ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಖಜಾನೆ ಲೂಟಿ: ಮಾಜಿ ಡಿಸಿಎಂ ಗೋವಿಂದ ಕಾರಜೋಳ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಖಜಾನೆ ಲೂಟಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗ (ಜೂ.01): ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಖಜಾನೆ ಲೂಟಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ನಿಗಮದ ಹಗರಣ ಸರ್ಕಾರದ ಹಗಲು ದರೋಡೆಯಾಗಿದ್ದು ಮಾರ್ಚ್ ತಿಂಗಳಲ್ಲಿ 180 ಕೋಟಿ ಹಣ ವರ್ಗಾವಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಈ ವರೆಗೆ ಬಾಯಿ ಬಿಟ್ಟಿಲ್ಲ. ಸಚಿವ ನಾಗೇಂದ್ರ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಆದೇಶ ಮಾಡಬೇಕಿತ್ತು. ಈ ಕೆಲಸ ಮಾಡದೆ ಲಘುವಾಗಿ ನಡೆದುಕೊಳ್ಳಲಾಗಿದೆ ಎಂದರು.
2022ರಲ್ಲಿ ಗುತ್ತಿಗೆದಾರನೇ ಅಲ್ಲದ ಸಂತೋಷ ಪಾಟೀಲ್ ಆತ್ಮಹತ್ಯೆ ಆಗಿತ್ತು. ಆಗ ಕೆ.ಎಸ್.ಈಶ್ವರಪ್ಪ ವಿರುದ್ಧ ಸಿದ್ಧರಾಮಯ್ಯ ಮಾತಾಡಿದ್ದರು. ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದರು. ಈಗ ಸಿಎಂ ಆಗಿರುವ ಸಿದ್ಧರಾಮಯ್ಯ ನಾಗೇಂದ್ರ ವಿರುದ್ಧ ಕ್ರಮ ಕೈಗೊಳ್ಳುತ್ತಲ್ಲ ಏಕೆ ಎಂದು ಪ್ರಶ್ನಿಸಿದರು.ಸರ್ಕಾರದ ಖಜಾನೆಯಿಂದ ಹಣ ವರ್ಗಾವಣೆ ಆಗಿದೆ. ಸಿದ್ದರಾಮಯ್ಯಗೆ ನೈತಿಕತೆ ಇಲ್ಲವೆಂದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ ಭಾಗಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೇ ತಪ್ಪು ಮಾಡಿದ್ದರೂ ನಿಷ್ಪಕ್ಷಪಾತ ತನಿಖೆ ಆಗಲಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿ ಎಂದರು. ಸಿಎಂ, ಡಿಸಿಎಂ ವಿರುದ್ಧ ಕೇರಳದಲ್ಲಿ ರಾಜಕಂಟಕ ಯಾಗ ಎಂದು ಡಿಸಿಎಂ ಡಿಕೆಶಿ ಹೇಳಿಕೆಗೆ ನಾನು ಬಸವತತ್ವದಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ. ಮೂಢನಂಬಿಕೆ, ಕಂದಾಚಾರಗಳಿಗೆ ಬೆಲೆ ಕೊಟ್ಟಿಲ್ಲ, ಈ ಬಗ್ಗೆ ಪ್ರತಿಕ್ರಿಯಿಸಲ್ಲವೆಂದು ಕಾರಜೋಳ ಹೇಳಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತವಾಗಿ ತನಿಖೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ವಿಚಾರದಲ್ಲಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಡೀ ಪ್ರಕರಣವನ್ನು ಖಂಡಿಸಿ ಬಿಜೆಪಿ ಉಗ್ರ ಹೋರಾಟ ನಡೆಸಲಿದ್ದು, ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರು ಹೋರಾಟದ ರೂಪುರೇಷೆ ರೂಪಿಸಲಿದ್ದಾರೆ ಎಂದರು.
ಸರ್ಕಾರದ ತನಿಖಾ ಸಂಸ್ಥೆಗಳಿಂದ ಸಮಗ್ರ, ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಸಚಿವರ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಡೆತ್‌ನೋಟ್ ಬರೆದಿದ್ದಾರೆ. ಆದರೂ, ಎಫ್ಐಆರ್‌ನಲ್ಲಿ ಸಚಿವರ ಹೆಸರು ಯಾಕೆ ಬಂದಿಲ್ಲ? ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕಿಡಿಕಾರಿದರು.
ಏಳನೇ ವೇತನ, ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ಧತೆ: ಮಾಜಿ ಸಚಿವ ಆಂಜನೇಯ
ಬ್ಯಾಂಕ್ ಖಾತೆಯು ವ್ಯವಸ್ಥಾಪಕ ನಿರ್ದೇಶಕರ ಮತ್ತು ಲೆಕ್ಕಾಧಿಕಾರಿಯ ಜಂಟಿ ಖಾತೆಯಾಗಿರುತ್ತದೆ. ಮಾರ್ಚ್‌ನಲ್ಲಿ ಹಣ ವರ್ಗಾವಣೆಯಾಗಿದೆ. ಮಾ. 4ರಂದು 25 ಕೋಟಿ ರು., 6ರಂದು 25 ಕೋಟಿ ಕೋಟಿ ರು. ಮತ್ತು 21ರಂದು 44 ಕೋಟಿ ಕೋಟಿ ರು. ವರ್ಗಾವಣೆ ಆಗಿದೆ. ಜಂಟಿ ಖಾತೆ ಇದ್ದಾಗ ಹೇಗೆ ವರ್ಗಾವಣೆಯಾಗಿದೆ? ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸತ್ಯವನ್ನು ಮುಚ್ಚಿಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣ ಇದಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲುದರೋಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.