ಭೋಪಾಲ್‌[ಮಾ.11]: ಜ್ಯೋತಿರಾದಿತ್ಯ ಸಿಂಧಿಯಾ 18 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದವರು. ಅವರ ತಂದೆ ಮಾಧವರಾವ್‌ ಸಿಂಧಿಯಾ, ಬಿಜೆಪಿಯ ಮೂಲ ಪಕ್ಷವಾದ ಜನಸಂಘದಲ್ಲಿ ಮೊದಲು ಇದ್ದರೂ ಕೂಡ ನಂತರ ಬಹುವರ್ಷ ಕಾಂಗ್ರೆಸ್‌ನಲ್ಲೇ ಇದ್ದರು. 2001ರಿಂದ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ ಆಗಿದ್ದ ಜ್ಯೋತಿರಾದಿತ್ಯ ಈಗ ತಾವು ಕಟುನುಡಿಗಳನ್ನು ಆಡುತ್ತಿದ್ದ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಸಿಂಧಿಯಾ ಅವರದು ಮಧ್ಯಪ್ರದೇಶದ ಗ್ವಾಲಿಯರ್‌ನ ಮರಾಠಾ ರಾಜಮನೆತನ. ಜ್ಯೋತಿರಾದಿತ್ಯ ಅವರಿಗೆ ಇಬ್ಬರು ಚಿಕ್ಕಮ್ಮಂದಿರು. ಒಬ್ಬರು ವಸುಂಧರಾರಾಜೇ ಹಾಗೂ ಇನ್ನೊಬ್ಬರು ಯಶೋಧರಾರಾಜೇ. ಇಬ್ಬರೂ ಬಿಜೆಪಿಯಲ್ಲಿದ್ದಾರೆ. ವಸುಂಧರಾರಾಜೇ ಅವರ ತಾಯಿ ವಿಜಯರಾಜೇ ಸಿಂಧಿಯಾ ಕೂಡ ಬಿಜೆಪಿಯ ಸಂಸ್ಥಾಪಕ ಮುಖಂಡರಲ್ಲೊಬ್ಬರು. ವಸುಂಧರಾ ರಾಜೇ ಅವರ ಪುತ್ರ ದುಷ್ಯಂತ್‌ ಬಿಜೆಪಿ ಮುಖಂಡ.

ಸಿಂಧಿಯಾ ರಾಜೀನಾಮೆ : ಬಿಜೆಪಿಗೆ ಸೇರ್ಪಡೆ?

ಈ ರೀತಿ ಸಂಪೂರ್ಣ ಬಿಜೆಪಿ ಮುಖಂಡರನ್ನೇ ಸುತ್ತುವರಿದ ಕುಟುಂಬದಲ್ಲಿ ಇದ್ದವರು ಜ್ಯೋತಿರಾದಿತ್ಯ. 2002ರಿಂದ 2019ರವರೆಗೆ ಗುಣಾ ಕ್ಷೇತ್ರದ ಸಂಸದರಾಗಿದ್ದ ಅವರು, 2012ರಿಂದ 2014ರವರೆಗೆ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವರಾಗಿದ್ದರು. ಪ್ರಖರ ವಾಗ್ಮಿಯಾಗಿರುವ ಅವರು ಬಿಜೆಪಿಯನ್ನು ಹರಿತ ಶಬ್ದಗಳಲ್ಲಿ ಟೀಕಿಸುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಉತ್ತರಪ್ರದೇಶ ಕಾಂಗ್ರೆಸ್‌ ಪ್ರಭಾರಿ ಕೂಡ ಆಗಿದ್ದರು. ಆದರೆ ಕಮಲ್‌ನಾಥ್‌ ಜತೆಗಿನ ವಿರಸದಿಂದ ಇತ್ತೀಚೆಗೆ ಮಧ್ಯಪ್ರದೇಶ ಕಾಂಗ್ರೆಸ್‌ನಿಂದ ದೂರವಾಗತೊಡಗಿದ್ದರು.

ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಸಿಂಧಿಯಾ ಉಚ್ಛಾಟನೆ!