ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ: ಸಿದ್ದರಾಮಯ್ಯ
ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ, ಅಂತಿಮ ತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ನ.29): ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ, ಅಂತಿಮ ತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಮುನಿಸಿಪಾಲಿಕಾ-2023 ಉದ್ಘಾಟನೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತನಿಖೆಗೆ ನೀಡಿರುವ ಅನುಮತಿ ಕಾನೂನು ಬಾಹಿರವಾಗಿದ್ದು, ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿದರು. ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅಸಮಾಧಾನಗೊಂಡಿರುವ ಬಗ್ಗೆ, ‘ನಿಗಮ-ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ಯಾರ ಅಭಿಪ್ರಾಯವನ್ನು ಪಡೆಯಲಾಗಿಲ್ಲ’ ಎಂದಷ್ಟೇ ಹೇಳಿದರು.
ಇಂದು ಹಾವೇರಿಗೆ ಸಿಎಂ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದು, ಕನಕ ಜಯಂತಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಹೊರಟು, 11:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 11:35ಕ್ಕೆ ಹೊರಟು ಮಧ್ಯಾಹ್ನ 12:10ಕ್ಕೆ ಕಾಗಿನೆಲೆ ಹೆಲಿಪ್ಯಾಡ್‌ಗೆ ಆಗಮಿಸುವರು.
ಮಹಡಿ ಕಟ್ಟಿ 1ಕ್ಕಷ್ಟೇ ತೆರಿಗೆ ಕಟ್ಟಿದರೆ ನಡೆಯಲ್ಲ: ಡಿಕೆಶಿ ಖಡಕ್ ಎಚ್ಚರಿಕೆ
ಶ್ರೀಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ಆಯೋಜಿಸಿರುವ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರ ಲಿಂಗೇಶ್ವರ ಮತ್ತು ಮಹಾಸಿದ್ದೇಶ್ವರಿ ದೇವರ ಕುಂಭಾಭಿಷೇಕ ಹಾಗೂ 536ನೇ ಶ್ರೀ ಕನಕ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಹುಬ್ಬಳ್ಳಿಗೆ ತೆರಳುವರು. ಮಧ್ಯಾಹ್ನ 1:54ಕ್ಕೆ ಕಾಗಿನೆಲೆಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಕದರಮಂಡಲಗಿ ಗ್ರಾಮಕ್ಕೆ ತೆರಳಿ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸುವರು. ನಂತರ ಮಧ್ಯಾಹ್ನ ೩.೪೫ಕ್ಕೆ ಕಾಗಿನೆಲೆ ಹೆಲಿಪ್ಯಾಡ್‌ಗೆ ಆಗಮಿಸಿ, ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.