Asianet Suvarna News Asianet Suvarna News

ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್‌ ಸರ್ಕಾರ ತೊಡಗಿದೆ: ಬೊಮ್ಮಾಯಿ

ರಾಜ್ಯದಲ್ಲಿ ಒಂದು ಭಾಗದಲ್ಲಿ ಪ್ರವಾಹ, ಮತ್ತೊಂದು ಭಾಗದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸದೇ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹರಿಹಾಯ್ದರು.

Ex CM Basavaraj Bommai Slams On Congress Govt gvd
Author
First Published Jul 31, 2023, 3:00 AM IST

ಬೆಳಗಾವಿ (ಜು.31): ರಾಜ್ಯದಲ್ಲಿ ಒಂದು ಭಾಗದಲ್ಲಿ ಪ್ರವಾಹ, ಮತ್ತೊಂದು ಭಾಗದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸದೇ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹರಿಹಾಯ್ದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಒಂದು ಭಾಗದಲ್ಲಿ ಸುರಿದ ಭಾರಿ ಮಳೆಗೆ ಮನೆಗಳು ಕುಸಿದಿವೆ. ಜಾನುವಾರು ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿವೆ. ಸುಮಾರು 11 ಜಿಲ್ಲೆಗಳು ಪ್ರವಾಹ ಪರಿಸ್ಥಿತಿಯಲ್ಲಿವೆ. ಉಳಿದ ಜಿಲ್ಲೆಗಳು ಬರ ಪರಿಸ್ಥಿತಿಯಲ್ಲಿವೆ. 

ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್‌ ಹೊರತುಪಡಿಸಿ ಯಾವುದೇ ಕ್ರಮಕೈಗೊಂಡಿಲ್ಲ. ಈ ಸರ್ಕಾರ ಸಂಪೂರ್ಣ ವರ್ಗಾವಣೆ ದಂಧೆಯಲ್ಲೇ ತೊಡಗಿದೆ. ವರ್ಗಾವಣೆ ದಂಧೆ ಯಲ್ಲಿ ಚೌಕಾಸಿ ನಡೆಯುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು. ಸರ್ಕಾರ ಬೆಳೆಹಾನಿ ಪ್ರಾಥಮಿಕ ಸಮೀಕ್ಷೆಯನ್ನೂ ಮಾಡಿಲ್ಲ. ಅತಿವೃಷ್ಟಿಯಿಂದ ಜೀವ ಹಾನಿ ಸಂಭವಿಸಿದ್ದರೂ ಇತ್ತ ಗಮನಹರಿಸುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಒಬ್ಬ ಸಚಿವರೂ ಭೇಟಿ ನೀಡಿಲ್ಲ. 

ಈ ಬಾರಿ ಮೈಸೂರಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಮಹದೇವಪ್ಪ

ಅದೇ ರೀತಿ ಬರಪೀಡಿತ ಪ್ರದೇಶಗಳಲ್ಲಿ ಇತರೆ ಬೆಳೆ ಬೆಳೆಯಲು ಬಿತ್ತನೆ ಬೀಜ, ​ಗೊಬ್ಬರ ನೀಡುತ್ತಿಲ್ಲ. ಸರ್ಕಾರ ಕೇವಲ ರಾಜಕೀಯ ಮಾಡುತ್ತಿದೆ. ಸರ್ಕಾರದಲ್ಲಿ ಇರುವವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆದರೆ, ಇತ್ತ ಸಚಿವ- ಶಾಸಕರ ನಡುವೆ ಸಮರ ಬಗೆಹರಿಸುವಲ್ಲೇ ಮುಖ್ಯಮಂತ್ರಿ ಸಮಯ ಕಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಸಂಕಷ್ಟದಲ್ಲಿ ಸಿಲುಕಿಕೊಂಡ ರಾಜ್ಯದ ಜನರ ನೆರವಿಗೆ ಸರ್ಕಾರ ಧಾವಿಸಿ, ಮನೆ ಕಳೆದುಕೊಂಡವರಿಗೆ ಕೂಡಲೇ .10 ಸಾವಿರ ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕರು, ಸಚಿವರ ಮಧ್ಯೆ ಸಮನ್ವಯತೆಯೇ ಇಲ್ಲ: ಸಂಕಷ್ಟದಲ್ಲಿರುವ ರೈತರಿಗೆ ನೈತಿಕಸ್ಥೈರ್ಯ ಹೇಳುವುದನ್ನು ಬಿಟ್ಟು ರಾಜ್ಯಸರ್ಕಾರ ಸಿಎಲ್‌ಪಿ ಮೀಟಿಂಗ್‌, ಸಂಪುಟದ ಗೊಂದಲದಲ್ಲಿ ಮುಳುಗಿದೆ. ಕಾಂಗ್ರೆಸ್‌ ಸರ್ಕಾರದ ಸಚಿವರು ಹಾಗೂ ಶಾಸಕರ ನಡುವೆಯೇ ಸಮನ್ವಯತೆ ಇಲ್ಲ. ಸ್ವತಃ ಮುಖ್ಯಮಂತ್ರಿಗಳೇ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಲ…ಪಿ ಮೀಟಿಂಗ್‌ ಅವರ ಆಂತರಿಕ ವಿಚಾರ. 

ಆದರೆ, ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಸಿಎಂ ಆಯ್ಕೆ ಮಾಡೋದ್ರಿದ ಹಿಡಿದು ಎಲ್ಲದರಲ್ಲೂ ಸರ್ಕಾರ ಗೊಂದಲದಲ್ಲಿದೆ.  ಶಾಸಕರು, ಮಂತ್ರಿಗಳ ನಡುವೆ ಸಮನ್ವಯತೆಯೇ ಇಲ್ಲ. ಒಟ್ಟಾರೆ ಇಡೀ ಸರ್ಕಾರವೇ ಗೊಂದಲದಲ್ಲಿದೆ ಎಂದು ವ್ಯಂಗ್ಯವಾಡಿದರು. ಇನ್ನು, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾವೇರಿಗೆ ಬಂದಾಗ ಕೆಲವು ಸೂಚ್ಯಂಕದಲ್ಲಿ ಹಾವೇರಿ ಹಿಂದಿದೆ ಎಂದಿದ್ದಾರೆ. ಕಳೆದ 5 ವರ್ಷದ ಹಿಂದಿನ ವರದಿ ಈಗ ಬಂದಿದೆ. ನಾನು ಸಿಎಂ ಆಗಿದ್ದಾಗ ಆರೋಗ್ಯ, ಶಿಕ್ಷಣಕ್ಕೆ ದಾಖಲೆ ಪ್ರಮಾಣದ ಹಣ ಕೊಟ್ಟಿದ್ದೇನೆ. 2013ರಲ್ಲಿ ಮೆಡಿಕಲ್‌ ಕಾಲೇಜು ಗದಗಿಗೆ ಸ್ಥಳಾಂತರ ಮಾಡಿದ್ದೀರಿ. 

ಟೋಲ್‌ ಸಂಗ್ರಹಿಸುವವರು ನಾವಲ್ಲ, ಹೆದ್ದಾರಿ ಪ್ರಾಧಿಕಾರದವರು: ಸಿದ್ದರಾಮಯ್ಯ

ಜಿಲ್ಲೆಗೆ ಮೆಡಿಕಲ್‌ ಕಾಲೇಜು ಕೊಡಲಿಕ್ಕೆ ನಾವೇ ಬರಬೇಕಾಯಿತು. ಯಡಿಯೂರಪ್ಪ ಮೆಡಿಕಲ್‌ ಕಾಲೇಜಿಗೆ ಅನುಮೋದನೆ ಕೊಟ್ಟರು. ಸಿದ್ದರಾಮಯ್ಯ ಕಾಲದಲ್ಲಿ ಕಾಲೇಜಿಗೆ ಒಂದು ನಯಾ ಪೈಸಾ ಕೊಡಲಿಲ್ಲ ಅನುದಾನ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು. ಒಟ್ಟಾರೆ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ‍್ಯ ನಿಲ್ಲಿಸದಿದ್ದರೆ ಎಲ್ಲಾ ಸೂಚ್ಯಂಕದಲ್ಲೂ ಹಾವೇರಿ ಅಭಿವೃದ್ಧಿಯಾಗಲಿದೆ ಎಂದರಲ್ಲದೆ, ಮೆಡಿಕಲ್‌ ಕಾಲೇಜು ನಿರ್ಮಾಣ ಪ್ರಕರಣ ಎಸ್‌ಐಟಿಗೆ ಕೊಡುತ್ತೇವೆ ಎಂದಿದ್ದಾರೆ ದಯವಿಟ್ಟು ಕೊಡಲಿ. ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

Follow Us:
Download App:
  • android
  • ios