ನೆರೆ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಮೇಯಿಸಲು ಮಾತ್ರ ಕಡಿವಾಣ ಹಾಕಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರು (ಜು.25): ಅರಣ್ಯ ಹಕ್ಕು ಕಾಯ್ದೆ ಅಡಿ ಅರಣ್ಯ ವಾಸಿಗಳು , ಬುಡಕಟ್ಟು ಸಮುದಾಯದವರು ಮತ್ತು ಸ್ಥಳೀಯರು ತಮ್ಮ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸಲು ಅವಕಾಶವಿದೆ. ಆದರೆ, ನೆರೆ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಮೇಯಿಸಲು ಮಾತ್ರ ಕಡಿವಾಣ ಹಾಕಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮೇವಿಗಾಗಿ ಅರಣ್ಯದೊಳಗೆ ಜಾನುವಾರುಗಳನ್ನು ಕಳುಹಿಸುವುದನ್ನು ನಿಷೇಧಿಸುವ ಆದೇಶ ಕುರಿತ ಗೊಂದಲಕ್ಕೆ ಸಂಬಂಧಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶ ಮತ್ತು ಸಾಕುಪ್ರಾಣಿಗಳನ್ನು ಮೇವಿಗಾಗಿ ಬಿಡುವುದಕ್ಕೆ ಅವಕಾಶವಿಲ್ಲ. ರಾಜ್ಯದ ಕೆಲ ಅರಣ್ಯ ಭಾಗದಲ್ಲಿ ಹಲವು ವರ್ಷಗಳಿಂದ ಅಂಥ ರೂಢಿಯಿದ್ದು, ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅದರಂತೆ ತಮ್ಮ ಪಟ್ಟಾ ಜಮೀನಿನಲ್ಲಿ ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ಹಂತಹಂತವಾಗಿ ಅರಣ್ಯದಲ್ಲಿ ಜಾನುವಾರುಗಳನ್ನು ಬಿಡದಂತೆ ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಸುಮಾರು 33 ಸಾವಿರ ಜಾನುವಾರುಗಳಿವೆ ಎಂದು ಪಶುಸಂಗೋಪನಾ ಇಲಾಖೆಯ ಅಂಕಿ-ಅಂಶದಿಂದ ಬಹಿರಂಗವಾಗಿದೆ. ಅಷ್ಟು ಪ್ರಮಾಣದ ಜಾನುವಾರುಗಳನ್ನು ಒಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವುದರಿಮದ ವನ್ಯಜೀವಿಗಳಿಗೆ ಮೇವಿನ ಕೊರತೆ, ನೀರಿನ ಕೊರತೆ ಎದುರಾಗುತ್ತದೆ. ಜತೆಗೆ ಜಾನುವಾರುಗಳಲ್ಲಿನ ಕಾಲುಬಾಯಿ ರೋಗ, ಚರ್ಮಗಂಟು, ನೆರಡಿ ಸೇರಿ ಇನ್ನಿತರ ಸಾಂಕ್ರಾಮಿಕ ರೋಗಗಳು ವನ್ಯಜೀವಿಗಳಿಗೂ ಹರಡುವ ಅಪಾಯವಿದೆ. ಆ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕಾಡಿಗೆ ಮೇವಿಗಾಗಿ ಬಿಡುವುದನ್ನು ನಿಷೇಧಿಸಲು ಸೂಚಿಸಲಾಗಿದೆ. ಆದರೆ, ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕು ಪಡೆದವರಿಗೆ ಹಾಗೂ ಸ್ಥಳೀಯರ ಜಾನುವಾರುಗಳಿಗೆ ಅದರಿಂದ ವಿನಾಯ್ತಿ ನೀಡಲಾಗುವುದು ಎಂದಿದ್ದಾರೆ.
ಮದ್ರಾಸ್ ಹೈಕೋರ್ಟ್ ಆದೇಶದಂತೆ ತಮಿಳುನಾಡಿನ ಅರಣ್ಯಗಳಲ್ಲಿ ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಅಲ್ಲಿನ ಸಾವಿರಾರು ಜಾನುವಾರುಗಳನ್ನು ನಮ್ಮ ರಾಜ್ಯದ ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಇದರಿಂದ ಕಾಡಿನಲ್ಲಿ ಹುಲ್ಲುಗಾವಲು ಬರಿದಾಗುತ್ತಿದ್ದು, ಸಸ್ಯ ಸಂವರ್ಧನೆಗೂ ಅಡ್ಡಿಯಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವೂ ಹೆಚ್ಚುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
