ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಸರ್ಕಾರದ ವಿರುದ್ಧ ಮುಗಿಬಿದ್ದ ಮಾಜಿ ಸಿಎಂಗಳು
ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿರುವುದಕ್ಕೆ ಕರ್ನಾಟಕದ ಮಾಜಿ ಸಿಎಂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು, (ಮೇ.27): ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಸರಿಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
"
ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣಕ್ಕೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್‌ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ಏಟು..!
ಯಲಹಂಕ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯಹೋರಾಟಗಾರರೊಬ್ಬರ ಹೆಸರಿಡಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ ಎನ್ನುವುದಕ್ಕೆ ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡುವ ಅವಸರದ ನಿರ್ಧಾರವೇ ಪುರಾವೆ. ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿರುವುದು ಇಂತಹ ಜನವಿರೋಧಿ ನಿರ್ಧಾರಗಳಿಗಾಗಿಯೇ? ಎಂದು ಸಿಎಂ ಬಿಎಸ್‌ವೈಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಟ್ವೀಟ್
'ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕೆ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು' ಎಂದು ಕಿಡಿಕಾರಿದ್ದಾರೆ.
'ಸ್ವಾತಂತ್ರ್ಯ ಪೂರ್ವ ಮತ್ತು ನಂತರ ನಾಡಿನ ಅಭಿವೃದ್ಧಿಗೆ ಮತ್ತು ಹಿತಕ್ಕಾಗಿ ದುಡಿದ ಹಲವು ಮಹನೀಯರಿದ್ದಾರೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಡಬಹುದಿತ್ತು. ರಾಜ್ಯದ ಹೋರಾಟಗಾರರ ಹೆಸರನ್ನು ಬೇರೆ ರಾಜ್ಯಗಳಲ್ಲಿ ನಾಮಕರಣ ಮಾಡುವುದುಂಟೆ? ಎಂದು ಪ್ರಶ್ನಿಸಿರುವ ಎಚ್‌ಡಿಕೆ, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ನಾಡಿನ ಜನತೆಯ ಪರವಾಗಿ ಆಗ್ರಹ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.