Asianet Suvarna News Asianet Suvarna News

ಕೆಆರ್‌ಎಸ್ ಅಣೆಕಟ್ಟು ನೋಡಿದ್ರೆ ಹೊಟ್ಟೆ ಉರಿಯುತ್ತೆ: ಮಾಜಿ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ರಾಜ್ಯದೊಳಗೆ ಬರಗಾಲ ಸೃಷ್ಟಿಸಿದೆ. ತಮಿಳುನಾಡು ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನೀರಿನ ವಾಸ್ತವಾಂಶ ಹೇಳಲು ಏಕೆ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಕೆಆರ್‌ಎಸ್ ಅಣೆಕಟ್ಟು ನೋಡಿದಾಗ ನನ್ನ ಹೊಟ್ಟೆ ಉರಿಯುತ್ತಿದೆ.

Ex CM Basavaraj Bommai Talks Over KRS Dam At Mandya gvd
Author
First Published Sep 9, 2023, 2:41 PM IST

ಮಂಡ್ಯ/ಶ್ರೀರಂಗಪಟ್ಟಣ (ಸೆ.09): ಕಾಂಗ್ರೆಸ್ ರಾಜ್ಯದೊಳಗೆ ಬರಗಾಲ ಸೃಷ್ಟಿಸಿದೆ. ತಮಿಳುನಾಡು ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನೀರಿನ ವಾಸ್ತವಾಂಶ ಹೇಳಲು ಏಕೆ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಕೆಆರ್‌ಎಸ್ ಅಣೆಕಟ್ಟು ನೋಡಿದಾಗ ನನ್ನ ಹೊಟ್ಟೆ ಉರಿಯುತ್ತಿದೆ. ಈ ಸರ್ಕಾರದ ವೈಫಲ್ಯವನ್ನು ಜನರು ಕ್ಷಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮಳೆ ಕೊರತೆಯಾಗಲಿದೆ ಎನ್ನುವುದು ಜೂನ್ ತಿಂಗಳಲ್ಲೇ ಗೊತ್ತಿತ್ತು. ಆದರೂ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿಲ್ಲ. 

ಕಾವೇರಿ ಅಚ್ಚುಕಟ್ಟಿನ ನಾಲ್ಕು ಜಲಾಶಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಿಲ್ಲ. ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕೆ ವಿಳಂಬ ಮಾಡಿದ್ದಾರೆ ಎಂದು ದೂರಿದರು. ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಐಸಿಸಿ ಸಭೆಯನ್ನು ಆಗಸ್ಟ್ ತಿಂಗಳಲ್ಲಿ ಕರೆದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ಸಮರ್ಥವಾಗಿ ವಾದ ಮಂಡಿಸಲಿಲ್ಲ. 37 ಟಿಎಂಸಿ ನೀರಿನ ಬದಲಾಗಿ 62 ಟಿಎಂಸಿ ನೀರು ಬಳಕೆ ಮಾಡಿದ್ದಾರೆ. ಹೆಚ್ಚುವರಿ ಬೆಳೆಗೂ ನೀರು ಕೇಳುತ್ತಿದ್ದಾರೆ. ಅವರು ಕೇಳಿದ್ದಕ್ಕಿಂದ ಕಡಿಮೆ ನೀರು ಬಿಟ್ಟಿದ್ದೇವೆ ಎಂದು ಸಿಎಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಮೂದಲಿಸಿದರು.

ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿಯಿದ್ದು, ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಡಲಿ: ಚಲುವರಾಯಸ್ವಾಮಿ

ಸುಪ್ರೀಂ ಕೋರ್ಟ್ ಆದೇಶದ ಬಳಿಕ ನೀರು ಬಿಟ್ಟಿದ್ದರೆ ಇನ್ನೂ ಹೆಚ್ಚಿನ ನೀರು ಉಳಿಸಬಹುದಿತ್ತು. ವಾಸ್ತವಾಂಶ ಮರೆಮಾಚಿ ನೀರು ಬಿಟ್ಟಿದ್ದಾರೆ. ನೀರಿನ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಬಾರದು ಎಂದ ಬೊಮ್ಮಾಯಿ, ರೈತರ ಬೆಳೆಗಳು ಒಣಗುತ್ತಿವೆ, ಅರೆ ಖುಷ್ಕಿ ಬೆಳೆಗಳನ್ನು ಬೆಳೆಯಿರಿ ಎಂದು ಆದೇಶ ಮಾಡುತ್ತಾರೆ. ಬೆಳೆಗಳಿಗೆ ನೀರನ್ನೇ ಕೊಡುವುದಿಲ್ಲ. ನಮ್ಮ ಹಕ್ಕಿನ ನೀರು ತಮಿಳುನಾಡಿಗೆ ಕೊಡುವ ದುಸ್ಸಾಹ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮೈಸೂರು ಮಹಾರಾಜರು ನಮ್ಮ ನಾಡಿನ ರೈತರ ಹಿತಕ್ಕಾಗಿ ಡ್ಯಾಂ ನಿರ್ಮಾಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ವಸ್ತು ಸ್ಥಿತಿ ತಿಳಿಸುವ ಕೆಲಸ ಆಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಆ ಪ್ರಯತ್ನವೇ ಆಗಿಲ್ಲ. 

