮಾಡುವವರೆಗೆ ಹಾಗೂ ಕಾಂಗ್ರೆಸ್‌ ಆಡಳಿತದಿಂದ ಕೆಳಗಿಳಿಯುವವರೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು. 
 

Ex CM BS Yediyurappa Slams On Siddaramaiah Congress Govt At Belagavi gvd
Author
First Published Dec 15, 2023, 12:38 PM IST

ಬೆಳಗಾವಿ (ಡಿ.15): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಅಧಿವೇಶನದ ಬಳಿಕ ವಿಶ್ರಮಿಸದೇ ರೈತರ ಸಾಲಮನ್ನಾ ಮಾಡುವವರೆಗೆ ಹಾಗೂ ಕಾಂಗ್ರೆಸ್‌ ಆಡಳಿತದಿಂದ ಕೆಳಗಿಳಿಯುವವರೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು. ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಬುಧವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್‌ ಹೋರಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ರೈತರಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಕಿಸಾನ್‌ ಸನ್ಮಾನ ಯೋಜನೆ ಮೂಲಕ ಕೇಂದ್ರ ಕೊಡುತ್ತಿದ್ದ ₹6 ಸಾವಿರ ಹಣಕ್ಕೆ ರಾಜ್ಯ ಸರ್ಕಾರದಿಂದಲೂ ₹4 ಸಾವಿರ ಸೇರಿಸಿ ರೈತರಿಗೆ ₹10 ಸಾವಿರ ಕೊಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕಿಸಾನ್‌ ಸಮ್ಮಾನ ಯೋಜನೆ ನಿಲ್ಲಿಸಿ ರೈತರಿಗೆ ದ್ರೋಹ ಮಾಡಿದೆ ಎಂದು ದೂರಿದರು. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಳಸಾ ಬಂಡೂರಿ ಯೋಜನೆಗೆ ಕಾಂಗ್ರೆಸ್ ಒಂದು ಪೈಸೆ ಹಣ ಕೂಡ ನೀಡಿಲ್ಲ. ನಾನು ಸಿಎಂ ಆದಾಗ ಹಣ ನೀಡಿದ್ದೇನೆ. ಅಧಿವೇಶನ ಮುಗಿದ ಬಳಿಕ ರಾಜ್ಯದಲ್ಲಿ ಹೊರಾಟ ಮಾಡಿ ಈ ಸರ್ಕಾರ ಕೆಳಗೆ ಇಳಿಯುವವರೆಗೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಸತ್ ಮೇಲೆ ದಾಳಿ ಹಿಂದೆ ಬೇರೆಯ ಹುನ್ನಾರ ಇದೆ: ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಾಕಷ್ಟು ಭರವಸೆ ಮೂಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಭೀಕರ ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಪರಿಹಾರ ಕೊಡುವ ಕುರಿತು ಮಾತನಾಡುತ್ತಿಲ್ಲ. ಅದೇ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರ ಕಣ್ಣಿದ್ದೂ ಕುರುಡನಂತೆ ಕಿವಿ ಇದ್ದೂ ಕಿವುಡನಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜ್ವಲಂತ ಸಮಸ್ಯೆಗಳಿಗೆ ಇಲ್ಲಿಯೇ ಉತ್ತರ ಕೊಡಬೇಕು ಎಂದು ಸುವರ್ಣ ವಿಧಾನ ಸೌಧವನ್ನು ಯಡಿಯೂರಪ್ಪ ನಿರ್ಮಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಯಾಕೋ ರೈತರ ಪರ ಕಾಳಜಿ ತೋರಿಸುತ್ತಿಲ್ಲ. ಮಾತು ಎತ್ತಿದರೆ ಕೇಂದ್ರವನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಬ್ಬು ಬೆಳೆಗಾರರಿಗೆ ಪ್ರತಿ ಎಕರೆಗೆ ₹25 ಸಾವಿರ, ದ್ರಾಕ್ಷಿಗೆ ₹50 ಸಾವಿರ ಪರಿಹಾರ ಕೊಡುವಂತೆ ವಿನಂತಿ ಮಾಡಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಮಧ್ಯಂತರ ಪರಿಹಾರ ಕೊಡುತ್ತಾರೆ ಎಂದು ಭಾವಿಸಿದ್ದೆವು. ರೈತರ ಸಾಲ ವಸೂಲಿ ಮಾಡಲು ಬ್ಯಾಂಕ್‌ನವರು ಹೋಗುತ್ತಿದ್ದಾರೆ. ಅದನ್ನು ತಡೆಯುವಂತೆ ಆಗ್ರಹಿಸಿದ್ದೇವೆ. ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳಗಾವಿಯಲ್ಲಿ ಆರಂಭವಾದ ಹೋರಾಟ ರಾಜ್ಯದ ಮೂಲೆ ಮೂಲೆಯಲ್ಲಿಯೂ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಗೆಲವು ಸಾಧಿಸಬೇಕಿದೆ.

ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಬರದಿಂದಾಗಿ ಸಮಸ್ಯೆ ಎದುರಿಸುವ ರೈತರಿಗೆ ಕೊಡಲು ಹಣ ಇಲ್ಲ. ಸಾಬರ ಕಾರ್ಯಕ್ರಮದಲ್ಲಿ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಹಾಲಿಗೆ ₹3 ಮತ್ತು ಕ್ವಾಟರ್ ಮದ್ಯಕ್ಕೆ ₹50ಹೆಚ್ಚಿಗೆ ಮಾಡಿದ್ದಾರೆ. ಮತ್ತೊಂದು ಕಡೆ ಉಚಿತ ಎನ್ನುತ್ತಿದ್ದಾರೆ. ಉಚಿತ ಎನ್ನುವುದು ಮೋಸ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಈ ಭಾಗಕ್ಕೆ ಒಂದು ₹10 ಸಾವಿರ ಕೋಟಿ ಸಿಗುತ್ತೆ ಎಂದು ಭಾವಿಸಿದ್ದರು. ಹಿಂದೆ ಯಡಿಯೂರಪ್ಪನವರು ನಿಮ್ಮ ಇಲಾಖೆಯಿಂದ ಉತ್ತರ ಕರ್ನಾಟಕಕ್ಕೆ ಏನೆಲ್ಲ ಕೊಡಬಹುದು ಎಂದು ಕೇಳುತ್ತಿದ್ದರು. ಆದರೆ, ಈಗಿನ ಸರ್ಕಾರದ ಆ ತರಹದ ಯಾವುದೇ ನಿರ್ಣಯಗಳು ಇಲ್ಲ. ಸರ್ಕಾರದ ಬಳಿ ರೈತರಿಗೆ ಕೊಡಲು ಹಣವಿಲ್ಲ. ಅವರಿಗೆ ಕೇವಲ ಮುಲ್ಲಾಗಳಿಗೆ ಹಣ ಕೊಡಲು ಇದೆ ಎಂದು ಕಿಡಿಕಾರಿದರು.

ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸಾವಿರಾರು ಕೋಟಿ ಟ್ಯಾಕ್ಸ್ ಹಾಕುತ್ತಿದ್ದಾರೆ. ರೈತರಿಗೆ ಕೇವಲ ₹2 ಸಾವಿರ ಕೊಡುತ್ತಿದ್ದಾರೆ. ಆದರೆ, ಯಡಿಯೂರಪ್ಪ ₹25 ಸಾವಿರ ಕೊಡುತ್ತಿದ್ದರು. ಈ ಸರ್ಕಾರ ಪಾಪರ್ ಸರ್ಕಾರವಾಗಿದೆ. ಮಾತು ಎತ್ತಿದೆ ಬರೀ ₹2 ಸಾವಿರ ಎನ್ನುತ್ತಾರೆ. ಗಂಡನಿಂದ ಕಿತ್ತು ಹೆಂಡತಿಗೆ ಕೊಡುತ್ತಾರೆ. ಸಿದ್ದರಾಮಯ್ಯಗೆ ಗರ ಬಡಿದಂಗೆ ಕೂತಿರುತ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ರಾಕ್ಷಸ ಗಣ ಇದೆ. ಜೈಲಿಗೆ ಹೋಗಿಬಂದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಷ್ಟ್ರದ್ರೋಹಿ ಜಮೀರ್ ಅಹ್ಮದ್, ಸಣ್ಣ ವಿಚಾರ ಎನ್ನುವ ಡಾ.ಪರಮೇಶ್ವರ್, ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ, ಸುಳ್ಳಿನ ಸರದಾರ ಸಿದ್ದರಾಮಯ್ಯ ಈ ರಕ್ಕಸ ಗಣದಲ್ಲಿದ್ದಾರೆ. ಈ ಸುಳ್ಳಿನ ಸರದಾರ ಜನರ ನಡುವೆ ಜಗಳ ತಂದಿಟ್ಟಿದ್ದಾರೆ. ಟೋಪಿ ಸರ್ಕಾರ ಬಹಳ ದಿನ ಉಳಿಯದು ಎಂದು ತಿಳಿಸಿದರು.

ಗೋವಿಂದ ಕಾರಜೋಳ ಮಾತನಾಡಿ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಎಲ್ಲವನ್ನು ಬಂದ ಮಾಡುವ ಮೂಲಕ ಉತ್ತರ ಕರ್ನಾಟಕ ವಿರೋಧಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಮಯದಲ್ಲಿ ಬರಗಾಲ ಎದುರಾಗುತ್ತದೆ. ಕಳೆದ 6 ತಿಂಗಳಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ ಎಂದು ದೂರಿದರು.

ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಎಲ್ಲಿಂತ ತರ್ತಿರಾ?: ವಿಜಯೇಂದ್ರ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ರಮೇಶ ಕತ್ತಿ, ಶಾಸಕರಾದ ಅರವಿಂದ ಬೆಲ್ಲದ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ಬೈರತಿ ಬಸವರಾಜ, ಸುನೀಲಕುಮಾರ, ಎನ್‌.ರವಿಕುಮಾರ, ಕೋಟಾ ಶ್ರೀನಿವಾಸ ಪೂಜಾರಿ, ಮಹಾಂತೇಶ ಕವಟಗಿಮಠ, ವಿಠ್ಠಲ ಹಲಗೇಕರ, ಆರಗ ಜ್ಞಾನೇಂದ್ರ, ಹಣಮಂತ ನಿರಾಣಿ, ಅನಿಲ ಬೆನಕೆ, ಅಭಯ ಪಾಟೀಲ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Follow Us:
Download App:
  • android
  • ios