ಬೆಂಗಳೂರು, (ಆ.18): ಖಾಲಿಯಾ ಗಿರುವ ಖಜಾನೆ ತುಂಬಿಕೊಳ್ಳಲು ಬಿಬಿಎಂಪಿ, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುತ್ತಿಗೆಗೆ ನೀಡಿರುವ ಜಮೀನನ್ನು ಪರಭಾರೆ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ದುರದೃಷ್ಟಕರ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸರಣಿ ಟ್ವಿಟ್ ಮಾಡಿರುವ ಅವರು, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ತರಾತುರಿಯಲ್ಲಿ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಭವಿಷ್ಯಕ್ಕೆ ಮುಳುವಾಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬೆಂಗಳೂರು ಗಲಭೆಗೆ ಟೆರರ್‌ ನಂಟು, ನಿವಾರಣೆಯಾಯ್ತು ಗಣೇಶೋತ್ಸವ ಕಗ್ಗಂಟು: ಆ.18ರ ಟಾಪ್ 10 ಸುದ್ದಿ!

ಗುತ್ತಿಗೆಗೆ ನೀಡಿರುವ ಜಮೀನನ್ನು ಮಾರಾಟ ಮಾಡಿದರೆ ಮುಂದೆ ಸಾರ್ವಜನಿಕ ಅವಶ್ಯಕತೆಗಳಿಗೆ ಸರ್ಕಾರಿ ಜಮೀನೇ ಇಲ್ಲದಂತಾಗುತ್ತದೆ. ಅಗತ್ಯವಿದ್ದಾಗ ಖಾಸಗಿಯವರ ಎದುರು ಅಂಗಾಲಾಚಬೇಕಾದ ದೈನೇಸಿ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೊಕ್ಕಸ ತುಂಬಿಸಿಕೊಳ್ಳಲು ಬಿಡಿಎ ನಿವೇಶನಗಳನ್ನು ಹರಾಜು ಹಾಕುತ್ತಿರುವ ಸರ್ಕಾರ ಇದೀಗ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ನೀಡಿರುವ ಜಮೀನಿನ ಮೇಲೆ ಕಣ್ಣಿಟ್ಟಿದೆ. ಇಂತಹ ತಾತ್ಕಾಲಿಕ ಉಪಶಮನಗಳಿಂದ ಶಾಶ್ವತವಾಗಿ ಬೊಕ್ಕಸ ತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸುಮಾರು 5 ಸಾವಿರ ಕೋಟಿ ರೂ.ಗಳ ಆದಾಯ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರ ಇರುವುದನ್ನೂ ಕಳೆದುಕೊಳ್ಳುವ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.