ಸಿಎಂ, ಡಿಸಿಎಂ ಈ ಬಗ್ಗೆ ಗಮನ ಹರಿಸಿಲ್ಲ. ಸಿಎಂ ನೀರು ಬಿಡೋಲ್ಲ ಎಂದರೆ, ಡಿಸಿಎಂ ಪ್ರಾಧಿಕಾರದ ಆದೇಶದನ್ವಯ ನೀರು ಬಿಡುತ್ತೇವೆ ಎನ್ನುತ್ತಿದ್ದಾರೆ. ಈ ಸರ್ಕಾರದಲ್ಲಿ ಸ್ಪಷ್ಟತೆಯೇ ಇಲ್ಲ. ಇಂದು ನಾವೆಲ್ಲ ಇಲ್ಲಿಗೆ ಬರ್ತೀವಿ ಎಂದು ನೀರು ನಿಲ್ಲಿಸಿದ್ದಾರೆ ಎಂದರು. ಮೇ ಅಂತ್ಯದವರೆಗೆ ಕುಡಿಯುವ ನೀರಿಗೆ 18 ಟಿಎಂಸಿ ನೀರು ಬೇಕು. ಪ್ರಸ್ತುತ ಕೇವಲ 13 ಟಿಎಂಸಿ ಬಳಕೆಗೆ ಸಿಗುವ ನೀರಿದೆ. ಕೃಷಿಗೆ ೩೩ ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಬಿಟ್ಟಿದ್ದು ೭ ಟಿಎಂಸಿ ಮಾತ್ರ. ರೈತರ ಬೆಳೆಗಳು ಏನಾಗಬೇಕು. ಈ ಭಾಗದಲ್ಲಿ ದೊಡ್ಡ ಪ್ರಮಾಣದ ಬಹುಮತ ನಿಮಗೆ ಸಿಕ್ಕಿದೆ. ಬಹುಮತ ಕೊಟ್ಟ ಜನರಿಗೆ ನೀವು ಕೊಟ್ಟ ಬಹುಮಾನ ಇದೇನಾ ಎಂದು ಪ್ರಶ್ನಿಸಿದರು.

ಮೇಕೆದಾಟು ಬಗ್ಗೆ ಡಿಸಿಎಂ ಮಾತನಾಡುತ್ತಾರೆ. ಡಿಪಿಆರ್ ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡಿದರು. ಇವರ ಪಾದಯಾತ್ರೆ ಮಾಡಿದ ತಕ್ಷಣವೇ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆನಂತರ ಇವರು ಒಂದೇ ಒಂದು ಅರ್ಜಿ ಹಾಕಿಲ್ಲ. ಕೂಡಲೇ ಮೇಕೆದಾಟು ಬಗ್ಗೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರೈತ ಸಂಘದವರು ಕಾವೇರಿ ಹಿತರಕ್ಷಣೆಗಾಗಿ ಪ್ರಾಮಾಣಿಕ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಯಾತ್ರೆಗೆ ರೈತ ಸಂಘ ಬರಬೇಕು ಎಂಬ ಡಿಕೆಶಿ ವಾದ ಸರಿಯಲ್ಲ. ತಮಿಳುನಾಡಿಗೆ ನೀರು ಬಿಡುವ ಮುನ್ನವೇ ಸರ್ವಪಕ್ಷ ಸಭೆ ಕರೆಯುವಂತೆ ಪತ್ರ ಬರೆದಿದ್ದೆ. 

ಜಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡ ಜೆಡಿಎಸ್‌: ಸಿಎಂ ಸಿದ್ದರಾಮಯ್ಯ

ಸರ್ವ ಪಕ್ಷ ಸಭೆ ಕರೆಯಲು ನಮ್ಮ ಹೋರಾಟವೇ ಕಾರಣ. ಆದರೆ, ಪ್ರಾಧಿಕಾರದ ಆದೇಶ ಎಂದು ನೀರು ಬಿಟ್ಟಿದ್ದಾರೆ. ಹಾಗಾಗಿ ನಾವು ಹೋರಾಟಕ್ಕೆ ಧುಮುಕಬೇಕಾಯಿತು ಎಂದರು. ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್‌ಸಿಂಹ, ಮೈಸೂರು ಶಾಸಕ ಶ್ರೀವತ್ಸ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಎಸ್.ಸಚ್ಚಿದಾನಂದ, ಎಸ್‌.ಪಿ. ಸ್ವಾಮಿ, ಅಶೋಕ್‌ ಜಯರಾಂ, ಡಾ.ಇಂದ್ರೇಶ್, ಎಚ್.ಆರ್.ಅರವಿಂದ್, ಸಿ.ಟಿ.ಮಂಜುನಾಥ, ಕೇಶವ, ಸಿದ್ದರಾಜು, ನಾಗಾನಂದ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios