ಬೆಂಗಳೂರು[ಫೆ.26]: ಚುನಾವಣಾ ತಂತ್ರಗಾರಿಕೆಗಳ ನಿಪುಣ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್‌ ಕಿಶೋರ್‌ ಅವರನ್ನು ಜೆಡಿಎಸ್‌ ಬಲವರ್ಧನೆಗಾಗಿ ಕರೆತರಲು ಚಿಂತನೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದಾರೆ.

ಮುಂಬರುವ 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಬಲಗೊಳಿಸಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಶಾಂತ್‌ ಕಿಶೋರ್‌ ಅವರ ರಣತಂತ್ರವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಹೊಸ ಪ್ರಯೋಗಕ್ಕೆ ಕುಮಾರಸ್ವಾಮಿ ಒಲವು ವ್ಯಕ್ತಪಡಿಸಿದ್ದಾರೆ. ಪ್ರಶಾಂತ್‌ ಕಿಶೋರ್‌ ಜತೆ ಮಾತುಕತೆ ನಡೆಸಿರುವ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರೇ ಮಾಹಿತಿಯನ್ನೂ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಗೆ ಚುನಾವಣಾ ತಂತ್ರಗಾರಿಕೆ ರೂಪಿಸುವ ಸಂಬಂಧ ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಅವರೊಂದಿಗೆ ಪ್ರಾಥಮಿಕ ಹಂತದ ಚರ್ಚೆಯಾಗಿದೆ. ಮುಂದಿನ ದಿನದಲ್ಲಿ ಅವರಿಂದ ಸಲಹೆ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿಖಿಲ್‌ ಮದುವೆಗೆ ಮೋದಿಗೆ ಆಹ್ವಾನ

ಪುತ್ರ ನಿಖಿಲ್‌ ಕುಮಾರಸ್ವಾಮಿ ವಿವಾಹ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ರಾಮನಗರದಲ್ಲಿ ಮದುವೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮದುವೆ ಆಮಂತ್ರಣ ವಿತರಣೆ ಮಾಡುವ ಕೆಲಸ ಇನ್ನೂ ಪ್ರಾರಂಭಿಸಿಲ್ಲ. ಎಲ್ಲ ಗಣ್ಯರನ್ನೂ ಮದುವೆಗೆ ಆಹ್ವಾನಿಸಲಾಗುವುದು. ಸಾಧ್ಯವಾದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಆಹ್ವಾನಿಸಲಾಗುವುದು ಎಂದು ತಿಳಿಸಿದರು.