Asianet Suvarna News Asianet Suvarna News

Lok Sabha Election: ರಾಜ್ಯದಲ್ಲಿ 5.3 ಕೋಟಿ ಮತದಾರರು, ಮಹಿಳೆಯರೇ ಹೆಚ್ಚು!

ಲೋಕಸಭೆ ಚುನಾವಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಿದ್ಧತೆ ಕೈಗೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿದೆ. ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟು 5.33 ಕೋಟಿ ಮತದಾರರಿದ್ದಾರೆ.

Election Commission Publishes Draft List Of 5 3 Crore Voters For 2024 Lok Sabha Elections gvd
Author
First Published Oct 28, 2023, 4:00 AM IST

ಬೆಂಗಳೂರು (ಅ.28): ಲೋಕಸಭೆ ಚುನಾವಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಿದ್ಧತೆ ಕೈಗೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿದೆ. ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟು 5.33 ಕೋಟಿ ಮತದಾರರಿದ್ದಾರೆ. ಈ ನಡುವೆ, ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಲು ಅವಕಾಶ ನೀಡಲಾಗಿದ್ದು, ಶುಕ್ರವಾರದಿಂದ ಡಿ.9 ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 2024ರ ಜ.5ರಂದು ಪ್ರಕಟಿಸಲಾಗುವುದು. 

ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ 5.33 ಕೋಟಿ ಮತದಾರರಿದ್ದಾರೆ. ಈ ಪೈಕಿ 2.56 ಕೋಟಿ ಪುರುಷ ಮತದಾರರಿದ್ದರೆ, 2.52 ಕೋಟಿ ಮಹಿಳಾ ಮತದಾರರಿದ್ದಾರೆ. 4,896 ಇತರೆ ಮತದಾರರಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 7.06 ಲಕ್ಷ ಮತದಾರರಿದ್ದು, ಅತಿ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು ಆತಿ ಕಡಿಮೆ 1.66 ಲಕ್ಷ ಮತದಾರರಿರುವ ಕ್ಷೇತ್ರವಾಗಿದೆ ಎಂದರು.

ಹುಲಿ ಉಗುರು ನಕಲಿ, ಅಸಲಿ ಎಂದು ನಮಗೆ ಗೊತ್ತಾಗಲ್ಲ: ಮಧು ಬಂಗಾರಪ್ಪ

ಹೆಸರು ಸೇರಿಸಲು ವಿಶೇಷ ಅಭಿಯಾನ: ಮತದಾರರು ಹೊಸದಾಗಿ ನೋಂದಣಿ ಮಾಡಲು, ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಚುನಾವಣಾ ಆಯೋಗವು ನ.18, 19, ಡಿ.2, 3 ರಂದು ನಾಲ್ಕು ದಿನಗಳ ಕಾಲ ವಿಶೇಷ ಅಭಿಯಾನ ಕೈಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ ಹೇಳಿದ್ದಾರೆ. ಕರಡುಪಟ್ಟಿ ಪ್ರಕಾರ ಯುವ ಮತದಾರರು 13.45 ಲಕ್ಷ ಮತದಾರರು, 80 ವರ್ಷ ಮೇಲ್ಪಟ್ಟ ಮತದಾರರು 11.76 ಲಕ್ಷ ಮತದಾರರಿದ್ದಾರೆ. ಸಾಗರೋತ್ತರ ಮತದಾರರು 3,055, ವಿಕಲಚೇತನ ಮತದಾರರು 5.66 ಲಕ್ಷ ಮತದಾರರು ಇದ್ದಾರೆ. ಇನ್ನು, ಮತಕೇಂದ್ರಗಳ ಸಂಖ್ಯೆ 58,834ಗೆ ಏರಿಕೆಯಾಗಿವೆ. ಆ ಮೂಲಕ 2023ನೇ ಸಾಲಿಗಿಂತ ಈ ಬಾರಿ 552 ಮತಗಟ್ಟೆ ಹೆಚ್ಚಳವಾಗಿದೆ ಎಂದು ವಿವರಿಸಿದರು.

3.89 ಲಕ್ಷ ಮತದಾರರ ಹೆಸರು ತೆಗೆದುಹಾಕಲಾಗಿದೆ: ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 3,89,353 ಹೆಸರು ತೆಗೆದು ಹಾಕಲಾಗಿದೆ. 6.02 ಲಕ್ಷ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. 6.39 ಲಕ್ಷ ಮತದಾರರ ಹೆಸರನ್ನು ತಿದ್ದುಪಡಿ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ, ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಿಸಲು ಮತ್ತು ಎಲ್ಲಾ ಅರ್ಹ ಮತದಾರರನ್ನು ನೋಂದಾಯಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ಆರ್‌.ವೆಂಕಟೇಶ್‌ ಕುಮಾರ್‌, ಎಂ.ಕೂರ್ಮಾರಾವ್‌ ಉಪಸ್ಥಿತರಿದ್ದರು.

115 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು: ಕರಡು ಮತದಾರರ ಪಟ್ಟಿ ಪ್ರಕಾರ ರಾಜ್ಯದ 224 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಮಹಿಳೆಯ ಮತದಾರರ ಹೆಚ್ಚಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ ತಿಳಿಸಿದ್ದಾರೆ. ಮತದಾರರ ಪಟ್ಟಿಯ ಪ್ರಕಾರ ಲಿಂಗಾನುಪಾತದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಅತಿ ಹೆಚ್ಚು ಅಂದರೆ 1,092 ಮಹಿಳಾ ಮತದಾರರು ಇದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 859 ಮಹಿಳಾ ಮತದಾರರು ಲಿಂಗಾನುಪಾತ ಹೊಂದಿದೆ. ಕರಡು ಮತದಾರರ ಪಟ್ಟಿ ಪ್ರಕಾರ 86 ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ ಎಂದರು.

ಅರ್ಜಿ ಸಲ್ಲಿಸುವ ವಿಧಾನ: ಪ್ರತಿ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ನೋಂದಣಾಧಿಕಾರಿ/ಸಹಾಯಕ ನೋಂದಣಾಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ನಮೂನೆ - 6, ಸಾಗರೋತ್ತರ ಭಾರತೀಯ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ ನಮೂನೆ - 6ಎ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಮತದಾರರ ಪಟ್ಟಿಯಲ್ಲಿನ ವಿವರಗಳ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಅಥವಾ ಇತರೆ 11 ದಾಖಲೆಗಳ ಮಾಹಿತಿ ಪತ್ರ ನಮೂನೆ - 6ಬಿ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಪ್ರಸ್ತಾಪಿತ ಸೇರ್ಪಡೆಯ ಆಕ್ಷೇಪಣೆಗಾಗಿ ಹೆಸರು ಅಳಿಸುವಿಕೆಗೆ ಅರ್ಜಿ ನಮೂನೆ - 7. ವಿಳಾಸವನ್ನು ಬದಲಾಯಿಸಲು / ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ / ಬದಲಿ ಮತದಾರರ ಗುರುತಿನ ಚೀಟಿಗಾಗಿ / ವಿಕಲ ಚೇತನ ಮತದಾರರನ್ನು ಗುರುತು ಮಾಡಲು ಅರ್ಜಿ ನಮೂನೆ - 8 ನ್ನು ಭರ್ತಿ ಮಾಡಿ ಸಲ್ಲಿಸಬೇಕು.

ರಾಮನಗರದ ಕುರಿತು ಎಚ್‌ಡಿಕೆಗೆ ಪರಿಜ್ಞಾನ ಇಲ್ಲ: ಡಿ.ಕೆ.ಶಿವಕುಮಾರ್‌

ಸಾರ್ವಜನಿಕರು ಅರ್ಜಿಗಳನ್ನು ಮತದಾರರ ಸೇವಾ ಪೋರ್ಟಲ್ https://voters.eci.gov.in ಅಥವಾ ವೋಟರ್ ಹೆಲ್ಪ್ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Follow Us:
Download App:
  • android
  • ios