1978ರಲ್ಲಿ ಬಂಡೆದ್ದು ಸಿಎಂ ಆಗಿದ್ದ ಪವಾರ್‌

1977ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹೀನಾಯ ಸೋಲುಕಂಡರು. ಈ ವೇಳೆ ಜನತಾ ಪಕ್ಷದ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಈ ವೇಳೆ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಕಡಿಮೆ ಸ್ಥಾನದ ಹೊಣೆ ಹೊತ್ತು ಅಂದಿನ ಮುಖ್ಯಮಂತ್ರಿ ಶಂಕರರಾವ್‌ ಚವಾಣ್‌ ರಾಜೀನಾಮೆ ನೀಡಿದರು. ಅವರ ಸ್ಥಾನಕ್ಕೆ ವಸಂತದಾದಾ ಪಾಟೀಲ್‌ ಬಂದರು. ಅದೇ ವರ್ಷ ಕಾಂಗ್ರೆಸ್‌ ವಿಭಜನೆಯಾಗಿ ಕಾಂಗ್ರೆಸ್‌ (ಯು) ಎಂಬ ಹೊಸ ಪಕ್ಷ ಅಸ್ತಿತ್ವಕ್ಕೆ ಬಂತು.

ಕಾಂಗ್ರೆಸ್‌ (ಯು) ಬಣಕ್ಕೆ ಪವಾರ್‌ ಅವರ ರಾಜಕೀಯ ಗುರು ಯಶವಂತರಾವ್‌ ಚವಾಣ್‌ ಅಧ್ಯಕ್ಷರಾದರು. ಕಾಂಗ್ರೆಸ್‌ (ಐ) ಪಕ್ಷಕ್ಕೆ ಇಂದಿರಾ ಗಾಂಧಿ ಅಧ್ಯಕ್ಷೆಯಾದರು. ಪವಾರ್‌ ಅವರು ಕಾಂಗ್ರೆಸ್‌ (ಯು) ಸೇರಿಕೊಂಡರು. ಆಗ 1978ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತ ಗಳಿಸಲಿಲ್ಲವಾದರೂ ಹೆಚ್ಚು ಸ್ಥಾನ ಪಡೆಯಿತು. ಆಗ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ವಸಂತದಾದಾ ಪಾಟೀಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ (ಯು) ಹಾಗೂ ಕಾಂಗ್ರೆಸ್‌ (ಐ) ಬಣಗಳು ಒಂದಾಗಿ ಸರ್ಕಾರ ರಚಿಸಿದವು. ಅದರಲ್ಲಿ ಪವಾರ್‌ ಮಂತ್ರಿಯಾದರು.

ಆದರೆ 1978ರ ಜುಲೈನಲ್ಲಿ ಪವಾರ್‌ ಅವರು ಕಾಂಗ್ರೆಸ್‌ (ಯು) ವಿರುದ್ಧವೇ ಬಂಡೆದ್ದು, ತಮ್ಮ ವಿರೋಧಿಯಾದ ಜನತಾ ಪಕ್ಷದ ಜತೆ ಕೈಜೋಡಿಸಿದರು. ಆಗ 38 ವಯಸ್ಸಿನವರಾಗಿದ್ದ ಪವಾರ್‌ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ, ರಾಜ್ಯದ ಕಿರಿಯ ಸಿಎಂ ಎನ್ನಿಸಿಕೊಂಡರು. ಆದರೆ 1980ರಲ್ಲಿ ಇಂದಿರಾ ಮತ್ತೆ ಅಧಿಕಾರಕ್ಕೆ ಬಂದ ನಂತರ ಪವಾರ್‌ ಸರ್ಕಾರ ವಜಾಗೊಂಡಿತು.

ಇದೆಂದೂ ಕಾಣದ ರಾಜಕೀಯ ಶಿವನೇ: ಮತ್ತಿಬ್ಬರು ಎನ್‌ಸಿಪಿ ಶಾಸಕರನ್ನು ಕರೆತಂದ ಶಿವಸೇನೆ!

1995ರಲ್ಲಿ ಮಾವ ಎನ್‌ಟಿಆರ್‌ ವಿರುದ್ಧವೇ ನಾಯ್ಡು ಬಂಡಾಯ

ತೆಲುಗುದೇಶಂ ಪಕ್ಷದ ಸಂಸ್ಥಾಪಕ ಎನ್‌.ಟಿ. ರಾಮರಾವ್‌ ಅವರ ವಿರುದ್ಧ 1995ರಲ್ಲಿ ಅವರ ಅಳಿಯನೇ ಬಂಡೆದ್ದು ಸರ್ಕಾರ ಕೆಡವಿದ್ದು ಇಲ್ಲಿ ಗಮನಾರ್ಹ.

ಎನ್‌ಟಿಆರ್‌ ಅವರು ತಮ್ಮ ಇಳಿವಯದಲ್ಲೂ ಲಕ್ಷ್ಮಿ ಶಿವಪಾರ್ವತಿ ಎಂಬುವರನ್ನು ಮದುವೆ ಆಗುವುದಾಗಿ ಘೋಷಿಸಿದರು. ಇದು ಅವರ ಅಳಿಯನಾಗಿದ್ದ ಪಕ್ಷದ ಹಿರಿಯ ಮುಖಂಡ ಚಂದ್ರಬಾಬು ನಾಯ್ಡು ಅವರಿಗೆ ಕೋಪ ತಂದಿತು. ಪಕ್ಷದ ಮೇಲೆ ಶಿವಪಾರ್ವತಿ ಹಿಡಿತ ಸಾಧಿಸಬಹುದು ಎಂಬ ಆತಂಕ ನಾಯ್ಡುಗೆ ಇತ್ತು.

ಅದಕ್ಕೆಂದೇ ನಾಯ್ಡು ಅವರು ತಮ್ಮ ಮಾವನ ವಿರುದ್ಧವೇ ಬಂಡೆದ್ದರು. 219 ತೆಲುಗುದೇಶಂ ಶಾಸಕರ ಪೈಕಿ ಎನ್‌ಟಿಆರ್‌ ಜತೆ ಕೇವಲ 28 ಶಾಸಕರು ಮಾತ್ರ ಉಳಿದರು. ಹೀಗಾಗಿ ಎನ್‌ಟಿಆರ್‌ ತಮ್ಮ ಸ್ಥಾನ ತ್ಯಜಿಸಿದರು. ವಿಶೇಷವೆಂದರೆ ಎನ್‌ಟಿಆರ್‌ ಅವರ ದೊಡ್ಡ ಅಳಿಯ ದಗ್ಗುಬಾಟಿ ವೆಂಕಟೇಶ್ವರ ರಾವ್‌ ಹಾಗೂ ಎನ್‌ಟಿಆರ್‌ ಅವರ ಮಕ್ಕಳಾದ ಹರಿಕೃಷ್ಣ ಮತ್ತು ಬಾಲಕೃಷ್ಣ ಕೂಡ ನಾಯ್ಡುಗೆ ಬೆಂಬಲ ನೀಡಿದರು.

ಈ ಹಂತದಲ್ಲಿ ತಮ್ಮದೇ ನಿಜವಾದ ತೆಲುಗುದೇಶಂ ಪಕ್ಷ ಎಂದು ಘೋಷಿಸಿಕೊಂಡ ಚಂದ್ರಬಾಬು ನಾಯ್ಡು, 1995ರ ಸೆ.1ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಗೆ ಎನ್‌ಟಿಆರ್‌ ರಾಜಕೀಯ ಯುಗ ಅಂತ್ಯವಾಯಿತು.

2006ರಲ್ಲಿ ತಂದೆ ವಿರುದ್ಧವೇ ಎಚ್‌ಡಿಕೆ ರೆಬೆಲ್‌

2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಹೋದಾಗ ಕರ್ನಾಟಕದಲ್ಲಿ ಜೆಡಿಎಸ್‌ ಜತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿತು. ಆಗ ಧರ್ಮಸಿಂಗ್‌ ಮುಖ್ಯಮಂತ್ರಿಯಾದರು. ಆದರೆ 2006ರಲ್ಲಿ ಧರಂ ಸರ್ಕಾರದ ವಿರುದ್ಧ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಬಣ ಬಂಡಾಯವೆದ್ದಿತು. 42 ಜೆಡಿಎಸ್‌ ಶಾಸಕರೊಂದಿಗೆ ಕುಮಾರಸ್ವಾಮಿ ಅವರು, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. ಕುಮಾರಸ್ವಾಮಿ ಬಂಡೆದ್ದು ಬಿಜೆಪಿ ಜತೆ ಸೇರಿಕೊಂಡಿದ್ದು ಅವರ ತಂದೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೇ ಆಘಾತ ತಂದಿತ್ತು. ಆದರೆ 2007ರಲ್ಲಿ ಎಚ್‌ಡಿಕೆ ಸರ್ಕಾರ ಪತನಗೊಂಡಿತು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು